Site icon Vistara News

ಸಿಎಂ ಬೊಮ್ಮಾಯಿ ಮಾತಿನಿಂದ ಬೇಸರವಾಗಿದೆ; ಆದರೂ ಸಹಿಸಿಕೊಳ್ಳುವೆ ಎಂದ ಬೇಲೂರು JDS ಶಾಸಕ ಲಿಂಗೇಶ್‌

Belur MLA KS Lingesh upset over CM Basavaraj bommai remarks about him

ಹಾಸನ: ತಮ್ಮ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಆಡಿದ ಮಾತಿನಿಂದ ಬೇಸರವಾಗಿದೆ. ಆದರೆ ನನ್ನ ಮಗನನ್ನು ಕಳೆದುಕೊಂಡಿದ್ದಕ್ಕಿಂತ ದೊಡ್ಡ ನೋವಲ್ಲದೇ ಇರುವುದರಿಂದ ನುಂಗಿಕೊಳ್ಳುತ್ತೇನೆ ಎಂದು ಬೇಲೂರು ಜೆಡಿಎಸ್‌ ಶಾಸಕ ಕೆ.ಎಸ್‌. ಲಿಂಗೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಜನಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಬುಧವಾರ ಸಂಜೆ ಬೇಲೂರು ತಾಲೂಕಿನ ಹಳೇಬೀಡಿನಲ್ಲಿರುವ ಪುಷ್ಪಗಿರಿ ಮಠದ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.

ಈ ವೇಳೆ ವೇದಿಕೆಯಲ್ಲಿ ಮಾತನಾಡಿದ್ದ ಬೊಮ್ಮಾಯಿ, ರಣಘಟ್ಟ ಯೋಜನೆಗಾಗಿ ಪುಷ್ಪಗಿರಿ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದರು. ರೈತರು, ಸ್ವಾಮೀಜಿಗಳು,ರಾಜಕೀಯ ಪಕ್ಷಗಳು ಹೋರಾಟ ಮಾಡಿದ್ದರು. ಲಿಂಗೇಶ್ ನೀನು ಇದ್ಯಾ? ಆಗಿನ್ನೂ ನೀನು ಎಂಎಲ್‌ಎ ಆಗಿರಲಿಲ್ಲ. ಗೊತ್ತಿದೆ ನನಗೆ, ಆ ಹೋರಾಟವೇ ನಿನ್ನ ಎಂಎಲ್ಎ ಮಾಡೋಕೆ ಕಾರಣ ಆಯಿತು.

ಬೇಲೂರು ರಾಜಕಾರಣ ನನಗೆ ಸಂಪೂರ್ಣ ಗೊತ್ತಿದೆ. ನಮ್ಮ ಲಿಂಗೇಶಣ್ಣ ಬಹಳ ಬುದ್ದಿವಂತ ಇದ್ದಾನೆ. ನಾಟಕದಲ್ಲಿ ಹೆಂಗೆಂಗೆ ಪಾತ್ರ ಇರುತ್ತೆ, ಹಂಗಂಗೆ ಡೈಲಾಗ್ ಇರುತ್ತವೆ. ಅದು ಹೇಗೆ ಮಾಡಿದರೂ ಜನರ ಹಿತದೃಷ್ಟಿ, ರೈತರ ಹಿತದೃಷ್ಟಿ ಇರುತ್ತದೆ. ಹೀಗಾಗಿ ನಾವು ಯಾವತ್ತಿದ್ದರೂ ಅವನ ಒಳ್ಳೆಯ ಕೆಲಸಕ್ಕೆ ಬೆಂಬಲ ಕೊಡುತ್ತೇವೆ. ರಣಘಟ್ಟ ನೀರಾವರಿ ಯೋಜನೆ ಹೋರಾಟಕ್ಕೆ ಬಂದಾಗ ನಾನು ವಿರೋಧ ಪಕ್ಷದಲ್ಲಿದ್ದೆ. ಇದು ಆಗಲೇ ಬೇಕು, ಯಾವುದೇ ಸರ್ಕಾರವಿದ್ದರೂ ಆಗಲೇಬೇಕು ಎಂದಿದ್ದೆ. ನಂತರ ನನಗೆ ಸಿಕ್ಕಿದ ಪ್ರಥಮ ಅವಕಾಶದಲ್ಲಿ ನಮ್ಮ ನಾಯಕರಾದ ಯಡಿಯೂರಪ್ಪರಿಗೆ ಹೇಳಿದೆ. ಇದೇ ಲಿಂಗೇಶ್‌ ಬಂದಿದ್ದ. ಯಡಿಯೂರಪ್ಪರಿಗೆ ಹೇಳಣ್ಣ, ಅವರು ಮನಸ್ಸಿಗೆ ತಗೋತಿಲ್ಲ ಎಂದು ಕೇಳಿದ್ದ. ನಾನು ಹೋಗಿ ಮಾತನಾಡಿ, ಇದು ಆಗಲೇಬೇಕು. ಆ ಭಾಗದ ಜನರ ಹಲವಾರು ವರ್ಷದ ಬರ ನೀಗಸಬೇಕಾದರೆ ಇದಾಗಲೇಬೇಕು ಎಂದು ಒತ್ತಾಯ ಮಾಡಿದ್ದೆ. ಆನಂತರ ಲಿಂಗೇಶ್‌, ಅವರಿಗೂ ಸನ್ಮಾನ ಮಾಡಿದ, ನನಗೂ ಸನ್ಮಾನ ಮಾಡಿದ ಎಂದಿದ್ದರು.

