Site icon Vistara News

ನನಗೆ, ಸಿದ್ದರಾಮಯ್ಯಗೆ ಜಯಕಾರ ಬೇಡ; ದೇಶಕ್ಕೆ ಜೈ ಎನ್ನಿ: ಭಾರತ್‌ ಜೋಡೊ ಪೂರ್ವಭಾವಿ ಸಭೆಯಲ್ಲಿ ಡಿಕೆಶಿ

dk shivakumar bellary

ಬಳ್ಳಾರಿ: ಐದು ವಿಷಯಗಳನ್ನು ಮುಂದಿಟ್ಟುಕೊಂಡು ರಾಹುಲ್‌ ಗಾಂಧಿಯವರು ಭಾರತ್‌ ಜೋಡೊ ಯಾತ್ರೆಯನ್ನು ಆರಂಭಿಸಿದ್ದು, ಕರ್ನಾಟಕದಲ್ಲಿ ನಡೆಯುವ ಏಕೈಕ ಬಹಿರಂಗ ಸಭೆ ಬಳ್ಳಾರಿಯಲ್ಲಿ ಆಗಲಿದೆ. ಯಾವುದೇ ವ್ಯಕ್ತಿಯನ್ನು ವೈಭವೀಕರಿಸದೇ ದೇಶವನ್ನು, ಕಾಂಗ್ರೆಸ್‌ ಪಕ್ಷವನ್ನು ಎಲ್ಲರೂ ಮುನ್ನೆಲೆಗೆ ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ನಡೆಯುವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಡಿ.ಕೆ. ಶಿವಕುಮಾರ್‌ ಮಾತನಾಡಿದರು.

ಐದು ವಿಚಾರಗಳನ್ನು ಮುಂದಿಟ್ಟುಕೊಂಡು ರಾಹುಲ್‌ ಗಾಂಧಿ ನಡಿಗೆ ಮಾಡುತ್ತಿದ್ದಾರೆ. 1. ಭಾರತ ಸರ್ವಜನಾಂಗದ ಶಾಂತಿಯ ತೋಟ. ಜಾತಿ, ಭಾಷೆ ಎಲ್ಲವನ್ನೂ ಮೀರಿ ಸಾಮರಸ್ಯ ಮೂಡಬೇಕು. ೨. ನಿರುದ್ಯೋಗ ಸಮಸ್ಯೆ ಎದುರಾಗಿದ್ದು, ಇದಕ್ಕೊಂದು ಉಪಾಯ ಒದಗಿಸಲು ಯುವಕರೊಂದಿಗೆ ಮಾತನಾಡಲಿದ್ದಾರೆ. ನಿರುದ್ಯೋಗಿ ಯುವಕರು ವೆಬ್‌ಸೈಟ್‌ಗೆ ನೋಂದಣಿ ಆಗಬೇಕು. ೩. ಜನಸಾಮಾನ್ಯರ ಅವಶ್ಯಕತೆಯ ವಸ್ತುಗಳ ಬೆಲೆ ಗಗನಕ್ಕೇರಿವೆ, ಆದಾಯ ಕಡಿಮೆಯಾಗಿದೆ. ಅಕ್ಕಿ, ಮೊಸರನ್ನೂ ಬಿಡದೆ ಜಿಎಸ್‌ಟಿ ವಿಧಿಸಿ ಬದುಕಿಗೆ ತೊಂದರೆಯಾಗಿದೆ. ೪. ಭ್ರಷ್ಟಾಚಾರದ ರಾಜಧಾನಿಯಾಗಿ ಕರ್ನಾಟಕ ಹೆಸರು ಪಡೆದಿದೆ. ಒಬ್ಬ ಸ್ವಾಮೀಜಿಯೊಬ್ಬರು, ಕಾಂಟ್ರ್ಯಾಕ್ಟರ್‌ ಅಸೋಸಿಯೇಷನ್‌ನವರು ಆರೋಪಿಸಿದ್ದಾರೆ. ಎಲ್ಲ ಕಡೆ ಭ್ರಷ್ಟಾಚಾರ ರಹಿತ ವಾತಾವರಣ ನಿರ್ಮಾಣ ಆಗಬೇಕು. ೫. ರೈತ ಬೆಳೆದಂತಹ ಬೆಲೆಗೆ ಸೂಕ್ತವಾದ ಬೆಲೆ ಸಿಗಬೇಕು.

