Site icon Vistara News

KSRTC Bus : ಊರಿಂದ ಜನ ಕರೆಸಿ ಡ್ರೈವರ್‌ಗೆ ಹೊಡೆಸಿದ ಮಹಿಳೆಯರು!; ಮಾಡದ ತಪ್ಪಿಗೆ ಶಿಕ್ಷೆ!

Attack on Bus driver

ಬಳ್ಳಾರಿ: ಈ ಚಾಲಕ ಏನು ಮಾಡಬೇಕು ಎಂದು ನೀವೇ ಹೇಳಿ! ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಹೊರಡಿಸೋ ಟೈಮ್‌ ಆಗಿದೆ… ಒಂದು ಕಡೆ ಮಹಿಳೆಯರು ಒಂದೈದು ನಿಮಿಷ ನಿಲ್ಲಿಸಿ (Request from Women) ಅಂತಾರೆ.. ನಮ್ಮವರು ಬರ್ತಾರೆ ಅಂತಾರೆ. ಇನ್ನೊಂದು ಕಡೆ ಬಸ್ಸಿನಲ್ಲಿದ್ದ ಪ್ರಯಾಣಿಕರು ತಮಗೆ ಲೇಟ್‌ ಆಗ್ತಿದೆ.. ನೀವು ಹೊರಡಿಸಿ ಅಂತಾರೆ. ಕೊನೆಗೆ ಐದು ನಿಮಿಷ ಕಾದರೂ ಮಹಿಳೆಯರು ಹೇಳಿದ ವ್ಯಕ್ತಿಗಳು ಬಾರದೆ ಇದ್ದಾಗ ಚಾಲಕ ಪ್ರಯಾಣಿಕರ ಒತ್ತಡಕ್ಕೆ (Pressure from passengers) ಮಣಿದು ಬಸ್‌ ಹೊರಡಿಸುತ್ತಾನೆ. ಆಗ ಮಹಿಳೆಯರು ಸಿಟ್ಟಿಗೆದ್ದು ಊರಿನ ಜನರಿಗೆ ಕರೆ ಮಾಡುತ್ತಾರೆ. ಊರಿನ ಜನರು ತೆಲುಗು ಸಿನಿಮಾ ಸ್ಟೈಲಲ್ಲಿ ಬಸ್ಸನ್ನು ಬೆನ್ನಟ್ಟಿ ಚಾಲಕನಿಗೆ ಚೆನ್ನಾಗಿ (Attack on driver) ತದುಕುತ್ತಾರೆ. ಅಮಾಯಕ ಚಾಲಕ ಉಸಿತೆತ್ತಲಾಗದೆ ಒದೆ ತಿನ್ನುತ್ತಾನೆ. ಈಗ ನೀವೇ ಹೇಳಿ ಆ ಚಾಲಕ ಏನು ಮಾಡೋದು!

ಈ ಘಟನೆ ನಡೆದಿರುವುದು ಬಳ್ಳಾರಿಯಲ್ಲಿ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ದ ಎರಡನೇ ಘಟಕದಲ್ಲಿ ನಿರ್ವಾಹಕ ಮಲ್ಲಿಕಾರ್ಜುನ ಮತ್ತು ಚಾಲಕ ಪಂಪಣ್ಣ ಅವರ ಮೇಲೆ ಡಿಸೆಂಬರ್‌ 29ರ ಸಂಜೆ ಈ ಹಲ್ಲೆ ನಡೆದಿದೆ. ಇವರಿಬ್ಬರೂ ಸಂಡೂರಿನಿಂದ ಬಳ್ಳಾರಿಗೆ ಬರುತ್ತಿದ್ದ ಕೆಎ 35 ಎಫ್​​ 350 ನಂಬರಿನ ಕೆಎಸ್​ಆರ್​ಟಿಸಿ ಬಸ್​ನ ಚಾಲಕ ಮತ್ತು ನಿರ್ವಾಹಕರು.

ಆಗಿದ್ದೇನು? ಚಾಲಕನ ಅಸಹಾಯಕತೆ ಏನು?

ಡಿಸೆಂಬರ್‌ 29ರ ಸಂಜೆ ಸಂಡೂರಿನಿಂದ ಬಳ್ಳಾರಿಗೆ ಹೊರಟಿದ್ದ ಕೆ.ಎಸ್‌ಆರ್ಟಿಸಿ ಬಸ್‌ಗೆ ಬಸ್ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಹತ್ತಿದರು. ಬಸ್‌ ಹತ್ತಿದವರೇ ʻʻನಮ್ಮ ಕಡೆಯವರು ಬರುತ್ತಿದ್ದಾರೆ. ಒಂದೈದು ನಿಮಿಷ ಬಸ್‌ ನಿಲ್ಲಿಸಿʼ ಎಂದು ಮನವಿ ಮಾಡಿದ್ದಾರೆ. ಚಾಲಕ ಮತ್ತು ನಿರ್ವಾಹಕ ಇಬ್ಬರಿಗೂ ಈ ಮಾತು ಹೇಳಿದರು. ಮಹಿಳೆಯರ ಮಾತಿಗೆ ಗೌರವ ನೀಡಿದ ಚಾಲಕ ಪಂಪಣ್ಣ ಹೊರಡುವ ಸಮಯ ಕಳೆದು ಐದು ನಿಮಿಷಗಳ ಹೆಚ್ಚುವರಿ ಅವಧಿ ಬಸ್‌ ನಿಲ್ಲಿಸಿದರು. ಆದರೆ, ಮಹಿಳೆಯರು ಹೇಳಿದವರು ಬರಲೇ ಇಲ್ಲ.

