ಬಳ್ಳಾರಿ/ಗದಗ: ಬಳ್ಳಾರಿಯ (Bellary News) ಮಹಾನಗರ ಪಾಲಿಕೆ ಆವರಣದಲ್ಲಿ ನಿನ್ನೆ ಗುರುವಾರ ರಾತ್ರಿ (ಜು.12) ಕ್ಷುಲ್ಲಕ ಕಾರಣಕ್ಕೆ ಪಾಲಿಕೆ ಸದಸ್ಯನ ಮೇಲೆ ಹಲ್ಲೆ (Assault Case) ನಡೆಸಲಾಗಿದೆ. ಪಾಲಿಕೆ ಸದಸ್ಯರ ಸಂಬಂಧಿ ರವಿ ಮತ್ತು ಪಾಲಿಕೆ ಸದಸ್ಯ ಕುಬೇರನ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
38ನೇ ವಾಡ್೯ನ ಪಾಲಿಕೆ ಸದಸ್ಯ ಇ. ಕುಬೇರ ಮೇಲೆ ಹಲ್ಲೆ ನಡೆದಿದೆ. 39ನೇ ವಾರ್ಡ್‌ನ ಪಾಲಿಕೆ ಸದಸ್ಯೆಯ ಮೈದುನ ಆಗಿರುವ ರವಿ, ನಿನ್ನೆ ಮೇಯರ್ ಚೇಂಬರ್‌ನಲ್ಲಿ ಕುಬೇರ್ ಜತೆಗೆ ಗಲಾಟೆ ಮಾಡಿಕೊಂಡಿದ್ದ. ಅಲ್ಲಿದ್ದವರು ಸಮಾಧಾನಪಡಿಸಿ ಎಲ್ಲರನ್ನು ಹೊರಗೆ ಕಳಿಸಿದ್ದರು.
ಇತ್ತ ಪಾಲಿಕೆಯಿಂದ ಹೊರಬರುತ್ತಿದ್ದಂತೆ ಕುಬೇರನ ಮೇಲೆ ರವಿ ಆ್ಯಂಡ್ ಗ್ಯಾಂಗ್ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಕುಬೇರ ಹಾಗೂ ನಾಗರಾಜ ಎಂಬುವವರ ಮೇಲೆ ಹಲ್ಲೆ ಮಾಡಿರುವ ವಿಡಿಯೊ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಲ್ಲೆ ಬಳಿಕ ಇ ಕುಬೇರ ಮತ್ತು ವೀರೇಂದ್ರ ವಿಮ್ಸ್‌ನ ಟ್ರಾಮಾ ಕೇರ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಟ್ರಾಮಾ ಕೇರ್‌ಗೆ ಬರುತ್ತಿದ್ದಂತೆ ಗುಂಪು ಕಟ್ಟಿಕೊಂಡು ಬಂದು ರವಿ ಗ್ಯಾಂಗ್ ಮತ್ತೆ ಕುಬೇರ, ನಾಗರಾಜು, ವೀರೇಂದ್ರ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಪಾಲಿಕೆ ಸದಸ್ಯ ಕುಬೇರನ ಕಣ್ಣು, ಹೊಟ್ಟೆ, ಬೆನ್ನು, ಕೈ ಭಾಗಕ್ಕೆ ಪೆಟ್ಟಾಗಿದೆ. ನಾಗರಾಜ ಕುತ್ತಿಗೆ, ಹಲ್ಲು, ಕಾಲುಗಳಿಗೆ ಗಾಯವಾಗಿದೆ.
ಹಲ್ಲೆ ಬಳಿಕ ಕುಬೇರ ಅವರಿಗೆ ಪ್ರಜ್ಞೆ ತಪ್ಪಿದ ಹಿನ್ನೆಲೆ ನಿಖರ ಕಾರಣ ತಿಳಿದುಬಂದಿಲ್ಲ. ಹಲ್ಲೆ ಪರಿಣಾಮ ಬಳ್ಳಾರಿ ಟ್ರಾಮಾ ಕೇರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಲಿಕೆ ಮುಂಭಾಗದಲ್ಲೆ ಕಾರ್ಪೊರೇಟರ್‌ಗೆ ಥಳಿಸಿದ್ದಕ್ಕೆ ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ಕೇಸು ಕೌಂಟರ್ ಕೇಸು ದಾಖಲಾಗಿದೆ. ರವಿ ಮತ್ತು ಗೋವಿಂದರಾಜುಲು ಸೇರಿದಂತೆ ಇತರರ ಮೇಲೆ ಕೊಲೆ ಯತ್ನದ ಕೇಸ್ ಹಾಗೂ ಕುಬೇರ ಮತ್ತು ಗಾದಿಲಿಂಗನ ಮೇಲೆ ಹಲ್ಲೆಯ ಕೇಸು ದಾಖಲಾಗಿದೆ.
ಇದನ್ನೂ ಓದಿ: Student Death : ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಸೂಸೈಡ್; ಹೂತಿಟ್ಟ ಶವವನ್ನು ಹೊರತೆಗೆದ ಪೊಲೀಸರು!
ಗದಗದಲ್ಲಿ ಕೊಡಲಿಯಿಂದ ಯುವಕನ ಮೇಲೆ ಹಲ್ಲೆ
ಕೊಡಲಿಯಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಂಜುನಾಥ ಬೇಲೇರಿ ಆ್ಯಂಡ್ ಗ್ಯಾಂಗ್ ಸೇರಿಕೊಂಡು ಗ್ರಾಮದ ಸುರೇಶ್ ಬೇಲೇರಿ ಎಂಬಾತನ ತಲೆಗೆ ಕೊಡಲಿಯಿಂದ ಹೊಡೆದಿದ್ದಾರೆ. ಸುರೇಶ್ ಗಂಭೀರವಾಗಿ ಗಾಯಗೊಂಡರೆ, ಜತೆಗಿದ್ದ ಯಶವಂತ ಬೆಲೇರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳು ಸುರೇಶ್ ಗದಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಯಶವಂತಗೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಲ್ಲೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಇಬ್ಬರು ಮಹಿಳೆಯರು ಸೇರಿ ಐವರಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಮಂಜುನಾಥ್, ಅಜ್ಜಪ್ಪ ಸೇರಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