Site icon Vistara News

Bengaluru Bandh : ಅರ್ಧ ದಿನಕ್ಕೇ ಬೆಂಗಳೂರು ಬಂದ್‌ ವಾಪಸ್‌; ಆ ಒಂದು ಬೇಡಿಕೆ ಬಿಟ್ಟು 16ಕ್ಕೆ ಸಚಿವರ ಒಪ್ಪಿಗೆ

Bengaluru bandh called off

ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಬಸ್‌, ಆಟೊ, ಟ್ಯಾಕ್ಸಿ, ಶಾಲಾ ವಾಹನಗಳನ್ನು ಒಳಗೊಂಡ 32 ಸಂಘಟನೆಗಳು ಕರೆ ನೀಡಿದ 24 ಗಂಟೆಗಳ ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್‌ (Bengaluru bandh) 14 ಗಂಟೆಗಳಲ್ಲೇ ಮುಕ್ತಾಯಗೊಂಡಿದೆ. ಭಾನುವಾರ ರಾತ್ರಿ ಆರಂಭಗೊಂಡ ಈ ಸಾರಿಗೆ ಬಂದ್‌ ಸೋಮವಾರ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ನೀಡಿದ ಭರವಸೆಗಳಿಗೆ ಮನ್ನಣೆ ನೀಡಿ ಅಂತ್ಯಗೊಂಡಿದೆ. ರಾಮಲಿಂಗಾ ರೆಡ್ಡಿ ಅವರು 16 ಬೇಡಿಕೆಗಳನ್ನು ಶೀಘ್ರ ಈಡೇರಿಸುವುದಾಗಿ ತಿಳಿಸಿದರು. ಆದರೆ, ಶಕ್ತಿ ಯೋಜನೆ (Shakti Scheme) ರದ್ದು ಮಾಡಬೇಕು ಎಂಬ ಬೇಡಿಕೆ ಸಲ್ಲದೆಂದರು.

ರಾತ್ರಿಯಿಂದಲೇ ಖಾಸಗಿ ಪ್ರಯಾಣಿಕ ವಾಹನಗಳ ಓಡಾಟವನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಬೆಳಗ್ಗೆ ಪ್ರಯಾಣಿಕರು ಸ್ವಲ್ಪ ಮಟ್ಟಿಗೆ ಪರದಾಟ ನಡೆಸಬೇಕಾಯಿತು. ಖಾಸಗಿ ವಾಹನಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಮಧ್ಯಾಹ್ನದ ಹೊತ್ತಿಗೆ ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಮೆರವಣಿಗೆ ನಡೆದು ಸಮಾವೇಶ ನಡೆಸಲಾಯಿತು. ಅಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಪೀಸ್ ಅಟೋ ಚಾಲಕರ ಸಂಘದ ಅಧ್ಯಕ್ಷ ರಘು, ಟ್ಯಾಕ್ಸಿ ಚಾಲಕರ ಸಂಘದ ನಾರಾಯಣಸ್ವಾಮಿ, ARDO ಬೆಂಬಲಿತ ಆಟೋ ಸಂಘಟನೆ ಅಧ್ಯಕ್ಷ ಶ್ರೀನಿವಾಸ್ ಮತ್ತು ಇತರರು ಭಾಗಿಯಾಗಿದ್ದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ರಾಮಲಿಂಗಾ ರೆಡ್ಡಿ ಅವರ ಮುಂದೆ ಪ್ರತಿಭಟನಾಕಾರರ ನಾಯಕರು ತಮ್ಮ ಸಮಸ್ಯೆ ಹೇಳಿಕೊಂಡರು. ಎಲ್ಲರ ಸಮಸ್ಯೆಗಳನ್ನು ಆಲಿಸಿದ ರಾಮಲಿಂಗಾ ರೆಡ್ಡಿ ಅವರು ಶಕ್ತಿ ಯೋಜನೆ ಮತ್ತು ತೆರಿಗೆ ಹೆಚ್ಚಳ ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವುದು. ಉಳಿದೆಲ್ಲವೂ ಹಿಂದಿನಿಂದಲೇ ಇರುವ ಸಮಸ್ಯೆ. ಇದೆಲ್ಲವನ್ನೂ ಪರಿಹರಿಸಲು ನಾವು ಬದ್ಧರಾಗಿದ್ದೇವೆ ಎಂದರು. ಆದರೆ, ಶಕ್ತಿ ಯೋಜನೆ ರದ್ದುಪಡಿಸುವ ಖಾಸಗಿ ಬಸ್‌ ಮಾಲೀಕರ ಸಂಘದ ಬೇಡಿಕೆಯನ್ನು ಅವರು ಒಪ್ಪಲಿಲ್ಲ. ಎಲ್ಲದಕ್ಕೂ ಪರ್ಯಾಯವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು.

