ಬಳ್ಳಾರಿ: ಮದುವೆಯಾಗುವೆ ಎಂದು ಆನ್‌ಲೈನ್‌ನಲ್ಲಿ ಪರಿಚಯವಾಗಿ ಬೆಳದಿಂಗಳ ಬಾಲೆಯಾಗಿ ಕಾಡಿದ ಯುವತಿ, ಲಕ್ಷಾಂತರ ರೂಪಾಯಿ ಲಪಟಾಯಿಸುವ ಮೂಲಕ ಖಾಸಗಿ ಶಾಲೆ ಶಿಕ್ಷಕರೊಬ್ಬರನ್ನು ಮೂರ್ಖರನ್ನಾಗಿ ಮಾಡಿದ ಸಿನೀಮಿಯ ಶೈಲಿಯ ಆನ್‌ಲೈನ್ ವಂಚನೆ ಪ್ರಕರಣ (Matrimonial Fraud) ಜಿಲ್ಲೆಯಲ್ಲಿ ನಡೆದಿದೆ. ಮೋಸ ಹೋದ ಬಳಿಕ ನ್ಯಾಯಕ್ಕಾಗಿ ಶಿಕ್ಷಕ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ದೇವೇಂದ್ರಪ್ಪ, ಮದುವೆಗೆ ಮ್ಯಾಟ್ರಿಮೊನಿ ಆ್ಯಪ್ ಮೊರೆ ಹೋಗಿ ಕೈ ಸುಟ್ಟುಕೊಂಡ ಶಿಕ್ಷಕ. ಬಳ್ಳಾರಿ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರು, ಕೇರಳದ ಕುಟ್ಟಿಯೊಬ್ಬಳ ಹೆಸರಿನಲ್ಲಿ ಬೆಳದಿಂಗಳ ಬಾಲೆ ಆನ್‌ಲೈನ್‌ನಲ್ಲಿ ಪರಿಚಯವಾಗಿದೆ. ಅಲ್ಲದೇ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ನಂತರ ತನ್ನ ವಿದ್ಯಾಭ್ಯಾಸಕ್ಕೆಂದು ೮.೫ ಲಕ್ಷ ರೂ.ಗಳನ್ನು ಖಾತೆಗೆ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾಳೆ. ಇದರಿಂದ ಮದುವೆ ಇಲ್ಲ, ಹಣ ಇಲ್ಲವೆಂಬಂತೆ ಶಿಕ್ಷಕ ಕೈ ಸುಟ್ಟುಕೊಂಡು, ದಿಕ್ಕು ತೋಚದಂತಾಗಿದ್ದಾರೆ.
ಆರಂಭದಿಂದ ಕೊನೆಯವರೆಗೆ ಬೆಳಂದಿಗಳ ಬಾಲೆ
ಹರ್ಷಿತಾ ಎನ್ನುವ ಹೆಸರಿನೊಂದಿಗೆ ಕೇರಳದ ಕುಟ್ಟಿ ಪರಿಚಯವಾಗಿ ಆರಂಭದಲ್ಲಿ ನಾನು ಎಂಬಿಬಿಎಸ್ ಮಾಡುತ್ತಿದ್ದೇನೆ, ನಾನು ಓದುವುದು ಮುಗಿದ ಮೇಲೆ ಮದುವೆಯಾಗುತ್ತೇನೆಂದು ಹೇಳಿಕೊಂಡು ಅಮಾಯಕ ಶಿಕ್ಷಕನಿಂದ ಸುಮಾರು ೮.೫೪ ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾಳೆ. ಎರಡೂವರೆ ವರ್ಷದಿಂದ ಕೇವಲ ವಾಟ್ಸ್ ಆ್ಯಪ್ ಕಾಲ್ ಮತ್ತು ಮೆಸೇಜ್‌ಗೆ ಸೀಮಿತವಾಗಿ ಬೆಳದಿಂಗಳ ಬಾಲೆಯಾಗಿ ಉಳಿದಿದ್ದಾಳೆ. ತನ್ನ ಹೆಸರು ಹರ್ಷಿತಾ ಎಂದು ಹೇಳಿಕೊಂಡು ಮಾತನಾಡಿದ್ದಾಳೆ, ಸ್ಟೆಥಾಸ್ಕೋಪ್ ಹಿಡಿದುಕೊಂಡಿರುವುದು ಸೇರಿ ಐದಾರು ಫೋಟೋಗಳೊಂದಿಗೆ ಇವಳೇ ನಾನು ಎಂದು ಹೇಳಿಕೊಂಡಿದ್ದು ಬಿಟ್ಟರೆ, ವಂಚನೆಗೊಳಗಾದ ವ್ಯಕ್ತಿ ಮುಖತಃ ಅವಳನ್ನು ಭೇಟಿಯಾಗಿಲ್ಲ ಎನ್ನಲಾಗಿದೆ.