ಈ ನಡುವೆ ಪ್ರಯಾಣಿಕರು ಗಲಾಟೆ ಶುರು ಮಾಡಿದರು. ಸಮಯಕ್ಕೆ ಸರಿಯಾಗಿ ಬಸ್‌ ಬಿಡಬೇಕು, ಐದು ನಿಮಿಷ ಕಾದಿದ್ದಾಗಿದೆ. ಇನ್ನೂ ಕಾಯೋದು ಸರಿಯಲ್ಲ. ನಮಗೆ ಲೇಟಾಗುತ್ತದೆ ಎಂದು ಜಗಳ ಶುರು ಮಾಡಿದರು. ಕೊನೆಗೆ ಪ್ರಯಾಣಿಕರ ಒತ್ತಾಯದ ಮೇರೆಗೆ ಚಾಲಕ ಪಂಪಣ್ಣ ಬಸ್‌ ಚಲಾಯಿಸಿದರು.

ಇದು ಬಸ್‌ ನಿಲ್ಲಿಸಿ ಎಂದು ಮನವಿ ಮಾಡಿದ ಮಹಿಳೆಯರ ಪಿತ್ತ ಕೆರಳಿಸಿತು. ಅವರು ಹಂಪಣ್ಣ ಮತ್ತು ನಿರ್ವಾಹಕನನ್ನು ಉದ್ದೇಶಿಸಿ “ಸ್ವಲ್ಪ ಹೊತು ಬಸ್ ನಿಲ್ಲಿಸಿ ಅಂದರೂ ನಿಲ್ಲಿಸಿಲ್ಲ, ನಿಮ್ಮ ಅಪ್ಪನದಾ ಬಸ್? ಎಂದು ಅವಾಚ್ಯ ಪದಳಿಂದ ನಿಂದಿಸಿದರು. ಆಗ ಮಹಿಳೆಯರು ಮತ್ತು ಚಾಲಕನ ನಡುವೆ ವಾಗ್ವಾದ ಶುರುವಾಯಿತು. ಈ ನಡುವೆ ಮಹಿಳೆಯರು ಬಳ್ಳಾರಿಗೆ ಬಾ.. ಅಲ್ಲಿ ನಮ್ಮ ಕಡೆ ಜನ ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ.

ಇದಾದ ಬಳಿಕ ಮಹಿಳೆಯರು ಸಂಡೂರಿನಲ್ಲಿ ನಡೆದ ಘಟನೆಯನ್ನು ತಮ್ಮ ಊರಿನವರಿಗೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸುಮಾರು 30ರಿಂದ 40 ಜನರ ಗುಂಪು ಬಳ್ಳಾರಿ ಬಳಿ ಬಸ್‌ನ್ನು ಬೆನ್ನಟ್ಟಿ ಬಂದಿದೆ. ಕೊನೆಗೆ ಬಸ್‌ ಡಿಪೋಗೆ ಬಂದು ನಿಲ್ಲುತ್ತಿದ್ದಂತೆಯೇ ಏಕಾಏಕಿ ಬಸ್ ಒಳಗೆ ನುಗ್ಗಿದ ಗುಂಪು ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ಮಾಡಿದೆ.

ಇದನ್ನೂ ಓದಿ : Murder Case: ಅಳಿಯನ ಕೊಂದು ಅಪಘಾತ ಎಂದು ಕಥೆ ಕಟ್ಟಿದ ʼಮನಿಹಾಳʼ ಮಾವ!

ʻʻನಾವು ಬಳ್ಳಾರಿಯ ಮುಂಚೇರಿ ಗ್ರಾಮದವರು ನಮ್ಮನ್ನ ಕೆಣಕಿದರೇ ಹಿಂಗೆ ಆಗೋದುʼʼ ಎಂದು ಅವಾಜ್ ಹಾಕಿದ ಅವರು ಚಾಲಕ ಮತ್ತು ನಿರ್ವಾಹಕರ ತಲೆ, ಮುಖ, ಬೆನ್ನು ಭಾಗಗಳಿಗೆ ಹಲ್ಲೆ ಮಾಡಿದ್ದಾರೆ. ರ್ವಾಹಕ ಮಲ್ಲಿಕಾರ್ಜುನ ಮತ್ತು ಚಾಲಕ ಪಂಪಣ್ಣ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಬಳ್ಳಾರಿಯ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಾಗಿದೆ ಎನ್ನುವುದನ್ನು ಸರಿಯಾಗಿ ತಿಳಿಯದೆ ಮಹಿಳೆಯರು ಹೇಳಿದರು ಎಂಬ ಕಾರಣಕ್ಕೆ ಬಸ್‌ ತಡೆದು ಹಲ್ಲೆ ಮಾಡಿದ ಈ ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

Exit mobile version