ಮುಂದೆ ಮಾತನಾಡುತ್ತ, ಬಹಳ ಬೆರಿಕಿ ಇದಿಯಾ ನೀ ಎಂದರು. ಇಲ್ಲ ನಾನು ನಿಯತ್ತಾಗಿದ್ದೇನೆ ಎಂದು ಶಾಸಕ ಲಿಂಗೇಶ್ ಹೇಳಿದ್ದರು. ನನಗೆ ಗೊತ್ತಿದೆ ನಿಯತ್ತು ಯಾವುದು, ಬೆರಿಕಿ ಯಾವುದು ಅನ್ನೋ ವ್ಯತ್ಯಾಸ. ಅದಕ್ಕಿಂತ ಮೊದಲು ಹಳೇಬೀಡು ಮಾದಿಹಳ್ಳಿ ಯೋಜನೆಗೆ ಮಂಜೂರಾತಿ ಕೊಟ್ಟಿದ್ದೆ. 20 ಕೆರೆಗಳಿಗೆ ನೀರು ತುಂಬಿಸಲು ದುಡ್ಡು ಬಿಡುಗಡೆ ಮಾಡಿದ್ದೆ. ಅದು ತಾಂತ್ರಿಕ ತೊಂದರೆ ಆಗಿತ್ತು, ಅದು ಈಗ ನೀಗಿದೆ. 20 ಕೆರೆಗಳು ತುಂಬಿವೆ. ಆ ಯೋಜನೆಯೂ ಕೂಡ ಬಿಜೆಪಿ ಸರ್ಕಾರ ಇದ್ದಾಗಲೇ ಆಗಿದ್ದು. ರಣಘಟ್ಟ ಕೂಡ ಬಿಜೆಪಿ ಸರ್ಕಾರ ಇದ್ದಾಗಲೇ ಮಂಜೂರಾತಿ ಮಂಜೂರಾತಿ ಸಿಕ್ಕಿದ್ದು ಎಂದು ಲಿಂಗೇಶ್‌ ಕಾಲೆಳೆದಿದ್ದರು.

ಲಿಂಗೇಶ್‌ ಬೇಸರ

ತಮ್ಮ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಆಕ್ಷೇಪರ್ಹ ಪದ ಬಳಸಿದ್ದಕ್ಕೆ ಕೆ.ಎಸ್‌. ಲಿಂಗೇಶ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಏನೇ ಹೇಳಿಕೊಳ್ಳಲಿ. ಮುಖ್ಯಮಂತ್ರಿ ಯಾರಿಗೆ? ಒಂದು ಪಾರ್ಟಿಗಾ? ನಾನು ಕರ್ನಾಟಕದ ಒಬ್ಬ ಶಾಸಕ. ಅದರಲ್ಲಿ ಬೇಲೂರು ಸೇರಿದೆ. ನನ್ನ ನಿಯತ್ತು ನನ್ನ ಪಕ್ಷಕ್ಕೆ ಎಂದು ನಾನು ಹೇಳಿದ್ದೆ. ಕೆಲಸ ಮಾಡಿಕೊಡುತ್ತಾರೆ ಎಂದೋ, ಬೇರೆ ಆಮಿಷಕ್ಕೋ ಒಳಗಾಗಿ ಪಕ್ಷ ಬಿಡುವುದಕ್ಕೆ ಆಗುತ್ತದ? ಎಂದ ಲಿಂಗೇಶ್‌, ಆಪರೇಷನ್ ಕಮಲದ ವೇಳೆ ಬಿಜೆಪಿಗೆ ನನನ್ನು ಆಹ್ವಾನಿಸಿದ್ದರು ಎಂದರು.

ನಾನೊಬ್ಬ ಸಾಮಾನ್ಯ ರೈತನ ಮಗ, ನಮಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲ. ಅಂತಹ ಸಂದರ್ಭದಲ್ಲಿ ನನಗೆ ಟಿಕೆಟ್, ಹಣ ಕೊಟ್ಟು ಬಂದು ಆಶೀರ್ವಾದ ಮಾಡಿ ಜನರ ಹತ್ತಿರ ಕಳುಹಿಸಿ ನನಗೆ ಸಹಕಾರ ಕೊಟ್ಟವರು ಕುಮಾರಣ್ಣ, ರೇವಣ್ಣ, ದೇವೇಗೌಡರು.

