Site icon Vistara News

Bengaluru Bandh: ಬೆಂಗಳೂರು ಬಂದ್‌ ಬಿಸಿ; ಏರ್‌ಪೋರ್ಟ್‌ ಟ್ಯಾಕ್ಸಿಗೆ ಕಲ್ಲೇಟು, ಈ ಮಾರ್ಗ ಬದಲಾಯಿಸಿ

Airport Taxi

Bengaluru Bandh: Stone Pelted On Airport Taxi, Some Routes Are Changed in The City

ಬೆಂಗಳೂರು: ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ವತಿಯಿಂದ ಸೋಮವಾರ (ಸೆಪ್ಟೆಂಬರ್‌ 11) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿರುವುದರಿಂದ ರಾಜಧಾನಿಯ ಜನರಿಗೆ ಬಂದ್‌ ಬಿಸಿ ತಟ್ಟಿದೆ. ಭಾನುವಾರ ತಡರಾತ್ರಿಯಿಂದಲೇ ಖಾಸಗಿ ಬಸ್‌, ಆಟೋ, ಓಲಾ, ಉಬರ್‌ನಂತಹ ಕ್ಯಾಬ್‌ಗಳ ಓಡಾಟ ಸ್ಥಗಿತಗೊಂಡಿದೆ. ಇದರ ಬೆನ್ನಲ್ಲೇ ಏರ್‌ಪೋರ್ಟ್‌ ಟ್ಯಾಕ್ಸಿಯೊಂದರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಏರ್‌ಪೋರ್ಟ್‌ನಿಂದ ಆಗಮಿಸುವ ವೇಳೆ ಏರ್‌ಪೋರ್ಟ್‌ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಪ್ರದ್ಯುಮ್ನ ಎಂಬುವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. “ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಏನಾಗಿದೆ? ಏರ್‌ಪೋರ್ಟ್‌ನಿಂದ ಆಗಮಿಸುವಾಗ ನಾನು ಸಂಚರಿಸುತ್ತಿದ್ದ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನಾನು, ನನ್ನ ಹೆಂಡತಿ ಹಾಗೂ 6 ವರ್ಷದ ಮಗನು ದಾಳಿಯಿಂದ ಭೀತಿಗೊಳಗಾದೆವು. ಟ್ಯಾಕ್ಸಿಯ ಗಾಜುಗಳು ಪುಡಿಪುಡಿಯಾಗಿವೆ. ಭಾನುವಾರ ರಾತ್ರಿಯಿಂದಲೇ ಬಂದ್‌ ಇರುವುದಾದರೆ, ಸೂಕ್ಷ್ಮ ಪ್ರದೇಶಗಳಲ್ಲಿ ಏಕೆ ಪೊಲೀಸರನ್ನು ನಿಯೋಜಿಸಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.

ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಿ ಬಂದ್‌ಗೆ ಕರೆ ನೀಡಿರುವುದರಿಂದ ಏರ್‌ಪೋರ್ಟ್‌ ಟ್ಯಾಕ್ಸಿಯ ಓಡಾಟ ಕಂಡು ಪ್ರತಿಭಟನಾಕಾರರು ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಿ ಪ್ರದ್ಯುಮ್ನ ಅವರು ದೂರು ನೀಡಿದ್ದಾರೆ. ಭಾನುವಾರ ಮಧ್ಯರಾತ್ರಿಯಿಂದಲೇ ಬಸ್‌, ಶಾಲಾ ವಾಹನ, ಆಟೋ, ಕ್ಯಾಬ್‌ಗಳ ಸೇವೆ ಸ್ಥಗಿತವಾಗಿದ್ದು, ಜನ ಪರದಾಡುತ್ತಿದ್ದಾರೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಿಂದ ಜನ ಬೇರೆ ತೆರಳಲು ಪರದಾಟ ಅನುಭವಿಸುತ್ತಿದ್ದಾರೆ.

ಏನಿರುತ್ತದೆ? ಏನಿರಲ್ಲ?

ಕಾಂಗ್ರೆಸ್‌ ಸರ್ಕಾರದ ಶಕ್ತಿ ಯೋಜನೆಯಿಂದ ನಷ್ಟವಾದ ಪರಿಣಾಮ ಬೆಂಗಳೂರು ಬಂದ್‌ಗೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದೆ. ಆದಾಗ್ಯೂ ಹೆಚ್ಚುವರಿ ಸಾರಿಗೆ ಬಸ್‌ಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಆದರೂ, ಜನರಿಗೆ ತೊಂದರೆಯಾಗುತ್ತಿದೆ.

ಈ ಕೆಳಕಂಡ ಬದಲಿ ರಸ್ತೆಗಳನ್ನು ಬಳಸಿ

ಇದನ್ನೂ ಓದಿ: Ramanagara Bundh : ಮೆಡಿಕಲ್‌ ಕಾಲೇಜು ಶಿಫ್ಟ್‌ ವಿರುದ್ಧ ಸಿಡಿದ ರಾಮನಗರ; ಅಂಗಡಿಗಳು ಬಂದ್‌, ಹೆದ್ದಾರಿ ಸಂಚಾರಕ್ಕೂ ಅಡ್ಡಿ

ಒಕ್ಕೂಟದ ಬೇಡಿಕೆಗಳೇನು?

-ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ ನೀಡಬೇಕು.
-ಬೈಕ್, ರ‍್ಯಾಪಿಡೋ ಟ್ಯಾಕ್ಸಿಗಳ ಸಂಪೂರ್ಣ ನಿಷೇಧ ಮಾಡಬೇಕು.
-ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.
-ಸೌಲಭ್ಯ ಯೋಜನೆಯಡಿ ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ಸಾಲ ನೀಡಬೇಕು.
-ವೈಟ್ ಬೋರ್ಡ್ ವಾಹನದಲ್ಲಿ ಬಾಡಿಗೆ ಮಾಡುವುದಕ್ಕೆ ಬ್ರೇಕ್ ಹಾಕಬೇಕು.
-ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು.
-ಓಲಾ, ಉಬರ್ ಆ್ಯಪ್ ಆಧಾರಿತ ಸೇವೆಗಳ ನಿರ್ಬಂಧ ಮಾಡಬೇಕು.
-ಖಾಸಗಿ ಬಸ್‌ಗಳಿಗೂ ಶಕ್ತಿ ಯೋಜನೆ ಅಡಿ ಸೇವೆಗೆ ಅವಕಾಶ ನೀಡಬೇಕು.
-ಖಾಸಗಿ ವಾಹನಗಳನ್ನು ಕಿ.ಮೀ ಆಧಾರದಲ್ಲಿ ಸರ್ಕಾರ ಬಾಡಿಗೆಗೆ ಪಡೆಯುವುದು.
-ನಿಯಮ ಬಾಹಿರವಾಗಿ ವಾಹನ ವಶಕ್ಕೆ ಪಡೆಯುವ ಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮವಹಿಸಬೇಕು.

Exit mobile version