ಬೆಂಗಳೂರು: ನ್ಯಾಯಮೂರ್ತಿಗಳ ಮೇಲೆಯೇ ಮಾನಸಿಕ ಒತ್ತಡ ಹಾಕಬಹುದು ಎನ್ನಲಾಗುತ್ತಿರುವ ಎಸಿಬಿ ಮುಖ್ಯಸ್ಥ ಸೀಮಂತ್‌ಕುಮಾರ್ ಸಿಂಗ್ ಅವರ ಕುರಿತು ತನಿಖೆ ಆಗಬೇಕು ಎಂದು ಬೆಂಗಳೂರು ವಕೀಲರ ಸಂಘ ಆಗ್ರಹಿಸಿದೆ.
ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ. ಮಂಜುನಾಥ್ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ಕಾರಣಕ್ಕೆ ಎಸಿಬಿ ವಿರುದ್ಧ ಚಾಟಿ ಬೀಸಿದ್ದ ಹೈಕೋರ್ಟ್ ನ್ಯಾ. ಎಚ್.ಪಿ. ಸಂದೇಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಸಿಬಿ ಸೂಕ್ತ ತನಿಖೆ ನಡೆಸುತ್ತಿಲ್ಲ ಎಂದು ಈ ಹಿಂದೆ ತಿಳಿಸಿದ್ದ ನ್ಯಾ. ಸಂದೇಶ್, ನಂತರ ತಮ್ಮನ್ನು ವರ್ಗಾವಣೆ ಮಾಡುವ ಕುರಿತು ಮಾತುಗಳು ಕೇಳಿಬಂದಿದ್ದವು ಎಂದು ಮತ್ತೊಮ್ಮೆ ವಿಚಾರಣೆ ವೇಳೆ ಸೋಮವಾರ ತಿಳಿಸಿದ್ದರು. ತಮ್ಮನ್ನು ವರ್ಗಾವಣೆ ಮಾಡಿದರೂ ಸರಿ, ಹೆದರುವುದಿಲ್ಲ ಎಂದು ತಿಳಿಸಿದ್ದರು. ಈ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ ವಿವೇಕ್ ಸುಬ್ಬಾರೆಡ್ಡಿ, ನ್ಯಾಯಾಂಗದ ಇತಿಹಾಸದಲ್ಲಿ ಇಂತಹ ಘಟನೆ ನಡೆದಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಪಾರದರ್ಶಕತೆ ಬಗ್ಗೆ ನ್ಯಾಯಮೂರ್ತಿಯವರು ಪ್ರಶ್ನೆ ಎತ್ತಿದ್ದಾರೆ. ಸೀಮಂತ್‌ಕುಮಾರ್ ಅವರ ಕುರಿತು ನ್ಯಾಯಮೂರ್ತಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆಂತರಿಕ ತನಿಖೆ ಆಗಬೇಕು ಎಂದರು.
ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಬಂಧಿಸಲಾಗಿದೆ. ಆದರೆ ಅವರು ಕಳೆದೊಂದು ವರ್ಷದಿಂದ ಅನೇಕ ಆದೇಶಗಳನ್ನು ಮಾಡಿದ್ದಾರೆ. ಅವೆಲ್ಲವನ್ನೂ ಸರ್ಕಾರ ರದ್ದುಮಾಡಬೇಕು. ನ್ಯಾಯಮೂರ್ತಿಯವರ ಮೇಲೆ ವಕೀಲರು ಒತ್ತಡ ಹೇರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಒಬ್ಬ ನ್ಯಾಯಾಧೀಶರು ಮತ್ತೊಬ್ಬ ನ್ಯಾಯಾಧೀಶರ ಕುರಿತು ಮಾತನಾಡಬಾರದು ಎಂಬ ನಿಯಮ ಬರಬೇಕು. ಈ ಕುರಿತು ಸುಪ್ರೀಂಕೋರ್ಟ್ ತನಿಖೆ ಮಾಡಬೇಕು ಎಂದು ರೆಡ್ಡಿ ಆಗ್ರಹಿಸಿದರು.
ಇದನ್ನೂ ಓದಿ | ಭ್ರಷ್ಟಾಚಾರ: ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆ ಎಂದ ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆ ವೈರಲ್