ಬಳ್ಳಾರಿ: ಬಿಸಿಲ ನಗರಿ ಬಳ್ಳಾರಿಯಲ್ಲಿ ಗುರುವಾರ ಸಂಜೆಯಿಂದ ರಾತ್ರಿ ಸುರಿದ ಭಯಂಕರವಾದ ಆಲಿಕಲ್ಲು ಮಳೆಗೆ ಜನಜೀವನ ತತ್ತರಿಸಿ ಹೋಗಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಯೆಲ್ಲಾ ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿತ್ತು. ಮಳೆಯ ನೀರಿನಿಂದ ಮನೆಯ ಸಾಮಾನು ರಕ್ಷಣೆಗೆ ಹರಸಾಹಸ ಪಡುವಂತಾಯಿತು.
ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುಳಿವೆ, ಇದರಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಇರಲಿಲ್ಲ. ಇಡೀ ನಗರವೇ ಕತ್ತಲಲ್ಲಿ ಕಳೆಯುವಂತಾಯಿತು. ಆಲಿಕಲ್ಲು ಮತ್ತು ಧಾರಾಕಾರ ಮಳೆಗೆ ನೂರಾರು ಮರಗಳು ನೆಲಕ್ಕುಳಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸಂಗನಕಲ್ಲು ರಸ್ತೆಯ ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದಿದೆ. ಅಲಲ್ಲಿ ಮನೆಗಳ ಮೇಲೆ, ವಾಹನಗಳ ಮೇಲೆ ಮರಗಳು ಬಿದ್ದಿವೆ. ಕೆಲವೊಂದು ಶಾಲೆಗಳ ಆಡಳಿತ ಮಂಡಳಿಗಳು ಶಾಲೆಯನ್ನು ಒಂದು ಗಂಟೆ ತಡವಾಗಿ ಆರಂಭಿಸಿವೆ.
ಬೆಳಿಗ್ಗೆಯಿಂದಲೇ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಬೇಟಿ ನೀಡುತ್ತಿದ್ದಾರೆ. ಶಾಸಕರಿಗೆ ಆಯಾ ವಾರ್ಡಿನ ಪಾಲಿಕೆ ಸದಸ್ಯರು ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ: Monsoon 2022: ಜೂ.2ಕ್ಕೆ ಕರ್ನಾಟಕಕ್ಕೆ ಮುಂಗಾರು ಪ್ರವೇಶ; 7ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