Site icon Vistara News

ಕೊಳಗಲ್‌ ಆಟೊ ದುರಂತ| ಆರು ಬಡ ಹೆಣ್ಮಕ್ಕಳ ಬಾಳಿಗೆ ಚರಮ ಗೀತೆ ಹಾಡಿತು ಆ ಒಂದು ಕಲ್ಲು!

auto accident

ಶಶಿಧರ್ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ
ನಿತ್ಯದ ಕೂಲಿಯೇ ಇವರ ತುತ್ತು ಅನ್ನದ ಬದುಕಿಗೆ ಆಧಾರ. ನಿತ್ಯವೂ ದುಡಿದರೆ ಮಾತ್ರ ಹೊಟ್ಟೆ ತುಂಬುತ್ತದೆ ಎಂಬಂತಿರುವ ಇವರ ಬದುಕಿಗೆ ಒಂದು ಸಣ್ಣ ಕಲ್ಲು ಚರಮ ಗೀತೆ ಹಾಡಿದೆ! ಹೌದು, ಆಟೋ ರಿಕ್ಷಾದಲ್ಲಿ ಕುಳಿತು ಜಮೀನಿನಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾಗ ಎಚ್ಎಲ್ಸಿ ಕಾಲುವೆಯ ಪಕ್ಕದ ರಸ್ತೆಯ ಮೇಲಿದ್ದ ಕಲ್ಲಿನ ಮೇಲೆ ಆಟೋ ಚಕ್ರ ಏರಿದ್ದೇ ಇವರ ಬದುಕು ನೀರುಪಾಲಾಗಲು ಕಾರಣವಾಗಿದೆ.

ಇದು ಬಳ್ಳಾರಿ ತಾಲೂಕಿನ ಶಾಂತಿನಗರ ಸಮೀಪ ಬುಧವಾರ ಮುಂಜಾನೆ ನಡೆದ ದುರಂತದ ಹಿಂದಿನ ದುರಂತ ಕಥನ. ಜಮೀನಿಗೆ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋ ರಿಕ್ಷಾ ಪಲ್ಟಿಯಾಗಿ ಕಾಲುವೆಗೆ ಉರುಳಿ ಆರು ಮಂದಿ ಪ್ರಾಣ ಕಳೆದುಕೊಂಡ ಘಟನೆ ಇದು. ದುರ್ಗಮ್ಮ, ನಿಂಗಮ್ಮ, ಪುಷ್ಪವತಿ ಅವರು ಮೃತಪಟ್ಟಿದ್ದಾರೆ. ಕುಡತಿನಿ ಲಕ್ಷ್ಮಿ, ಹುಲಿಗೆಮ್ಮ, ನಾಗರತ್ನಮ್ಮ ನಾಪತ್ತೆಯಾಗಿದ್ದಾರೆ.

ಪ್ರತಿದಿನದಂತೆ ಬುಧವಾರ ಜಮೀನು ಕೆಲಸಕ್ಕೆ ಕೊಳಗಲ್‌ನಿಂದ ಆಟೋದಲ್ಲಿ ತೆರಳುತ್ತಿದ್ದಾಗ ಕಡೇ ಗುಡ್ಡ ಸಮೀಪದ ಎಚ್ಎಲ್‌ಸಿ ಕಾಲುವೆ ಪಕ್ಕದ ರಸ್ತೆಯಲ್ಲಿದ್ದ ಕಲ್ಲಿನ ಮೇಲೆ ಆಟೋ ಏರಿದ್ದೇ ಅವಘಡಕ್ಕೆ ಕಾರಣವೆಂಬುದು ಬದುಕುಳಿದವರು ಮತ್ತು ಪ್ರತ್ಯಕ್ಷ ದರ್ಶಿಗಳು ಹೇಳುವ ಮಾತು.

ಸ್ಥಳೀಯರು ಪ್ರಾಣ ರಕ್ಷಕರಾದರು
ಹೇಳಿ ಕೇಳಿ ಅದು ಮೂರು ಗಾಲಿಯ ಆಟೋ, ಅದರಲ್ಲಿ 11 ಜನರು ಪ್ರಯಾಣಿಸುತ್ತಿದ್ದರು. ಆಟೋ ಪಲ್ಟಿಯಾದ ಕೂಡಲೇ ಅದರಲ್ಲಿದ್ದ 16 ವರ್ಷದ ಮಹೇಶ್ ಎನ್ನುವ ಬಾಲಕ ಹೊರಗಡೆ ಜಿಗಿದು ಕೂಗಾಡಿದ್ದೇ ನಾಲ್ಕು ಜನರ ಪ್ರಾಣ ರಕ್ಷಣೆಗೆ ಕಾರಣವಾಗಿದೆ. ಕೂಡಲೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಣ್ಣ ದೊಡ್ಡಪ್ಪ ರಕ್ಷಣೆಗೆ ಧಾವಿಸಿ ತಮ್ಮ ಪ್ರಾಣದ ಹಂಗು ತೊರೆದು ಕಾಲುವೆಗ ಹಾರಿ ಎರ‍್ರೆಮ್ಮ, ಹೇಮಾವತಿ, ಶಿಲ್ಪ ಅವರನ್ನು ಮೇಲಕ್ಕೆತ್ತಿದ್ದಾರೆ. ಘಟನೆಯಲ್ಲಿ ಆತನ ಮೊಬೈಲ್ ನೀರು ಪಾಲಾಗಿದೆ. ಈತನ ಸಮಯ ಪ್ರಜ್ಞೆಯೇ ಮೂವರ ಪ್ರಾಣ ರಕ್ಷಣೆಗೆ ಕಾರಣವಾಗಿದೆ. ಜೀವ ರಕ್ಷಣೆ ಮಾಡಿದವರ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

