ಶಶಿಧರ್ ಮೇಟಿ, ಬಳ್ಳಾರಿ
ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ನಂತರ ಬಳ್ಳಾರಿ ಭಾಗದಲ್ಲಿ, ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿಗೆ ಪೆಟ್ಟು ಬೀಳಲಿದೆ. ರೆಡ್ಡಿಯ ಹೊಸ ಪಕ್ಷದ ನಡೆ ಆಪ್ತಮಿತ್ರ ಶ್ರೀರಾಮುಲು ಮುಜುಗರಕ್ಕೆ ಕಾರಣವಾದರೆ, ರೆಡ್ಡಿಯ ಇಬ್ಬರು ಸಹೋದರರ ಉಭಯ ಸಂಕಟಕ್ಕೆ ಕಾರಣವಾಗಿದೆ. ಇನ್ನು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಇದು ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಹುಮ್ಮಸ್ಸು ಮತ್ತು ಉತ್ಸಾಹವನ್ನು ಮೂಡಿಸಿದೆ.
ಬಿಜೆಪಿ ನಷ್ಟ ಕಾಂಗ್ರೆಸ್ ಗೆ ಲಾಭ?
ರೆಡ್ಡಿಯವರು ಆಪ್ತಮಿತ್ರ ಮತ್ತು ಸಹೋದರರ ರಾಜಕೀಯ ದೃಷ್ಟಿಯಲ್ಲಿ ಹೊಸ ಪಕ್ಷ ಘೋಷಣೆ ಕಷ್ಟಸಾಧ್ಯ ಎಂದು ರಾಜಕೀಯ ಮತ್ತು ಆಪ್ತವಲಯದಲ್ಲಿ ಊಹಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆ ಮೀರಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ನೂತನ ಪಕ್ಷ ಘೋಷಣೆ ಮಾಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ರೆಡ್ಡಿಯವರು ಸಕ್ಸಸ್ ಆಗುವುದು ಕಷ್ಟಸಾಧ್ಯ, ಆದರೆ ಬಿಜೆಪಿ ಅಭ್ಯರ್ಥಿಗಳ ಸೋಲಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ, ಇದು ಕಾಂಗ್ರೆಸ್‌ಗೆ ವರದಾನವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | Janardhan Reddy | ಹೊಸ ಪಕ್ಷ ಕಟ್ಟಿದ ಜನಾರ್ದನ ರೆಡ್ಡಿ; ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಘೋಷಣೆ
ಅಲ್ಪ ಸಂಖ್ಯಾತ ಮತಗಳ ಗಳಿಕೆಗೆ ಒತ್ತು
ಈ ಭಾಗದಲ್ಲಿ ಆಂಧ್ರದ ಮೂಲದ ಮತದಾರರು ಕ್ಯಾಂಪ್‌ಗಳು ಮತ್ತು ನಗರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯ ಕೋಮುವಾದಿ ನೀತಿಯನ್ನು ಮುಂದಿಟ್ಟುಕೊಂಡು, ಮುಸ್ಲಿಂ ಸಮುದಾಯ ಮತಗಳನ್ನು ಸೆಳೆಯುವ ಕೆಲಸವನ್ನು ರೆಡ್ಡಿ ಮಾಡಲಿದ್ದಾರೆ. ಇದರಿಂದಾಗಿ ಕೊಂಚ ಮಟ್ಟಿಗೆ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆಯಾಗಲಿದೆ. ಇನ್ನು ಮುಸ್ಲಿಂ ಸಮುದಾಯದವರನ್ನು ಸೆಳೆಯುವ ನಿಟ್ಟಿನಲ್ಲಿ ರೆಡ್ಡಿ ಕಸರತ್ತು ನಡೆಸುತ್ತಿದ್ದಾರೆ.
ಟಿಕೆಟ್ ವಂಚಿತರಿಗೆ ಹೊಸ ಪಕ್ಷ ವೇದಿಕೆ
ಜನಾರ್ದನ ರೆಡ್ಡಿ 2008ರಲ್ಲಿ ಪಕ್ಷೇತರ ಶಾಸಕರನ್ನು ಕರೆದುಕೊಂಡು ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷದ ಟಿಕೆಟ್ ವಂಚಿತ ಪ್ರಬಲ ಅಭ್ಯರ್ಥಿಗಳಿಗೆ ಗಾಳ ಹಾಕಿ ತಮ್ಮ ಪಕ್ಷದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಾಗುತ್ತಿದೆ.
ರಾಮುಲು ಒಂಟಿಯಾದರೆ?
ಜನಾರ್ದನ ರೆಡ್ಡಿಯವರು ಈವರೆಗೆ ಕಿಂಗ್ ಮೇಕರ್ ಆಗಿದ್ದರು, ರಾಮುಲು ಪ್ರತಿ ಚುನಾವಣೆಯಲ್ಲಿ ರೆಡ್ಡಿ ಬೆನ್ನಿಗೆ ನಿಲ್ಲುತ್ತಿದ್ದರು. ಆದರೆ ರೆಡ್ಡಿ ಆಸರೆ ಇಲ್ಲದೆ ರಾಮುಲು ಚುನಾವಣೆ ಮತ್ತು ಕೆಲವೊಂದು ಸನ್ನಿವೇಶ ಎದುರಿಸಬೇಕಾಗುತ್ತದೆ. ರಾಮುಲು ಅವರನ್ನು ರೆಡ್ಡಿ ಒಂಟಿ ಮಾಡಿದರೂ ಎಂದು ಕೆಲ ವಾಲ್ಮೀಕಿ ಸಮುದಾಯದವರು ಅಂದು ಕೊಂಡರೆ, ಇನ್ನು ಕೆಲವರು ಅವರು ಬಿಟ್ಡು ಹೋಗಿದ್ದು ಚೆನ್ನಾಗಿ ಆಯಿತು ಎನ್ನುವ ಮಾತುಗಳು ಕೇಳಿಬರುತ್ತಿವೆ.