ಬೆಂಗಳೂರು: ʻʻಡ್ರೈವಿಂಗ್ ಎಂದರೆ ಕೇವಲ ಜೀವನೋಪಾಯ ಅಲ್ಲ ಸರ್, ಅದೊಂದು ವೃತ್ತಿ ಮಾತ್ರ ಅಲ್ಲ ಅಂತ ಆ ರಾತ್ರಿ ನಂಗೆ ಅರ್ಥವಾಯಿತುʼʼ- ಹೀಗಂತ ಒಬ್ಬ ಕ್ಯಾಬ್ ಡ್ರೈವರ್ (Bangalore cab driver) ಹೇಳಿದ ಮಾತು ಈ ವೃತ್ತಿಯಲ್ಲಿರುವ ಲಕ್ಷಾಂತರ ಜನರ ಮನಸಿಗೆ ಕನ್ನಡಿ ಹಿಡಿಯುವಂತಿದೆ. ಚಾಲಕ ವೃತ್ತಿಯಲ್ಲಿರುವವರಲ್ಲಿ ಒಂದು ಆತ್ಮಾಭಿಮಾನವನ್ನು, ನೆಮ್ಮದಿಯನ್ನು ಮೂಡಿಸುವಂತಿದೆ.
ಹೌದು, ಎಲ್ಲರೂ ವೃತ್ತಿಯನ್ನು ಒಂದು ಸಂಬಳ ತರುವ, ಜೀವನ ಸಾಗಿಸಲು ಇರುವ ದಾರಿ ಎಂದೇ ಭಾವಿಸಿರುತ್ತೇವೆ. ಹಾಗಾಗಿ ಹೆಚ್ಚಿನ ಸಂದರ್ಭದಲ್ಲಿ ವೃತ್ತಿ ಎನ್ನುವುದು ಯಾಂತ್ರಿಕವಾಗಿರುತ್ತದೆ. ಆದರೆ, ಯಾವಾಗ ವೃತ್ತಿಯ ಉದ್ದೇಶ ಅರ್ಥವಾಗುತ್ತದೆಯೋ ಆವತ್ತು ವೃತ್ತಿ ಎನ್ನುವುದು ಕೇವಲ ಜೀವನೋಪಾಯ ಅಲ್ಲ ಅನ್ನುವುದರ ಅರಿವಾಗುತ್ತದೆ.
ಬೆಂಗಳೂರಿನ ಒಬ್ಬ ಕ್ಯಾಬ್ ಡ್ರೈವರ್ ತನ್ನ ವೃತ್ತಿಯ ಶ್ರೇಷ್ಠತೆಯನ್ನು, ಘನತೆಯನ್ನು ಅರ್ಥ ಮಾಡಿಕೊಂಡ ಕ್ಷಣವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಅದು ತೆರೆದುಕೊಂಡಿದ್ದು ಒಬ್ಬ ಸುಮಿತ್ ಎಂ. ಲೆನ್ಸ್ ಎಂಬ ಟ್ವೀಟಿಗನ ಮೂಲಕ. ʻʻನಾನು ಬೆಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ಒಂದು ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಆದರೆ, ಈ ಪಯಣ ನನ್ನ ಬದುಕಿನ ಅತ್ಯಂತ ಸ್ಪೂರ್ತಿದಾಯಕ ಅನುಭವವಾಗುತ್ತದೆ ಎಂದು ನಾನು ಯೋಚಿಸಿರಲೂ ಇಲ್ಲʼʼ ಎಂದು ಬರೆದುಕೊಂಡ ಸುಮಿತ್ ಸರಣಿ ಟ್ವೀಟ್‌ಗಳಲ್ಲಿ ಕ್ಯಾಬ್ ಚಾಲಕನ ಬದುಕಿನ ಕಲ್ಪನೆಗಳೇ ಬದಲಾದ ಕಥೆಯನ್ನು ಹೇಳಿದ್ದಾರೆ. ಜತೆಗೆ ಆ ಚಾಲಕನ ಜತೆಗಿನ ಒಂದು ಸೆಲ್ಫಿಯನ್ನು ಕೂಡಾ ಹಂಚಿಕೊಂಡಿದ್ದಾರೆ.
ಈ ಕಥೆಯನ್ನು ಕ್ಯಾಬ್ ಡ್ರೈವರ್‌ನ ಮಾತುಗಳಲ್ಲೇ ಕೇಳಿ..
