ಬೆಂಗಳೂರು: ರಾಜ್ಯ ಸರ್ಕಾರ ಜಾರಿ ಮಾಡಲು ಹೊರಟಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಜೂನ್ 11ರ ಭಾನುವಾರದಿಂದ ಜಾರಿಗೆ ಬರಲಿದೆ. ಆದರೆ ಬೆಂಗಳೂರಿನಲ್ಲಿ ಈ ಯೋಜನೆಗೆ ಆಟೊ ಚಾಲಕರಿಂದ ವಿರೋಧ ವ್ಯಕ್ತವಾಗಿದೆ.
ಈ ಕುರಿತು ವಿಸ್ತಾರ ನ್ಯೂಸ್ ಜತೆಗೆ ಅನೇಕ ಆಟೊ ಚಾಲಕರು ಪ್ರತಿಕ್ರಿಯಿಸಿದ್ದಾರೆ. ಪ್ರತಿ ಸರ್ಕಾರಕ್ಕೆ ನಮ್ಮ ಬೆಂಬಲ ಇರುತ್ತದೆ. ಬಿಜೆಪಿ ಸರ್ಕಾರ ನಮಗೆ ಏನೂ ಮಾಡಲಿಲ್ಲ. ಅವರಿಗೆ ಏನಾಗಿದೆ ಎಲ್ಲರಿಗೂ ಗೊತ್ತಾಗಿದೆ. ನೀವು ಏನು ಮಾಡಿದರೂ ಚಾಲಕರ ಪರವಾಗಿರಿ. ಚಾಲಕರದ್ದು ಒಂದು ಓಟು ಮಾತ್ರ ಅಲ್ಲ. ನಮ್ಮ ಹೆಂಡತಿ ಮಕ್ಕಳು, ತಂದೆ ತಾಯಿಯೂ ಇದ್ದಾರೆ ಎಂದಿದ್ದಾರೆ.
ಕೆಎಸ್‌ಆರ್‌ಟಿಸಿ ಚಾಲಕರಿಗೂ ಸೌಲಭ್ಯ ಕೊಡಿ. ಫ್ರೀ ಕೊಡ್ತೀವಿ ಎಂದು ಹೇಳುತ್ತಿದ್ದೀರ, ಜನರ ದುಡ್ಡು ಕೊಡುತ್ತೀರ, ಕೊಡಿ. 75% ಮಹಿಳೆಯರು ಆಟೊದಲ್ಲಿ ಓಡಾಡುತ್ತಾರೆ. ಈಗ ಅವರೆಲ್ಲರೂ ಬಸ್‌ನಲ್ಲಿ ಓಡಾಡಿದರೆ ಆಟೊದವರಿಗೆ 75% ನಷ್ಟ ಆಗುತ್ತದೆ. ಉಚಿತ ಬಸ್ ಸೇವೆಯಿಂದ ಬಡವರಿಗೆ ಅನುಕೂಲ ಆಗುತ್ತದೆ, ಅದರಲ್ಲಿ ನನ್ನ ಹೆಂಡತಿ, ತಾಯಿಗೂ ಅನುಕೂಲ ಆಗುತ್ತದೆ. ಆದರೆ ಆಟೊ ಚಾಲಕರಿಗೆ ಹೊಡೆತ ಬೀಳುವುದು ಖಚಿತ. ಇದಕ್ಕೆ ಪರಿಹಾರ ಏನು ಗೊತ್ತಾಗುತ್ತಿಲ್ಲ. ಸರ್ಕಾರವೇ ಇದರ ಬಗ್ಗೆ ಯೋಚನೆ ಮಾಡಿ. ಈ ಯೋಜನೆ ಘೋಷಣೆ ಆದಾಗಿನಿಂದಲೇ ನಮಗೆ ಬಾಡಿಗೆ ಕಡಿಮೆ ಆಗಿದೆ ಎಂದಿದ್ದಾರೆ. ಆಟೊ ಚಾಲಕರ ಪ್ರತಿಕ್ರಿಯೆಗಳ ವಿಡಿಯೋ ಈ ಕೆಳಗಿದೆ…
ಜೂನ್ 11ರಂದು ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಗಲಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನಸೌಧದ ಬಳಿ ಯೋಜನೆಗೆ ಚಾಲನೆ ನೀಡಿ ಸಿದ್ದರಾಮಯ್ಯ ಮಾತನಾಡಲಿದ್ದಾರೆ.
ಆದರೆ ಅದಕ್ಕೂ ಮುನ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ(ಮೆಜೆಸ್ಟಿಕ್) ವಿಧಾನಸೌಧದವರೆಗೆ ಮಾರ್ಗ ಸಂಖ್ಯೆ 43ರಲ್ಲಿ ಸಿದ್ದರಾಮಯ್ಯ ಬಸ್‌ನಲ್ಲೇ ಚಲಿಸಲಿದ್ದಾರೆ. ಈ ವೇಳೆ ಉಚಿತ ಟಿಕೆಟ್‌ಗಳನ್ನು ಮಹಿಳೆಯರಿಗೆ ಸಿದ್ದರಾಮಯ್ಯ ನೀಡಲಿದ್ದಾರೆ. ಈ ರೀತಿ ವಿಧಾನಸೌಧದವರೆಗೂ ಕಂಡಕ್ಟರ್ ಆಗಿ ಕೆಲಸ ಮಾಡಲಿದ್ದಾರೆ.
ಇದನ್ನೂ ಓದಿ: Congress Guarantee: ಪಾರ್ಟ್ ಟೈಂ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!