ಹಾಗಿದ್ದರೆ ಒಕ್ಕೂಟದ ಬೇಡಿಕೆಗಳು ಏನೇನಿದ್ದವು? ಈಡೇರಿದ್ದು ಯಾವುದು?

ಎಸ್. ಆಟೋ, ಕ್ಯಾಬ್, ಮ್ಯಾಕ್ಸಿಕ್ಯಾಬ್, ಸ್ಕೂಲ್ ವ್ಯಾನ್, ಗೂಡ್ಸ್ ವಾಹನ ಹಾಗು ಖಾಸಗಿ ಬಸ್‌ಗಳ ಸಂಘಟನೆಗಳನ್ನು ಒಳಗೊಂಡಿದ್ದ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿತ್ತು. ಎಲ್ಲ ರೀತಿಯ ಖಾಸಗಿ ಸಾರಿಗೆ ಸಂಘಟನೆಗಳಿಗೆ ಅವರದ್ದೇ ಆದ ಭಿನ್ನವಿಭಿನ್ನ ಬೇಡಿಕೆಗಳಿದ್ದವು.

ಆಟೋಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಶಕ್ತಿ ಯೋಜನೆಯಿಂದ ಉಂಟಾಗಿರುವ ನಷ್ಟ ಪರಿಹಾರವಾಗಿ ಸರ್ಕಾರದಿಂದ ಆಟೋ ಚಾಲಕರಿಗೆ 10 ಸಾವಿರ ರೂಪಾಯಿ ಮಾಸಿಕ ಪರಿಹಾರ ಹಣ ನೀಡಬೇಕು.
  2. ಅಸಂಘಟಿತ ಚಾಲಕರಿಗೆ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು‌
  3. ಸರ್ಕಾರದಿಂದಲೇ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಬೇಕು.
  4. ಎಲೆಕ್ಟ್ರಿಕ್ ಆಟೋಗಳಿಗೆ ರಹದಾರಿ ನೀಡಬೇಕು

ಟ್ಯಾಕ್ಸಿಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಜೀವಾವಧಿ ತೆರಿಗೆಯನ್ನು ಕಂತುಗಳಲ್ಲಿ ಪಾವತಿಸುವಂತೆ ಮಾಡಬೇಕು
  2. ಚಾಲಕರಿಗೆ ವಸತಿ ಯೋಜನೆಯನ್ನು ಕಲ್ಪಿಸಬೇಕು
  3. ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಬೇಕು.
  4. ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಕೊಡಬೇಕು

ಬಸ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಖಾಸಗಿ ಬಸ್‌ಗಳಿಗೂ ಸ್ತ್ರೀ ಶಕ್ತಿ ಯೋಜನೆ ವಿಸ್ತರಿಸಬೇಕು
  2. ರಸ್ತೆ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಬೇಕು‌.
  3. ಖಾಸಗಿ ಬಸ್‌ಗಳನ್ನ ಕಿಲೋಮೀಟರ್ ಆಧಾರದಲ್ಲಿ ಸರ್ಕಾರವೇ ಬಾಡಿಗೆಗೆ ಪಡೆಯಬೇಕು

