Site icon Vistara News

Bellary Lok Sabha Constituency: ಶ್ರೀರಾಮುಲು vs ತುಕಾರಾಮ್;‌ ಗಣಿ ನಾಡಲ್ಲಿ ಯಾರು ಧಣಿ?

Bellary Lok Sabha Constituency

Bellary Lok Sabha Constituency: Fight Between B Sriramulu And E Tukaram

ಬಳ್ಳಾರಿ: ಗಣಿ ನಾಡು ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ (Bellary Lok Sabha Constituency) ಮಾಜಿ ಸಚಿವ, ಬಿಜೆಪಿಯ ಬಿ.ಶ್ರೀರಾಮುಲು (B Sriramulu) ಹಾಗೂ ಕಾಂಗ್ರೆಸ್‌ನ ಇ. ತುಕಾರಾಮ್‌ (E Tukaram) ಅವರ ಮಧ್ಯೆ ನೇರ ಪೈಪೋಟಿ ಇದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿ.ಶ್ರೀರಾಮುಲು ಅವರು ರಾಜಕೀಯ ಪುನರ್ಜನ್ಮ ಪಡೆಯಲು ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅತ್ತ, ಬಳ್ಳಾರಿಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್‌ಗೆ ಉಡುಗೊರೆ ನೀಡುವ ತವಕದಲ್ಲಿ ಇ. ತುಕಾರಾಮ್‌ ಇದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರದಲ್ಲಿ ಸಹಜವಾಗಿಯೇ ಜಾತಿ ಮತಗಳು ನಿರ್ಣಾಯಕ ಎನಿಸಿವೆ.

ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಶೇ.20ರಷ್ಟು ಪರಿಶಿಷ್ಟ ಪಂಗಡದ ಮತಗಳಿದ್ದು, ಇವುಗಳ ಮೇಲೆ ಉಭಯ ಅಭ್ಯರ್ಥಿಗಳ ಗಮನ ಹೆಚ್ಚಿದೆ. ಶ್ರೀರಾಮುಲು ಅವರಿಗೆ ನರೇಂದ್ರ ಮೋದಿ ಅವರ ಅಲೆ, ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಎಂಬ ಹಣೆಪಟ್ಟಿ, ಹಿಂದುತ್ವ, ಲಿಂಗಾಯತರು ಸೇರಿ ಹಲವು ಸಮುದಾಯಗಳ ಮತಗಳ ಭದ್ರತೆಯು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅದರಲ್ಲೂ, ಜನಾರ್ದನ ರೆಡ್ಡಿ ಅವರ ಪಕ್ಷವು ಬಿಜೆಪಿ ಜತೆ ವಿಲೀನಗೊಂಡಿರುವುದು ಶ್ರೀರಾಮುಲು ಅವರಿಗೆ ಆನೆ ಬಲ ಬಂದಂತಾಗಿದೆ.

ಇ. ತುಕಾರಾಮ್‌ ಅವರಿಗೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳೇ ಪ್ರಮುಖ ಅಸ್ತ್ರವಾಗಿವೆ. ಬಿ.ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡಿರುವ ಕಾರಣ ಪಕ್ಷದಲ್ಲಿ ಉಂಟಾಗಿರುವ ಸಣ್ಣ ಮಟ್ಟದ ಭಿನ್ನಾಭಿಪ್ರಾಯಗಳನ್ನೇ ಬಳಸಿಕೊಂಡು ತುಕಾರಾಮ್‌ ಅವರು ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್‌ನ ಅಲೆಯೂ ತಕ್ಕಮಟ್ಟಿಗಿದ್ದು, ಮುಸ್ಲಿಮರು, ಹಿಂದುಳಿದ ವರ್ಗಗಳ ಸಮುದಾಯಗಳ ಮತಗಳನ್ನು ನೆಚ್ಚಿಕೊಂಡಿದ್ದಾರೆ.

2014, 2019ರಲ್ಲಿ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ದೇವೇಂದ್ರಪ್ಪ ಅವರು ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಇನ್ನು 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌.ವೈ. ಹನುಮಂತಪ್ಪ ಅವರ ವಿರುದ್ಧ ಬಿಜೆಪಿಯ ಬಿ. ಶ್ರೀರಾಮುಲು ಅವರು ಭರ್ಜರಿ ಗೆಲುವು ಸಾಧಿಸಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಜೆ. ಶಾಂತಾ ಅವರು ಗೆಲುವು ಸಾಧಿಸಿದ್ದರು.

ಸೋನಿಯಾ ಗಾಂಧಿ vs ಸುಷ್ಮಾ ಸ್ವರಾಜ್‌

ಬಳ್ಳಾರಿ ಲೋಕಸಭೆ ಕ್ಷೇತ್ರವು ಒಂದು ಕಾಲದಲ್ಲಿ ದೇಶದಲ್ಲೇ ಯಾರೂ ಹೆಚ್ಚು ಗಮನ ಹರಿಸದ ಕ್ಷೇತ್ರ ಎಂಬಂತಿತ್ತು. ಆದರೆ, 1998ರಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್‌ ಅವರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ದೇಶದ ಮಟ್ಟದಲ್ಲಿ ಮನ್ನಣೆ ಸಿಗುವಂತಾಯಿತು. ಇಂತಹ ಕ್ಷೇತ್ರವೀಗ ಬಿಜೆಪಿ ಭದ್ರಕೋಟೆಯೇ ಎನಿಸಿದೆ. ಆದರೂ, ಕಾಂಗ್ರೆಸ್‌ ಪ್ರಬಲ ಸ್ಪರ್ಧೆ ಇದ್ದು, ಚುನಾವಣೆ ಫಲಿತಾಂಶ ಕುತೂಹಲ ಕೆರಳಿಸಿದೆ.

ಮತದಾರರ ಸಂಖ್ಯೆ

ಪುರುಷರು9.28 ಲಕ್ಷ
ಮಹಿಳೆಯರು9.54 ಲಕ್ಷ
ಲಿಂಗತ್ವ ಅಲ್ಪಸಂಖ್ಯಾತರು269
ಒಟ್ಟು18.84 ಲಕ್ಷ

ಸ್ವಾತಂತ್ರ್ಯ ಬಂದ ಬಳಿಕ ಇದುವರೆಗೆ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ 19 ಬಾರಿ ಚುನಾವಣೆ ನಡೆದಿದ್ದು, 15 ಬಾರಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಇನ್ನು ಬಿಜೆಪಿಯು 4 ಬಾರಿ ಮಾತ್ರ ಗೆಲುವು ಸಾಧಿಸಿದೆ. 2004ರಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಬಳ್ಳಾರಿಯಲ್ಲಿ ಬಿಜೆಪಿ ಬಲ ಹೆಚ್ಚಾಗಿದ್ದು, ಈಗಲೂ ಬಿಜೆಪಿ ಭದ್ರಕೋಟೆ ಎಂದೇ ಹೇಳಲಾಗುತ್ತಿದೆ. ಆದರೆ, 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್.‌ ಉಗ್ರಪ್ಪ ಗೆಲುವು ಸಾಧಿಸಿದ್ದರು. ಹಾಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಲೆಯನ್ನು ಕಡೆಗಣಿಸುವಂತಿಲ್ಲ.

ಇದನ್ನೂ ಓದಿ: Raichur Lok Sabha Constituency: ರಾಯಚೂರಿನಲ್ಲಿ ನಾಯಕರ ನಡುವಿನ ಕಾಳಗದಲ್ಲಿ ಯಾರು ರಾಜ?

Exit mobile version