ಹಾಗಾಗಿ ನಾನು ಬೇರೆ ತರಹ ಯೋಚನೆ ಮಾಡಲು ಆಗುವುದಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ನಮಗೆ ಸಂಸ್ಕಾರ ನೀಡಿದ್ದಾರೆ. ಆ ಸಂಸ್ಕಾರ ಅನ್ನೋದು ನಿಯತ್ತು, ನಿಯತ್ತನ್ನೇ ಬರ್‌ಕತ್ ಅನ್ನೋದು. ನನಗೆ ಬೇಕಾಗಿರುವುದು ಕ್ಷೇತ್ರದ ಕೆಲಸ, ರಾಜಕಾರಣ ಅಲ್ಲ. ರಾಜಕಾರಣ ಇವತ್ತು ಬರುತ್ತದೆ, ನಾಳೆ ಹೋಗುತ್ತದೆ. ರಾಜಕಾರಣ ದೃಷ್ಟಿ ಇಟ್ಟುಕೊಂಡು ಯಾವುದೇ ಕೆಲಸ ಮಾಡುತ್ತಿಲ್ಲ. ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ನನ್ನ ಹೆಸರು ಉಳಿಸಲು ಅವನೊಬ್ಬ ಇದ್ದ. ಈಗ ನನ್ನ ಹೆಸರು ಉಳಿಯಬೇಕೆಂದರೆ ನಾಲ್ಕಾರು ಒಳ್ಳೆಯ ಕೆಲಸ ಮಾಡಬೇಕು, ಜನರ ಮನದಲ್ಲಿ ಇರಬೇಕು.

ರಣಘಟ್ಟ ಯೋಜನೆ ನನ್ನ ಕನಸು. ಕುಮಾರಣ್ಣ ಆಗಲ್ಲ ಎಂದರೂ, ಇಂಜಿನಿಯರ್‌ಗಳು ಹೇಳಿದ್ದಕ್ಕೆ ಬಜೆಟ್‌ನಲ್ಲಿ ನೂರು ಕೋಟಿ ಇಟ್ಟು ಹೋದರು. ನಾವು ರೈತರು, ನಿಯತ್ತಿಗೆ ತಕ್ಕನಾಗಿ ನಡೆದುಕೊಳ್ಳುವವರು. ಯಾವತ್ತಿದ್ದರೂ ಮಾಜಿ ಆಗಬೇಕು ಎನ್ನುವ ಅರಿವು ನನಗಿದೆ. ಅವರು ದೊಡ್ಡವರಿದ್ದಾರೆ, ಹೆಚ್ಚಿಗೆ ಮಾತನಾಡಲ್ಲ. ನನಗೆ ನನ್ನ ಕ್ಷೇತ್ರದ ಕೆಲಸ ಮುಖ್ಯ. ಹಾಗಾಗಿ ಕೆಲವನ್ನು ನುಂಗಿಕೊಳ್ಳಬೇಕಾಗುತ್ತೆ. ನನ್ನ ಕ್ಷೇತ್ರದ ಜನರಿಗೋಸ್ಕರ ಎಷ್ಟೇ ನೋವಾದರೂ ಸ್ವೀಕಾರ ಮಾಡುತ್ತೇನೆ. ಮಗನನ್ನು ಕಳೆದುಕೊಂಡು ಆಗಿರುವ ನೋವಿಗಿಂತ ದೊಡ್ಡದೇನಲ್ಲ ಇದು. ನನ್ನ ಕ್ಷೇತ್ರದ ಅಭಿವೃದ್ಧಿಗೆ ಯಾರ ಕೈ ಕಾಲು ಬೇಕಾದರೂ ಹಿಡಿಯುತ್ತೇನೆ. ಅವರು ಬಹುಶಃ ಬೇಕು ಅಂತ ಹೇಳಿದ್ದಲ್ಲ, ಮಾತನಾಡಬೇಕಾದ್ರೆ ಬಂದಿದ್ದು ಎಂದುಕೊಳ್ಳುತ್ತೇನೆ. ಹಾಗಾಗಿ ಪದ ಬಳಕೆ ಆಕಸ್ಮಿಕ ಎಂದು ನಾನು ತಿಳಿದುಕೊಂಡಿದ್ದೇನೆ ಎಂದರು.

ಇದನ್ನೂ ಓದಿ | ಎಲೆಕ್ಷನ್‌ ಹವಾ | ಬೇಲೂರು | ಐತಿಹಾಸಿಕ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗೇ ಮಣೆ

Exit mobile version