ಬಳ್ಳಾರಿ: ದುಡಿಯಬೇಕೆಂದು ಬುದ್ಧಿ ಹೇಳಿದ ತಂಗಿಯನ್ನು ಕೊಂದ ಆರೋಪಿ ಅಣ್ಣನಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ಬಳ್ಳಾರಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ವಿನಯ್ ಅವರು ತೀರ್ಪು ನೀಡಿದ್ದಾರೆ.
ಸಿರುಗುಪ್ಪ ತಾಲೂಕಿನ ನಾಗರಾಜ್ ಎಂಬಾತ ಹೆಂಡತಿಯೊಂದಿಗೆ ಸದಾ ಜಗಳವಾಡುತ್ತಿದ್ದ, ಇದಕ್ಕೆ ರೋಸಿಹೋದ ಹೆಂಡತಿ ತವರಿಗೆ ಹೋಗಿದ್ದಾಳೆ. ನಂತರ ತಾಯಿ ಮತ್ತು ತಂಗಿಯೊಂದಿಗೆ ಜಗಳವಾಡುತ್ತಿದ್ದನು. ನೀನು ದುಡಿದಿದ್ದರೆ ಹೆಂಡತಿ ಏಕೆ ತವರು ಮನೆಗೆ ಹೋಗುತ್ತಿದ್ದಳು ಎಂದು ತಂಗಿ ಶಕುಂತಲ ಅಣ್ಣನಿಗೆ ಬುದ್ಧಿ ಹೇಳಿದ್ದಾಳೆ. ಈ ವೇಳೆ ಜಗಳವಾಗಿ ನಾಗರಾಜ್ ತಂಗಿ ಶಕುಂತಲ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
15 ಸಾಕ್ಷಿಗಳ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರುಗುಪ್ಪದ ಅಂದಿನ ಇನ್‌ಸ್ಪೆಕ್ಟರ್ ನಾಗಿರೆಡ್ಡಿ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 15 ಸಾಕ್ಷಿಗಳ ಆಧಾರದ ಮೇಲೆ ವಾದ ಮತ್ತು ಪ್ರತಿವಾದವನ್ನು ಆಲಿಸಿ, ಆರೋಪಿ ನಾಗರಾಜನ ಮೇಲಿನ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ, ತೀರ್ಪು ನೀಡಿದೆ. ದಂಡದ ಶೇ.70ರಷ್ಟು ಹಣವನ್ನು ಮೃತಳ ತಾಯಿಗೆ ನೀಡಬೇಕೆಂದು ತೀರ್ಪಿನಲ್ಲಿ ತಿಳಿಸಲಾಗಿದ್ದು, ಪ್ರಕರಣದಲ್ಲಿ ಅಂದಿನ ಅಭಿಯೋಜಕರಾದ ಲಕ್ಷ್ಮೀದೇವಿಯವರು ಸಾಕ್ಷಿ ವಿಚಾರಣೆ ಮಾಡಿದ್ದರೆ, ಅಭಿಯೋಜಕ ಶೇಖರಪ್ಪ ಅವರು ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು.
ಇದನ್ನೂ ಓದಿ | Accident case| ಹಂಪ್ಸ್‌ನಲ್ಲಿ ಹಾರಿ ಉರುಳಿದ ಬೈಕ್, ಹಿಂಬದಿ ಸವಾರ ದಾರುಣ ಸಾವು