ಗೂಡ್ಸ್ ವಾಹನಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಪೋರ್ಟರ್ ಸಂಸ್ಥೆಯಿಂದ ಆಗ್ತಿರೋ ಅನ್ಯಾಯ ಸರಿಪಡಿಸಬೇಕು
  2. ವಾಹನಗಳ ಚಾಲಕರ ಮೇಲೆ ಪ್ರಕರಣ ದಾಖಲಿಸುವ ಬದಲು ಪೋರ್ಟರ್ ಮೇಲೆ ದಾಖಲಿಸಬೇಕು
  3. ಅಕ್ರಮವಾಗಿ ಚಾಲಕರ ಡಿಎಲ್ ರದ್ದು ಮಾಡಲಾಗ್ತಿರೋದಕ್ಕೆ ಪೂರ್ಣವಿರಾಮ ಹಾಕಬೇಕು

ಸ್ಕೂಲ್‌ ವ್ಯಾನ್‌ಗಳಿಗೆ ಸಂಬಂಧಿಸಿದ ಬೇಡಿಕೆಗಳು

  1. ಶಾಲಾ ವ್ಯಾನ್‌ಗಳನ್ನು ಚಲಾಯಿಸಲು ಪರ್ಮಿಟ್ ನೀಡಬೇಕು
  2. ಸೀಝ್ ಆದ ವ್ಯಾನ್‌ಗಳ ಮೇಲೆ ವಿಧಿಸುತ್ತಿರೋ ಫೈನ್ ಮೊತ್ತವನ್ನು ಇಳಿಸಬೇಕು
  3. ತೆರಿಗೆ ಕಟ್ಟಿದ್ರೂ ವಯೋಲೇಶನ್ ಅಂತ ನಕಲಿ ಕೇಸ್‌ಗಳನ್ನು ಹಾಕುವುದು ನಿಲ್ಲಿಸಬೇ

    ಇದನ್ನೂ ಓದಿ: Bengaluru Bandh : ಬೆಂಗಳೂರು ಬಂದ್‌ ವಾಪಸ್‌; ಖಾಸಗಿ ಸಾರಿಗೆ ಒಕ್ಕೂಟ ಘೋಷಣೆ, ಫಲಿಸಿದ ರಾಮಲಿಂಗಾ ರೆಡ್ಡಿ ಸಂಧಾನ

ಸಾರಿಗೆ ಸಚಿವರು ಈಡೇರಿಸಲು ಒಪ್ಪಿದ ಬೇಡಿಕೆಗಳು

ಸುಮಾರು ಒಂದು ಗಂಟೆಗೂ ಅಧಿಕ ಕಾಲ ನೆರೆದಿದ್ದ ಪ್ರತಿಭಟನಾನಿರತ ಮುಖಂಡರ ಬೇಡಿಕೆಗಳನ್ನು ಆಲಿಸಿ ಅವರಿಂದ ಸರ್ಕಾರಕ್ಕೆ ನೀಡಬೇಕಿದ್ದ ಮನವಿ ಪತ್ರವನ್ನೂ ಪಡೆದರು ಸಚಿವ ರಾಮಲಿಂಗಾ ರೆಡ್ಡಿ. ಈ ವೇಳೆ ವೇದಿಕೆಯಲ್ಲಿ ಸಾರಿಗೆ ಇಲಾಖೆಯ ಆಯುಕ್ತರು ಸೇರಿದಂತೆ ಹೆಚ್ಚುವರಿ ಆಯುಕ್ತರಗಳೂ ಉಪಸ್ಥಿತರಿದ್ದರು. ನಂತರ ಮಾತನಾಡಿದ ಸಾರಿಗೆ ಸಚಿವರ ರಾಮಲಿಂಗಾರೆಡ್ಡಿ, ಇನ್ನು ಮುಂದೆ ಒಕ್ಕೂಟದ ಕೇವಲ ನೀವು ಮಾತ್ರವಲ್ಲ. ನಾನೂ ಕೂಡ ಅದರಲ್ಲಿ ಪಾಲುದಾರನಾಗಿದ್ದೇನೆ. ನಿಮ್ಮ ಪರವಾಗಿ ನಾನು ಸರ್ಕಾರಕ್ಕೆ ಮನವರಿಕೆ ಮಾಡುತ್ತೇನೆ ಎಂದರು. ಇನ್ನು, ಅವರೇ ಹೇಳಿದಂತೆ ಈ ಇಷ್ಟೂ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದರು.

