ಬಳ್ಳಾರಿ : ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ (Ballary City Congress MLA) ನಾರಾ ಭರತ್ ರೆಡ್ಡಿ (Na.Ra Bharat Reddy) ಮತ್ತು ಅವರ ಬಂಧುಗಳ ಮನೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು (Enforcement directorate) ಶನಿವಾರ ಮುಂಜಾನೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಬಂದಿರುವ ಇ.ಡಿ ಅಧಿಕಾರಿಗಳ ತಂಡ (E.D team raid) ಏಕಕಾಲದಲ್ಲಿ ಆರು ಕಡೆ ದಾಳಿ ಮಾಡಿ ಪರಿಶೀಲನೆ ಆರಂಭಿಸಿದೆ. ಬೆಂಗಳೂರಿನ ಮನೆಗೂ ದಾಳಿ ನಡೆದಿದೆ.
ಶಾಸಕ ನಾರಾ ಭರತ್ ರೆಡ್ಡಿ ಮನೆ ಮತ್ತು ಕಚೇರಿ, ಭರತ್ ರೆಡ್ಡಿ ಅವರ ತಂದೆ ಸೂರ್ಯ ನಾರಾಯಣ ರೆಡ್ಡಿ ಮನೆ ಹಾಗೂ ಶಾಸಕರ ಚಿಕ್ಕಪ್ಪ ಪ್ರತಾಪರೆಡ್ಡಿ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ. ಭರತ್ ರೆಡ್ಡಿ ಅವರ ಸಹೋದರ ಸಂಬಂಧಿ ಅನಿಲ್ ರೆಡ್ಡಿ, ಆಪ್ತರಾದ ರತ್ನಬಾಬು ಅವರ ಮನೆ ಮೇಲೂ ದಾಳಿ ನಡೆದಿದೆ. ಶನಿವಾರ ಬೆಳಗ್ಗೆ 6.30ರ ಹೊತ್ತಿಗೆ ಏಕಕಾಲದಲ್ಲಿ ಅಧಿಕಾರಿಗಳ ತಂಡ ಮನೆ ಮತ್ತು ಕಚೇರಿಗಳಿಗೆ ಲಗ್ಗೆ ಇಟ್ಟು ಪರಿಶೀಲನೆ ಮಾಡಿದೆ.
ನಗರದ ನೆಹರು ಕಾಲೋನಿಯಲ್ಲಿರುವ ಶಾಸಕ ಭರತ್ ರೆಡ್ಡಿ ಮತ್ತು ಅವರ ಚಿಕ್ಕಪ್ಪ ಪ್ರತಾಪರೆಡ್ಡಿ ಅವರ ಮನೆ ಮೇಲೆ, ಗಾಂಧಿ ನಗರದಲ್ಲಿರುವ ಶಾಸಕರ ತಂದೆ ಸೂರ್ಯನಾರಾಯಣ ರೆಡ್ಡಿ ಕಚೇರಿ, ಶಾಸಕರ ಆಪ್ತ ರತ್ನಬಾಬು, ಸೋದರ ಸಂಬಂಧಿ ಅನಿಲ್ ಮನೆ ಮೇಲೆ ಈ ದಾಳಿ ನಡೆದಿದೆ.
ಬೆಂಗಳೂರಿನಿಂದ 7 ವಾಹನಗಳಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಸಿಆರ್ ಪಿಎಫ್ ಭದ್ರತಾ ಸಿಬ್ಬಂದಿಗಳೊಂದಿಗೆ ಆಗಮಿಸಿ ದಾಳಿ ಮಾಡಿದ್ದಾರೆ. ಶಾಸಕ ಕಚೇರಿಯಲ್ಲಿ ನಿಲ್ಲಿಸಿರುವ ಸ್ಕಾರ್ಫಿಯೋ ವಾಹನದಲ್ಲಿನ ವಸ್ತುಗಳನ್ನು ಪರಿಶೀಲಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಶಾಸಕರು ಬಳ್ಳಾರಿ ನಗರದಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕ ನಾರಾ ಭರತ್ ರೆಡ್ಡಿ ಅವರದು ಶ್ರೀಮಂತ ಕುಟುಂಬವಾಗಿದ್ದು, ಸಾಕಷ್ಟು ಆಸ್ತಿಪಾಸ್ತಿಯನ್ನು ಹೊಂದಿದೆ. ನಾರಾ ಭರತ್ ರೆಡ್ಡಿ ಅವರು ಕಳೆದ ಚುನಾವಣೆಯ ಸಂದರ್ಭದಲ್ಲಿ 90 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದರು. ನಾರಾ ಭರತ ರೆಡ್ಡಿ ಅವರ ಅಪ್ಪ, ಚಿಕ್ಕಪ್ಪ ಅವರು ಕೂಡಾ ದೊಡ್ಡ ಮಟ್ಟದ ಶಕ್ತಿವಂತರಾಗಿದ್ದಾರೆ. ಹೀಗಾಗಿ ಅವರ ಮೇಲೂ ಇ.ಡಿ ಕಣ್ಣು ಹಾಕಿದೆ ಎನ್ನಲಾಗಿದೆ. ಶಾಸಕ ನಾ.ರಾ ಭರತ ರೆಡ್ಡಿ ಅವರ ಆಪ್ತ ರತ್ನಬಾಬು ಮತ್ತು ಶಾಸಕರ ಸೋದರ ಸಂಬಂಧಿ ಅನಿಲ್ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು ಕೂಡಾ ಇದೇ ಕಾರಣಕ್ಕೆ.
