Site icon Vistara News

Janardhan Reddy | ಸುಷ್ಮಾ ಸ್ವರಾಜ್‌ರನ್ನು ಬೆಂಬಲಿಸಿದ್ದರಿಂದ ಕೇಂದ್ರದ ಕಾಂಗ್ರೆಸ್‌ ಸರ್ಕಾರ ನನ್ನ ಮೇಲೆ ದಾಳಿ ಮಾಡಿಸಿ ಪೀಡಿಸಿತು ಎಂದ ಜನಾರ್ದನ ರೆಡ್ಡಿ

ಬೆಂಗಳೂರು: ತಮ್ಮ ಭವಿಷ್ಯದ ರಾಜಕೀಯ ನಡೆಯ ಬಗ್ಗೆ ವಿವರಿಸಲು ಭಾನುವಾರ ಸುದ್ದಿಗೋಷ್ಠಿ ನಡೆಸುತ್ತಿರುವ ಗಣಿ ಉದ್ಯಮಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ಅವರು ಬಿಜೆಪಿ ಮುಂಚೂಣಿ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್‌ ಅವರ ಜತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ನಾನು ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್‌ ಗೆಲ್ಲಲೇಬೇಕು ಎಂದು ಪಣ ತೊಟ್ಟು ಶ್ರಮಿಸಿದ್ದೆ. ಆದರೆ ಸುಷ್ಮಾ ಸ್ವರಾಜ್‌ ಸೋತರು. ಇದೇ ಜಿದ್ದಿನಿಂದ ನನ್ನ ಮೇಲೆ ಅಂದಿನ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ ಮುಗಿಬಿದ್ದು ಐಟಿ, ಇಡಿ ಇತ್ಯಾದಿ ದಾಳಿ ಮಾಡಿಸಿ ಸಂಕಷ್ಟಕ್ಕೆ ದೂಡಿತು ಎಂದವರು ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ತಮ್ಮ ʼಪಾರಿಜಾತʼ ನಿವಾಸದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಆದರ್ಶವನ್ನು ಅನುಸರಿಸುತ್ತಿರುವವನು. ಬಳ್ಳಾರಿಯಲ್ಲಿ ಉದ್ಯಮಿಯಾಗಿದ್ದೆ. ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದೇನೆ ಎಂದು ಹೇಳಿಕೊಂಡರು.

ಶ್ರೀರಾಮುಲು ಬಾಲ್ಯ ಸ್ನೇಹಿತ

ಶ್ರೀರಾಮುಲು ಮತ್ತು ನಾನು ಅತ್ಯಂತ ಆಪ್ತ ಸ್ನೇಹಿತರು. ಬಾಲ್ಯ ಸ್ನೇಹಿತರು. ಎಂಭತ್ತರ ದಶಕದಿಂದಲೂ ಒಟ್ಟಿಗೆ ಇದ್ದವರು. ಶ್ರೀರಾಮುಲು ಅವರ ಸೋದರ ಮಾವ ಸಾರ್ವಜನಿಕ ಜೀವನದಲ್ಲಿ ಸಮಾಜಸೇವೆ ಮಾಡುತ್ತಿದ್ದರು. ಆದರೆ ಅವರ ಕೊಲೆಯಾಯಿತು. ಆ ಸಂಕಷ್ಟದ ಸಂದರ್ಭದಲ್ಲಿ ನಾನು ಶ್ರೀರಾಮುಲು ಜತೆಗಿದ್ದೆ. ಸೋದರ ಮಾವನಂತೆ ಸಾಮಾಜಿಕ, ರಾಜಕೀಯ ವಲಯ ಪ್ರವೇಶಕ್ಕೆ ರಾಮುಲು ನಿರ್ಧರಿಸಿದರು. 90ರ ದಶಕದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲು ಬಯಸಿದರು. ಶಾಸಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಾಗ ನಾವೆಲ್ಲರೂ ಸೇರಿದ್ದೆವು ಎಂದು ಶ್ರೀರಾಮುಲು ಜತೆಗಿನ ನಂಟನ್ನು ಸ್ಮರಿಸಿದರು.

ಸುಷ್ಮಾ ಸ್ವರಾಜ್‌ ನೆನಪು

ಸುಷ್ಮಾ ಸ್ವರಾಜ್‌ ಜತೆಗಿನ ಒಡನಾಟವನ್ನು ಸ್ಮರಿಸಿದ ರೆಡ್ಡಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್‌ ನಡುವಣ ಲೋಕಸಭೆ ಚುನಾವಣೆ ಸ್ಪರ್ಧೆ ಮತ್ತು ಫಲಿತಾಂಶದ ಬಗ್ಗೆಯೂ ಮೆಲುಕು ಹಾಕಿದರು. ಸುಷ್ಮಾ ಸ್ವರಾಜ್‌ ಅವರನ್ನು ಗೆಲ್ಲಿಸಲೇಬೇಕು ಎಂಬ ಹಠ ನನಗಿತ್ತು. ಆದರೆ 50 ಸಾವಿರ ಮತಗಳ ಅಂತರದಿಂದ ಸೋತರು. ಈ ಹಣಾಹಣಿಯಲ್ಲಿ ಕಾಂಗ್ರೆಸ್‌ ನಾಯಕರನ್ನು ಎದುರು ಹಾಕಿಕೊಂಡಿದ್ದೆ. ಬಳ್ಳಾರಿಯ ಬಗ್ಗೆ ಸುಷ್ಮಾ ಸ್ವರಾಜ್‌ ಅವರಿಗೆ ವಿಶೇಷ ಮಮತೆ ಇತ್ತು. ಚುನಾವಣೆಯಲ್ಲಿ ಸೋತ ಬಳಿಕವೂ ಕ್ಷೇತ್ರದ ಜನರ ಒಡನಾಟವನ್ನು ಬಿಟ್ಟಿರಲಿಲ್ಲ. ಪ್ರತಿ ವರ್ಷ ವರ ಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ತಪ್ಪದೆ ಬಂದು ಜನರೊಡನೆ ಬೆರೆಯುತ್ತಿದ್ದರು ಎಂದು ರೆಡ್ಡಿ ಹೇಳಿದರು.

Exit mobile version