  1. ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುತ್ತದೆ.
  2. ಏರ್‌ಪೋರ್ಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತದೆ.
  3. ಚಾಲಕರ ಅನುಕೂಲಕ್ಕೆ ಅಗ್ರಿಗೇಟರ್ ಆ್ಯಪ್ ಸಿದ್ಧಪಡಿಸಲಾಗುತ್ತದೆ.
  4. ಆ್ಯಪ್ ಮೂಲಕ ಖಾಸಗಿ ಸಂಸ್ಥೆ ಹಣ ಮಾಡೋದಕ್ಕೆ ಕಡಿವಾಣ ಹಾಕಲಾಗುತ್ತದೆ.
  5. ಹಿಂದುಳಿದ ವರ್ಗಗಳ ನಿಗಮದಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಕೋರಿಕೆ ಇದ್ದು, ಅದು ಕೂಡ ಮಾಡಿಸಿಕೊಡಲಾಗುತ್ತದೆ.
  6. ಲೈಫ್ ಟ್ಯಾಕ್ಸ್ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ.
  7. ಓಲಾ, ಊಬರ್, ಬೈಕ್ ಟ್ಯಾಕ್ಸಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ನಡಿತಿದೆ, ಇದಕ್ಕೆ ಸೀನಿಯರ್ ವಕೀಲರನ್ನು ಇಟ್ಟು ವೆಕೇಟ್ ಮಾಡಿಸುತ್ತೇವೆ.
  8. ಒಂದು ನಗರ, ಒಂದು ದರ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತದೆ.
  9. ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಜತೆ ಮಾತನಾಡಲಾಗಿದ್ದು, ವಸತಿ ಯೋಜನೆ ಕಲ್ಪಿಸುತ್ತೇವೆ.
  10. ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ 17 ಕೋಟಿ ಅನುದಾನ ಇಡಲಾಗುತ್ತದೆ.
  11. ಬಸ್ ಮಾಲೀಕರ ಸಂಘದ ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ ಆಗಬೇಕಿದೆ.
  12. ಖಾಸಗಿ ವಾಹನ ಕಿಲೋಮೀಟರ್ ಮೇಲೆ ತೆಗೆದುಕೊಳ್ಳುವ ಬಗ್ಗೆ ಎಂಡಿ ಜತೆ ಚರ್ಚೆ ಮಾಡಬೇಕಾಗುತ್ತದೆ.
  13. ಟ್ಯಾಕ್ಸ್ ಕಡಿಮೆ ಮಾಡುವ ಬಗ್ಗೆ ಸಿಎಂ ಜತೆ ಮಾತುಕತೆ ಆಗಲಿದೆ.
  14. ಟ್ರಾಫಿಕ್ ಪೊಲೀಸರು ಫೈನ್ ಕಟ್ಟಲು 50% ಡಿಸ್ಕೌಂಟ್ ಕೊಟ್ಟ ಹಾಗೆ ಟ್ಯಾಕ್ಸ್ ಒನ್ ಟೈಂ ಸೆಟಲ್‌ಮೆಂಟ್ ಬಗ್ಗೆ ಚರ್ಚೆ ನಡೆಸಲಾಗುತ್ತೆ.
  15. ಶಾಲೆ ವಾಹನ ಸಣ್ಣ amendment ಮಾಡಿಸಬೇಕಾಗುತ್ತೆ.
  16. ಪೋರ್ಟರ್ ವಾಹನ ಲೈಸೆನ್ಸ್ ತೆಗೆದುಕೊಂಡಿಲ್ಲವಾಗಿಲ್ಲದಿರುವುದರಿಂದ ಕಾನೂನುಬಾಹಿರ. ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

Exit mobile version