ರಾಹುಲ್‌ ಗಾಂಧಿಯವರು ಕರ್ನಾಟಕದ ಬೇರೆ ಜಿಲ್ಲೆಗಳ ಮೇಲೆ ಹಾದುಹೋಗಬಹುದಿತ್ತು. ಆದರೆ ತಮ್ಮ ತಾಯಿ ಸೋನಿಯಾ ಗಾಂಧಿಯವರಿಗೆ ಜೀವ ಕೊಟ್ಟಂತಹ ಜಿಲ್ಲೆ ಬಳ್ಳಾರಿ, ಅಲ್ಲಿಯ ಮೂಲಕ ಹಾದುಹೋಗುತ್ತೇನೆ ಎಂದು ತೀರ್ಮಾನಿಸಿದ್ದಾರೆ.

ಕರ್ನಾಟಕದ ಎಲ್ಲ ಕಡೆಗಳಲ್ಲಿಯೂ ಕಾರ್ನರ್‌ ಮೀಟಿಂಗ್‌ ಮಾತ್ರ ನಡೆಯುತ್ತದೆ. ಆದರೆ ಬಳ್ಳಾರಿಯಲ್ಲಿ ಮಾತ್ರವೇ ಬೃಹತ್‌ ಸಮಾವೇಶ ಏರ್ಪಡಿಸಲಾಗಿದೆ. ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿಯ ಕಾರ್ಯಕರ್ತರು ಈ ಸಮಾವೇಶದ ಹೊಣೆ ಹೊರಬೇಕು. ಪ್ರತಿಯೊಂದು ಮನೆಗೂ ಪ್ರವಾಸ ಮಾಡಬೇಕು. ಎಂಪಿಗಳು, ಜಿಲ್ಲಾ ಕಾರ್ಯದರ್ಶಿಯಿಂದ ಎಲ್ಲರೂ ತೊಡಗಿಸಿಕೊಂಡು ಸಿದ್ಧತಾ ಸಭೆ ಮಾಡಬೇಕು. ಎಷ್ಟು ಜನರು ಹೊರಡುತ್ತಾರೆ ಎನ್ನುವ ಲೆಕ್ಕಾಚಾರ ಹಾಕಬೇಕು. ದುಡ್ಡುಕೊಟ್ಟು ಯಾರನ್ನೂ ಕರೆತರುವುದು ಬೇಡ. ಪ್ರೀತಿ ವಿಶ್ವಾಸದಿಂದ ದೇಶಕ್ಕಾಗಿ ಬರಬೇಕು ಎಂದರು.

ರಾಹುಲ್‌ ಗಾಂಧಿಯವರ ಟಿ ಷರ್ಟ್‌ ಕುರಿತು ಬಿಜೆಪಿ ಟಿಕೆಗೆ ಉತ್ತರ ನೀಡಿದ ಡಿ.ಕೆ. ಶಿವಕುಮಾರ್‌, ದೊಡ್ಡದೊಡ್ಡ ಕಂಪನಿಯ ಬ್ರ್ಯಾಂಡ್‌ನ ಜೀನ್ಸ್‌ ಪ್ಯಾಂಟ್‌ಗಳು ಬಳ್ಳಾರಿಯಲ್ಲಿ ತಯಾರಾಗುತ್ತವೆ. ಅದೇ ರೀತಿ ಟಿ ಷರ್ಟ್‌ಗಳು ಬೆಂಗಳೂರಿನಲ್ಲಿ ತಯಾರಾಗುತ್ತವೆ. ಬಿಜೆಪಿಯವರು ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ ಎಂದರು.

