Site icon Vistara News

Beneficiary Meet: ಪ್ರತಿ ಜಿಲ್ಲೆಯಲ್ಲೂ ಮತದಾರರನ್ನು ಸೆಳೆಯಲು ಮುಂದಾದ ಬಿಜೆಪಿ: ಮಾರ್ಚ್‌ 4ರಿಂದ ಫಲಾನುಭವಿಗಳ ಸಮಾವೇಶ

#image_title

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು (Beneficiary Meet) ಒಟ್ಟಿಗೆ ಸೇರಿಸಿ ಸಮಾವೇಶ ನಡೆಸುವ, ಆ ಮೂಲಕ ಚುನಾವಣೆಗೆ ಮತಗಳನ್ನು ಸೆಳೆಯುವ ಪ್ರಧಾನಿ ಮೋದಿ ಮಾದರಿಯನ್ನು ರಾಜ್ಯ ಸರ್ಕಾರ ಅನುಸರಿಸಲು ಮುಂದಾಗಿದೆ.

ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಜಿಲ್ಲಾವಾರು ಸಮಾವೇಶದಲ್ಲಿ ಒಟ್ಟಾಗಿಸುವ ಮೂಲಕ ಬಿಜೆಪಿ ಸರ್ಕಾರ ಹಾಗೂ ಡಬಲ್‌ ಇಂಜಿನ್‌ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾರ್ಚ್‌ 4ರಿಂದ ಮಾರ್ಚ್‌ 20ರವರೆಗೆ ನಡೆಯಲಿದೆ.

ಈ ಕುರಿತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಗಣಿ ಹಾಗೂ ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಅಬಕಾರಿ ಸಚಿವರಾದ ಗೋಪಾಲಯ್ಯ, ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ ಜಂಟಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

“ಸಬ್ ಕಾ ಸಾಥ್ ಸಬ್ ಕಾ ವಿಕಾಸ್” “ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಎಂಬುದೂ ನಮ್ಮ ಆಡಳಿತದ ಮೂಲ ಮಂತ್ರ. ಇದನ್ನು ನಾವು ಮಾತನಾಡಿ ಸುಮ್ಮನಾಗಲಿಲ್ಲ. ಅದನ್ನು ಕಾರ್ಯರೂಪಕ್ಕೆ ಇಳಿಸಿದೆವು. ಇದರ ಪರಿಣಾವಾಗಿ ಸಮಾಜದ ಕಲ್ಯಾಣಕ್ಕೆ ಪೂರಕವಾದ ಯೋಜನೆಗಳು ನಾಡಿನ ಪ್ರತೀ ಮನೆ ಮನೆಯನ್ನೂ ತಲುಪಿದೆ ಎಂದು ಸೋಮಶೇಖರ್‌ ತಿಳಿಸಿದರು.

ರಾಜ್ಯ ಸರ್ಕಾರದ ಯೋಜನೆಗಳ ಫಲವನ್ನು ಪ್ರತೀ ಮನೆಯ ಒಂದಿಲ್ಲೊಂದು ಫಲಾನುಭವಿಗಳನ್ನು ತಲುಪಿದೆ. ಈ ಮೂಲಕ ಲಕ್ಷಾಂತರ ಜನರು ಸರಕಾರದ ಸಹಾಯವನ್ನು ಪಡೆಯುತ್ತಿದ್ದಾರೆ. ಜಿಲ್ಲಾವಾರು ಅವಲೋಕನ ನಡೆಸಿದರೆ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಂಖ್ಯೆ ನಮ್ಮ ಸರಕಾರ ಬಂದ ಮೇಲೆ ಪ್ರತೀ ಜಿಲ್ಲೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ.

ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದ ಈ ಎಲ್ಲ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರೊಡನೆ ಯೋಜನೆಗಳು ತಲುಪಿರುವುದನ್ನು ಖಾತ್ರಿ ಪಡಿಸಬೇಕು ಹಾಗೂ ಈ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಮತ್ತು ಈ ಫಲಾನುಭವಿಗಳೊಡನೆ ಸಮಾಲೋಚಿಸಿ, ಮತ್ತಷ್ಟು ಜನಹಿತ ಚಿಂತನೆಗಳನ್ನು ಯೋಚಿಸಿ, ಯೋಜಿಸಬೇಕೆಂಬುದು ನಮ್ಮ ಮುಖ್ಯಮಂತ್ರಿಗಳ ಆಶಯವಾಗಿದೆ. ಇದಕ್ಕಾಗಿ ನಾವು ಪ್ರತೀ ಜಿಲ್ಲೆಯಲ್ಲೂ ಫಲಾನುಭವಿಗಳ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.

ಇದು ನಮ್ಮ ಸಾಧನೆಯ ಪ್ರದರ್ಶನವಲ್ಲ ಎಂದ ಸೋಮಶೇಖರ್‌, ನಾಡಿನ ಜನತೆಗೆ ನಮ್ಮ ನಿಜವಾದ ಕಳಕಳಿಯಿಂದ ರೂಪಿತವಾದ ಯೋಜನೆಗಳು ಜನರನ್ನು ತಲುಪಿರುವುದನ್ನು ಖಾತ್ರಿಪಡಿಸಿಕೊಳ್ಳುವುದಷ್ಟೇ ಇದರ ಉದ್ದೇಶ. ಈ ಮೂಲಕ ನಮ್ಮ ಸರಕಾರದ ಯೋಜನೆಗಳ ಫಲಾನುಭವಿಗಳನ್ನು ಮುಖತಃ ಭೇಟಿ ಮಾಡುವುದೂ ಈ ಸಮಾವೇಶದ ಉದ್ದೇಶವಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಪಿಎಂ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ, ಲಂಬಾಣಿ ಜನಾಂಗದವರಿಗೆ ನೀಡಿದ ಹಕ್ಕು ಪತ್ರ ವಿತರಣೆ, ನೇಕಾರ ಮೀನುಗಾರರಿಗೆ ಸಮ್ಮಾನ್ ಯೋಜನೆ, ಮಾತೃ ವಂದನ ಯೋಜನೆ, ಭಾಗ್ಯಲಕ್ಷ್ಮಿ/ಸುಕನ್ಯಾ ಸಮೃದ್ಧಿ, ಯಶಸ್ವಿನಿ ಯೋಜನೆಗಳಂತಹವುಗಳ ಲಾಭ ನೇರವಾಗಿ ಜನರಿಗೆ ತಲುಪುವಂತಹ ಯೋಜನೆಗಳ ಜೊತೆಗೆ, ಜನಸೇವಕ, ಗ್ರಾಮ ಒನ್‌ನಂತಹ ಯೋಜನೆಗಳು, ಭೂ ಪರಿವರ್ತನೆ ವಿಧೇಯಕಕ್ಕೆ ತಿದ್ದುಪಡಿ ತಂದಿರುವುದು ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಸೌಕರ್ಯವನ್ನೊದಗಿಸುವ ಯೋಜನೆಗಳಾಗಿವೆ ಎನ್ನುವುದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಸಂಗತಿ ಎಂದರು.

ಇದನ್ನೂ ಓದಿ: karnataka budget 2023 : ಮನೆ ಬಾಗಿಲಿಗೆ ಸರಕಾರ, 52,000 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ಮಾರ್ಚ್ 4ರಿಂದ 20ರವರೆಗೆ ಪ್ರತಿ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 4ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಆಯ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರ ಸಮ್ಮುಖದಲ್ಲಿ ಸಮಾವೇಶ ನಡೆಯಲಿದೆ.

ಸಮಾವೇಶದಲ್ಲಿ ಫಲಾನುಭವಿಗಳೊಂದಿಗೆ ಮಾತನಾಡಲಾಗುತ್ತದೆ. ಯೋಜನೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.

Exit mobile version