ಬಳ್ಳಾರಿ: ಇಲ್ಲಿನ ಶ್ರೀಧರ್ ಗೆಡ್ಡೆ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ರೈತರ ಸಂವಾದಕ್ಕೆ ಆಗಮಿಸಿದ್ದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹ್ಮದ್ ಹ್ಯಾರಿಸ್ ನಲಪಾಡ್ ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ರೈತರೊಬ್ಬರಿಗೆ ನಲಪಾಡ್ ಏಕವಚನ ಪ್ರಯೋಗಿಸಿದ ಹಿನ್ನೆಲೆಯಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ವೇದಿಕೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವಾಗಲೇ ರೈತರೊಬ್ಬರು ಅಡ್ಡಿಪಡಿಸಿದ್ದಾರೆ. ಇದಕ್ಕೆ ಗರಂ ಆದ ನಲಪಾಡ್, ʻಹೇ ಇಲ್ನೋಡ್ರಪ್ಪಾ ನಾನ್ ಮಾತಾಡ್ತಿದ್ದೀನಿ, ಯಾವನೋ ಕುಡಿದ್ಬಿಟ್ಟು ಹೇಳೋದಕ್ಕೆ ಟೆನ್ಷನ್ ಆಗ್ಬೇಡಿʻ ಎಂದಿದ್ದಾರೆ. ಇದಕ್ಕೆ ಕೋಪಗೊಂಡ ಕೆಲ ರೈತರು ಆಕ್ರೋಶ ಹೊರಹಾಕಿ, ನಲಪಾಡ್ ಮಾತನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಯಾವನೋ ಎಂದರೆ ಸರಿಯಲ್ಲ ಎಂದು ಕೋಪಗೊಂಡರು. ಈ ವೇಳೆ ಗ್ರಾಮಸ್ಥರೆಲ್ಲರೂ ಸೇರಿ ವ್ಯಕ್ತಿಯನ್ನು ಸಮಾಧಾನ ಪಡಿಸಿದರು.
ಇದಕ್ಕೂ ಮೊದಲು ತಮ್ಮ ಪಕ್ಷದ ಭಾರತ್ ಜೋಡೊ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಭಾರತವನ್ನು ಜೋಡಿಸಲು, ಭಾರತವನ್ನು ಭಾರತವಾಗಿ ಉಳಿಸಲು ನಮ್ಮ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ʻʻನಾವೆಲ್ಲ ಭಾರತೀಯರು, ಕನ್ನಡಿಗರು ಎಂಬುದನ್ನು ಯಾರು ಕೂಡ ಕಿತ್ತು ಹಾಕಲು ಸಾಧ್ಯವಿಲ್ಲ. ಆದರೆ, ಇವತ್ತು ನೀನು ಬಡವ, ರೈತ, ಮುಸ್ಲಿಂ ಕ್ರೈಸ್ತ ಎಂಬುದು ಬೇಕಾಗಿಲ್ಲ. ಹಿಂದೂ ಧರ್ಮದಲ್ಲೂ ಕೆಲ ಪಂಗಡಗಳಷ್ಟೇ ಬೇಕಿದೆʼʼ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ನಾವೆಲ್ಲ ಒಂದೇ, ನಾವೆಲ್ಲ ಭಾರತೀಯರು ಜತೆಗೆ ಇರಬೇಕೆಂದು ಎಂಬ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನದಲ್ಲಿದೆ ಎಂದು ಹೇಳಿದರು.
ʻʻಮೋದಿನೂ ಒಂದೇ, ಅಮಿತ್ ಶಾನೂ ಒಂದೇ, ಯಾರು ಮೇಲೂ ಅಲ್ಲ, ಕೀಳೂ ಅಲ್ಲ. ಹೀಗಾಗಿಯೇ ಎಲ್ಲರ ಧ್ವನಿಯಾಗಲು ರಾಹುಲ್ ಗಾಂಧಿ ಅವರು 3,500 ಕಿ.ಮೀ. ಪಾದಯಾತ್ರೆ ಮಾಡುತ್ತಿದ್ದಾರೆʼʼ ಎಂದರು.
ಮಾತಾಡಿದರೆ ಅರೆಸ್ಟ್
ʻʻಇಂದು ದೇಶದಲ್ಲಿ ಯಾರಿಗೂ ಮಾತನಾಡುವುದಕ್ಕೆ ಅವಕಾಶವಿಲ್ಲ. ಯಾರಾದರೂ ಮಾತನಾಡಿದರೆ ಅರೆಸ್ಟ್ ಮಾಡುತ್ತಾರೆʼʼ ಎಂದು ಬಿಜೆಪಿ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ʻʻ40% ಕಮಿಷನ್ ತೆಗೆದುಕೊಳ್ಳುತ್ತಿರುವುದನ್ನು ನಮ್ಮ ಪಕ್ಷ ಹೇಳಿದ್ದಲ್ಲ, ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ. ಇವರದ್ದೇ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಜೀವವೇ ಹೋಯಿತುʼʼ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | shimogga terror | ಯುವಕರು ಕೆಲಸ ಸಿಗದೆ ಕ್ರೈಂ ದಾರಿ ಹಿಡಿಯುತ್ತಿದ್ದಾರೆ ಎಂದ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್!