Site icon Vistara News

Dowry case | ಹೆಂಡ್ತಿ ಬೇಕು ಎಂದು ಕೋರ್ಟ್‌ ಮೊರೆ ಹೋದವನು ಆಗಿದ್ದು ಎರಡನೇ ಮದುವೆ!

ಬಳ್ಳಾರಿ: ಸಂಗನಕಲ್ಲು ಗ್ರಾಮದ ರಘುರಾಮರೆಡ್ಡಿ ಎಂಬಾತ ಹೆಂಡತಿ ಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದು, ಮತ್ತೊಂದು ಕಡೆ ಎರಡನೇ ಮದುವೆ ಆಗಿರುವುದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿ ಕುಟುಂಬದವರ ಮೇಲೆ ಹಲ್ಲೆ ನಡೆಸಿರುವ ಆರೋಪ (dowry case) ಕೇಳಿ ಬಂದಿದೆ.

ಬಳ್ಳಾರಿ ಮಹಿಳಾ ಪೊಲೀಸ್‌ ಠಾಣೆ

ಹೈದರಾಬಾದ್‌ನ ವೈದ್ಯೆ ಮೋನಿಕಾ ಮತ್ತು ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ರಘುರಾಮರೆಡ್ಡಿ ಅವರಿಗೆ 2019ರಲ್ಲಿ ಮದುವೆಯಾಗಿತ್ತು. ಮದುವೆಯಾದ ಕೆಲವೇ ದಿನದಲ್ಲಿ ಕಿರುಕುಳದ ಆರೋಪದಲ್ಲಿ ಮೋನಿಕಾ ಅವರು ಗಂಡನ ಮನೆ ಬಿಟ್ಟು ಹೋಗಿದ್ದಾರೆ. ನಂತರದಲ್ಲಿ ಇಬ್ಬರ ಮಧ್ಯೆ ಸಂಪರ್ಕವೇ ಇಲ್ಲದಂತಾಗಿತ್ತು.

ಹೈದರಾಬಾದ್‌ನ ಮಾದಾಪುರ ಠಾಣೆಯಲ್ಲಿ ಗಂಡ ಮತ್ತು ಅವರ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳದ ದೂರನ್ನು ಮೋನಿಕಾ ನೀಡಿದ್ದಾರೆ. ಮದುವೆ ಸಂದರ್ಭದಲ್ಲಿ 50 ಲಕ್ಷ ರೂ. ಮತ್ತು 1.1 ಕೆಜಿ ಬಂಗಾರ ಮತ್ತು ಒಂದು ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ತೆಗೆದು ಬಳಿಕ ಕಿರುಕುಳ ನೀಡುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಮಧ್ಯೆ ರಘುರಾಮರೆಡ್ಡಿ, ಹೆಂಡತಿ ಬೇಕೆಂದು ಅವರು ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಆದರೆ ನಂತರದಲ್ಲಿ ಎರಡನೇ ಮದುವೆಯಾಗಿದ್ದಾರೆ. ಈ ವಿಷಯ ತಿಳಿದ ಮೋನಿಕಾ ಕುಟುಂಬದವರು ಸಂಗನಕಲ್ಲು ಗ್ರಾಮದಲ್ಲಿರುವ ರೆಡ್ಡಿ ಅವರ ಮನೆ ಹತ್ತಿರ ಹೋದಾಗ ಇಬ್ಬರ ಮಧ್ಯೆ ಜಗಳವಾಗಿದೆ.

ಈ ಸಂದರ್ಭದಲ್ಲಿ ರಘುರಾಮರೆಡ್ಡಿ ಅವರು ಕುಡುಗೋಲು ಹಿಡಿದುಕೊಂಡು ಓಡುತ್ತಿರುವ ಫೋಟೋ ಮತ್ತು ವಿಡಿಯೋ, ಮೋನಿಕಾ ಅವರು ಗಾಯಗೊಂಡು ಅಳುತ್ತಿರುವ ಮತ್ತು ಗಲಾಟೆ ಮಾಡುತ್ತಿರುವ ವಿಡಿಯೊ ಮೊಬೈಲ್‌ಗಳಲ್ಲಿ ಹರಿದಾಡುತ್ತಿವೆ.

ಏಳು ಜನರ ಮೇಲೆ ಕೇಸ್‌, ಮೂವರ ಬಂಧನ

ಘಟನೆಗೆ ಸಂಬಂಧಿಸಿದಂತೆ ಮೋನಿಕಾ ಅವರು ಬಳ್ಳಾರಿ ಮಹಿಳಾ ಠಾಣೆಯಲ್ಲಿ ರಘುರಾಮರೆಡ್ಡಿ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿ ಮದುವೆಯಾಗಿದ್ದಾರೆಂದು ಮೊನಿಕಾ ಕುಟುಂಬದವರು ಆರೋಪಿಸಿದ್ದಾರೆ.

ಇದನ್ನೂ ಓದಿ | Dowry Harassment | ಆನೇಕಲ್‌ನಲ್ಲಿ ಗೃಹಿಣಿಯ ಅನುಮಾನಾಸ್ಪದ ಸಾವು; ವರದಕ್ಷಿಣೆ ಕಿರುಕುಳದ ಆರೋಪ

Exit mobile version