ಶಾಸಕರ ಕುಟುಂಬದ ವ್ಯವಹಾರ ಮತ್ತು ರಾಜಕೀಯ
ಶಾಸಕರ ಕುಟುಂಬಕ್ಕೆ ಸಂಬಂಧಿಸಿದಂತೆ ಗ್ರಾನೈಟ್ ವ್ಯವಹಾರ ಇದೆ, ಒಂದು ವರ್ಷದ ಹಿಂದೆ ಶಾಸಕರ ತಂದೆ ಸೂರ್ಯನಾರಾಯಣ ರೆಡ್ಡಿ ಅವರ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಶಾಸಕ ಭರತ ರೆಡ್ಡಿ ಅವರು ಕೆಲ ತಿಂಗಳುಗಳ ಹಿಂದೆ ಚುನಾವಣೆಯ ಪೂರ್ವದಲ್ಲಿ ಹುಟ್ಟು ಹಬ್ಬಕ್ಕೆ ಬಳ್ಳಾರಿ ನಗರದ ಜನರಿಗೆ ಕುಕ್ಕರ್ ಹಂಚಿಕೆ ಮಾಡಿದ್ದರು.
ಶಾಸಕ ಚಿಕ್ಕಪ್ಪ ನಾರಾ ಪ್ರತಾಪ ರೆಡ್ಡಿ ಅವರು ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಲು ಸಿದ್ಧತೆಯಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ಅವರಿಗೆ ಟಿಕೆಟ್ ನೀಡದಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಸೋತಿದ್ದರು.
ಇದನ್ನೂ ಓದಿ: ED raid : ಮಾಲೂರು ಶಾಸಕ ನಂಜೇಗೌಡ, ಸಚಿವರ ಆಪ್ತರಿಗೆ ಇ.ಡಿ ಶಾಕ್; ಮುಳ್ಳಾಯ್ತೇ ಕೋಚಿಮುಲ್ ಹಗರಣ
ಬೆಂಗಳೂರಿನಲ್ಲೂ ಭರತ್ ರೆಡ್ಡಿ ನಿವಾಸಗಳ ಮೇಲೆ ಇ.ಡಿ ದಾಳಿ
ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮೇಲೆ ಬೆಂಗಳೂರಿನಲ್ಲೂ ಇ.ಡಿ ದಾಳಿ ನಡೆದಿದೆ. ಬೆಂಗಳೂರಿನ ಇಂದಿರಾ ನಗರ ಬಿಡಿಎ ಕಾಂಪ್ಲೆಕ್ಸ್ ಬಳಿಯಿರುವ ಮನೆಗೆ ಎರಡು ಇನ್ನೋವಾ ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
14 ಅಧಿಕಾರಿಗಳು ಮನೆಗೆ ಲಗ್ಗೆ ಇಟ್ಟಿದ್ದು, ಭದ್ರತೆಗಾಗಿ ಸಿಆರ್ ಪಿ ಎಫ್ ಸಿಬ್ಬಂದಿಯನ್ನು ಕರೆ ತಂದಿದ್ದಾರೆ. ಬೆಳಗ್ಗೆ ಐದು ಗಂಟೆಗೆ ಮನೆ ಬಳಿ ಬಂದಿರುವ ಅಧಿಕಾರಿಗಳು ಆರು ಗಂಟೆಗೆ ಮನೆ ಒಳಗೆ ಹೋಗಿ ಪರಿಶೀಲನೆ ಶುರು ಮಾಡಿದ್ದಾರೆ.