ರಾಹುಲ್‌ ಗಾಂಧಿಯವರದ್ದು ಐರನ್‌ ಲೆಗ್‌ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಕಬ್ಬಿಣದಿಂದ ಕತ್ತರಿಯನ್ನೂ ತಯಾರಿಸಬಹುದು, ಸೂಜಿಯನ್ನೂ ತಯಾರಿಸಬಹುದು. ಬಿಜೆಪಿಯವರು ಕತ್ತರಿ ಹಿಡಿದು ಎಲ್ಲರ ಜೇಬನ್ನು ಕತ್ತರಿಸುತ್ತಿದ್ದಾರೆ. ರಾಹುಲ್‌ ಗಾಂಧಿಯವರು ಸೂಜಿ ಹಿಡಿದು ಎಲ್ಲರನ್ನೂ ಜೋಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ದೊಡ್ಡಬಳ್ಳಾಪುರದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಭಾಷಣದ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್‌, ಬೊಮ್ಮಾಯಿ ದಮ್‌ ಕೇಳುತ್ತಿದ್ದಾರೆ. ನಿಮ್ಮ ದಮ್‌ನ ಕೊನೆಯ ದಿನ ಬರುತ್ತಿದೆ. ನಿಮ್ಮ ದಮ್‌ ಇಳಿಯುತ್ತದೆ, ನಮ್ಮ ದಮ್‌ ಏರುತ್ತದೆ. ಕಾಂಗ್ರೆಸ್‌ 150 ಸೀಟ್‌ ಗೆಲ್ಲುತ್ತದೆ.

ಯಾರ‍್ಯಾರು ಎಂಎಲ್‌ಎ ಆಗಬೇಕು ಎಂದುಕೊಂಡಿದ್ದೀರೊ, ಬಳ್ಳಾರಿಯ ರಸ್ತೆಗಳಲ್ಲಿ ನನ್ನ ಫೋಟೊ, ರಾಹುಲ್‌ ಗಾಂಧಿಯವರ ಫೋಟೊ, ಸಿದ್ದರಾಮಯ್ಯ ಫೋಟೊ ಹಾಕುವುದು ಬೇಡ. ನಮ್ಮನ್ನು ಜನ ನೋಡಿದ್ದಾರೆ. ಇಡೀ ರಸ್ತೆಯಲ್ಲಿ ನಿಮ್ಮ ಫೋಟೊ ಹಾಕಿಕೊಂಡು ನಿಮ್ಮ ಶಕ್ತಿ ಪ್ರದರ್ಶನ ಮಾಡಿ. ನೀವು ಕೆಲಸ ಮಾಡಿದ್ದೀರಿ ಎಂದು ನಿಮ್ಮನ್ನು ಜನರು ಗುರುತಿಸಲಿ.

ಕಾರ್ಯಕ್ರಮದ ದಿನ 11 ಗಂಟೆಯೊಳಗೆ ಎಲ್ಲರೂ ಆಗಮಿಸಿ ಕುಳಿತಿರಬೇಕು, ಕಾರ್ಯಕ್ರಮ ಮುಗಿಯುವವರೆಗೂ ಎಲ್ಲರೂ ಇರಬೇಕು. ಫ್ರೀಡಂ ಮಾರ್ಚ್‌ ಹಾಗೂ ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮದಲ್ಲೂ ಹೆಚ್ಚು ಜನರಿದ್ದರು. ಅದೆಲ್ಲಕ್ಕಿಂತ ಹೆಚ್ಚಿನ ಜನರು ರಾಹುಲ್‌ ಗಾಂಧಿಯವರ ಕಾರ್ಯಕ್ರಮಕ್ಕೆ ಸೇರಬೇಕು. ನಮ್ಮಲ್ಲಿ ಯಾರಿಗೂ ಜೈಕಾರ ಬೇಡ. ರಾಹುಲ್‌ ಗಾಂಧಿಗೆ ಜೈ, ಭಾರತಕ್ಕೆ ಜೈ, ಕಾಂಗ್ರೆಸ್‌ಗೆ ಜೈ ಅಂದರೆ ಸಾಕು ಎಂದರು.

ಇದನ್ನೂ ಓದಿ | BJP ಜನಸ್ಪಂದನ | ದೇಶ ಒಡೆವವರ ಜತೆ ಕೈ ಜೋಡಿಸಿದ ಕಾಂಗ್ರೆಸ್‌ನಿಂದ ಭಾರತ್‌ ಜೋಡೊ ನಾಟಕ: ಸ್ಮೃತಿ ಇರಾನಿ ವಾಗ್ದಾಳಿ

Exit mobile version