ಜೀವನ್ಮರಣದ ಮಧ್ಯೆ ಆಸರೆಯಾದ ಸೀರೆ!
ಆಟೋವು ನೀರಿನಲ್ಲಿ ಬಿದ್ದಾಗ ದಮ್ಮೂರು ಎರ‍್ರೆಮ್ಮ, ಹೇಮಾವತಿ, ಶಿಲ್ಪ ಅವರು ನೀರಿನಲ್ಲಿ ಜೀವನ್ಮರಣದ ಮಧ್ಯೆ ಒದ್ದಾಡುತ್ತಿದ್ದರು. ಸಣ್ಣ ದೊಡ್ಡಪ್ಪ ಅವರಿಗೆ ನೀರಿನಲ್ಲಿ ಬಿದ್ದ ಒಬ್ಬರು ಸಾವಿನ ಭಯದ ಮಧ್ಯೆಯೇ ಸೀರೆಯನ್ನು ಕೊಟ್ಟಿದ್ದಾರೆ, ಕೂಡಲೇ ಉಳಿದವರನ್ನು ರಕ್ಷಿಸಲು ಕಾರಣವಾಯಿತು ಎಂದು ಸಣ್ಣ ದೊಡ್ಡಪ್ಪ ಹೇಳಿದ್ದಾರೆ. ಇನ್ನುಳಿದವರ ರಕ್ಷಣೆಗೆ ಮುಂದಾದರೂ, ಪುಷ್ಪಾವತಿಯವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದುರ್ಗಮ್ಮ ಮತ್ತು ನಿಂಗಮ್ಮ ಅವರನ್ನು ನೀರಿನಿಂದ ಹೊರ ತಂದರೂ, ಆಗಲೇ ಮರಣಹೊಂದಿದ್ದರು, ರಕ್ಷಕರ ಪ್ರಯತ್ನ ಫಲಿಸಲಿಲ್ಲ. ಲಕ್ಷ್ಮಿ, ಹುಲಿಗೆಮ್ಮ ಮತ್ತು ನಾಗರತ್ನಮ್ಮ ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಶೋಧ ಕಾರ್ಯ ನಡೆಯುತ್ತಿದೆ. ಮೃತರೆಲ್ಲರೂ ಕೊಳಗಲ್ ಗ್ರಾಮಕ್ಕೆ ಸೇರಿದವರು.

20 ಕಿ.ಮೀ ದೂರ ಹೋಗಿರುವ ಸಾಧ್ಯತೆ
ಎಚ್ಎಲ್ಸಿ ಕಾಲುವೆಯಲ್ಲಿ ನೀರಿನ ರಭಸವು ಹೆಚ್ಚಾಗಿರುತ್ತದೆ. ಘಟನೆ ನಡೆದಿರುವ ಸ್ಥಳದಿಂದ ನೀರಿನಲ್ಲಿ ಕೊಚ್ಚಿ ಹೋಗಿರುವವರು ಕನಿಷ್ಠವೆಂದರೂ 20 ಕಿ.ಮೀ. ಅಂತರದಲ್ಲಿ ಅಂದರೆ ಆಂಧ್ರಪ್ರದೇಶ ಬೊಮ್ಮನ ಹಾಳ್ನಲ್ಲಿ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೂ ಅಗ್ನಿಶಾಮಕ ದಳದವರು ಬೋಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುವಂತೆ ತುತ್ತು ಅನ್ನಕ್ಕಾಗಿ ಕೂಲಿ ಹುಡುಕಿಕೊಂಡು ಹೋದವರು ಮಸಣ ಸೇರಿದರು. ಈಗ ಅವರ ಕುಟುಂಬಗಳಿಗೆ ತಾಯಿ, ಹೆಂಡತಿ, ಮಗಳು, ಸೊಸೆ ಇಲ್ಲದೆ ಅನಾಥ ಭಾವ ಕಾಡುವಂತಾಗಿದೆ. ಮೃತಪಟ್ಟವರು ಕೃಷಿ ಕಾರ್ಮಿಕರಾಗಿರುವುದರಿಂದ ಅವರಿಗೆ ಸರಕಾರ ಕಡೆಯಿಂದ ಪರಿಹಾರ ನೀಡಬೇಕೆಂದು ತುಂಗಭದ್ರಾ ರೈತ ಸಂಘದವರು ಆಗ್ರಹಿಸಿದ್ದಾರೆ.

ಅಪಘಾತದ ವರದಿ | ಕಾಲುವೆಗೆ ಆಟೋ ಪಲ್ಟಿ | 6 ಮಂದಿ ಸಾವು, ಐವರ ರಕ್ಷಣೆ

Exit mobile version