”ಮದುವೆಯಾಗಬೇಕೆಂದು ಮ್ಯಾಟ್ರಿಮೊನಿ ಆ್ಯಪ್ ಮೊರೆ ಹೋದಾಗ ಹುಡುಗಿ ಪರಿಚಯವಾಗಿದ್ದಳು. ನಂತರ ಓದಿಗಾಗಿ ಮಾನವೀಯತೆಯಿಂದ ಯುವತಿಗೆ ಹಣ ಕೊಟ್ಟಿದ್ದೆ. ನಂತರ ಆಕೆಯ ವಿಳಾಸ ಹುಡುಕಿಕೊಂಡು ಹೋದಾಗ ಆಕೆಯನ್ನು ಭೇಟಿಯಾಗಲು ಸಾಧ್ಯವಾಗಿಲ್ಲ” ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೇವೇಂದ್ರಪ್ಪ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಆನ್‌ಲೈನ್ ವಂಚಕಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಯುವತಿಗೆ ಯಾರೋ ದಾರಿ ತಪ್ಪಿಸುತ್ತಿದ್ದಾರೆ?
ದುಡ್ಡು ಕಳೆದುಕೊಂಡ ದೇವೇಂದ್ರಪ್ಪ ಹೇಳುವ ಪ್ರಕಾರ ನಾನೇನು ಅಮಾಯಕನಲ್ಲ, ಅವಳ ಕೊಟ್ಟ ಕಾಲೇಜಿನ ಹೆಸರು ಸರಿಯಾಗಿದೆ. ಬ್ಯಾಂಕ್ ಖಾತೆ ಮತ್ತು ವಿಳಾಸವನ್ನು ನೋಡಿದ್ದೇನೆ ಎಲ್ಲವೂ ಸರಿಯಾಗಿದೆ. ಆದರೆ ಮದುವೆಯಾಗುವುದಾಗಿ ಕೇಳಿ ಕೊನೆಗೆ ವಂಚಿಸಿದ್ದಾಳೆ. ಇವಳಿಗೆ ಯಾರೋ ದಾರಿ ತಪ್ಪಿಸುತ್ತಿದ್ದಾರೆ. ಆಕೆಯನ್ನು ಪತ್ತೆ ಹಚ್ಚಿ, ನಾನು ಕೊಟ್ಟಿರುವ ಹಣವನ್ನು ಹಿಂದಕ್ಕೆ ಕೊಡಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಸೈಬರ್ ಕ್ರೈಂಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಆನ್‌ಲೈನ್ ಬಹುಮಾನ ಮತ್ತು ಆಫರ್‌ಗಳ ಬಗ್ಗೆ ಎಚ್ಚರ ಇರಲಿ. ತಮಗೆ ಅನುಮಾನ ಬಂದಾಕ್ಷಣ ಸೈಬರ್ ಕ್ರೈಂ ಪೊಲೀಸ್ ಹೆಲ್ಪ್‌ಲೈನ್ ೧೯೩೦ಕ್ಕೆ ಕರೆ ಮಾಡಿ ತಿಳಿಸಬೇಕು.
| ರಂಜಿತ್ ಕುಮಾರ್ ಬಂಡಾರು, ಎಸ್‌ಪಿ, ಬಳ್ಳಾರಿ
ಇದನ್ನೂ ಓದಿ | Domestic violence | ಪತ್ನಿಯ ಕಿರುಕುಳ ತಾಳಲಾರದೆ ಮದುವೆಯಾದ ಮೂರೇ ತಿಂಗಳಲ್ಲಿ ಗಂಡ ಆತ್ಮಹತ್ಯೆ