ನಾನು ಕಳೆದ 17 ವರ್ಷಗಳಿಂದ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇಡೀ ಕುಟುಂಬ ನನ್ನ ಆದಾಯದ ಮೇಲೆಯೇ ನಿಂತಿದೆ. ನಾನು ಒಬ್ಬ ಸಾಮಾನ್ಯ ಚಾಲಕನೇ ಆಗಿದ್ದೆ. ಸಮಯಕ್ಕೆ ಸರಿಯಾಗಿ ಗಾಡಿ ಚಲಾಯಿಸುವುದು, ಮನೆಗೆ ಹೋಗುವುದು.. ಹೀಗೆ ಯಾಂತ್ರಿಕವಾಗಿ ಎಲ್ಲವೂ ನಡೆಯುತ್ತಿತ್ತು. ಈ ವೃತ್ತಿ ಬಗ್ಗೆ ನನಗೆ ಹೆಮ್ಮೆಯಾಗಲೀ, ಹೆಚ್ಚಿನ ಆಸಕ್ತಿಯಾಗಲೀ ಇರಲಿಲ್ಲ. ಆದರೆ, ಆವತ್ತು ನಡೆದ ಒಂದು ಘಟನೆ ವೃತ್ತಿಯ ಬಗೆಗಿನ ನನ್ನ ನಂಬಿಕೆಯನ್ನೇ, ದೃಷ್ಟಿಕೋನವನ್ನೇ ಬದಲಿಸಿತುʼʼ- ಹೀಗೆ ಡ್ರೈವರ್ ಕಥೆ ಶುರು ಮಾಡುತ್ತಾರೆ. ಸುಮಿತ್ ಅವರು ಕೇಳಿದ ಒಂದು ಸಣ್ಣ ಪ್ರಶ್ನೆ ಚಾಲಕನ ಜೀವನ ಕಥೆಯನ್ನೇ ತೆರೆದಿಡುತ್ತದೆ.
ಅದೊಂದು ದಿನ ರಾತ್ರಿ. ತುಂಬಾ ತಡವಾಗಿತ್ತು. ನಂಗೊಂದು ರೈಡ್ ರಿಕ್ವೆಸ್ಟ್ ಬಂತು. ಸಾಮಾನ್ಯವಾಗಿ ನಾನು ರಾತ್ರಿಯ ನಂತರ ರೈಡ್ ಅಸೆಪ್ಟ್ ಮಾಡುತ್ತಿರಲಿಲ್ಲ. ಅದೂ ದೂರಕ್ಕೆ ಹೋಗುತ್ತಲೇ ಇರಲಿಲ್ಲ. ಅದ್ಯಾಕೋ ಗೊತ್ತಿಲ್ಲ.. ಆವತ್ತು ನಾನು ಎಷ್ಟು ರಿಜೆಕ್ಟ್ ಮಾಡಿದರೂ ಮತ್ತೆ ಮತ್ತೆ ರಿಕ್ವೆಸ್ಟ್ ಬರುತ್ತಲೇ ಇತ್ತು. ಯಾಕೋ ಮನಸು ಬದಲಾಯಿಸಿ ರಿಕ್ವೆಸ್ಟ್ ಸ್ವೀಕರಿಸಿದೆ.
ನಾನು ನೇವಿಗೇಷನ್ ಹಾಕಿಕೊಂಡು ರೈಡ್‌ನ ಸ್ಟಾರ್ಟಿಂಗ್ ಪಾಯಿಂಟ್‌ಗೆ ಹೋದೆ. ಅಲ್ಲಿ ಹೋಗಿ ನೋಡಿದರೆ ಒಬ್ಬ ಮಹಿಳೆಗೆ ಜೋರಾಗಿ ಹೆರಿಗೆ ನೋವು ಬರುತ್ತಿತ್ತು. ತುಂಬಾ ತುರ್ತು ಪರಿಸ್ಥಿತಿ ಅದು. ನಾನು ಕೂಡಲೇ ಮಹಿಳೆಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋದೆ. ಆದರೆ, ನಾವು ಹೋದ ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಇರಲಿಲ್ಲ. ನಾನು ಒಂದು ಕ್ಷಣವೂ ಯೋಚನೆ ಮಾಡಲಿಲ್ಲ. ಇನ್ನೊಂದು ಆಸ್ಪತ್ರೆಗೆ ಧಾವಿಸಿದೆ. ನಾನು ಆ ಗರ್ಭಿಣಿಯನ್ನು ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿ ವೈದ್ಯರು ಬಂದು ನೋಡುವುದಕ್ಕೂ ಹೆರಿಗೆ ಆಗುವುದಕ್ಕೂ ಸರಿ ಹೋಯಿತು. ಒಂದು ಪುಟ್ಟ ಮಗು ಅಲ್ಲಿ ಜನಿಸಿತ್ತು.
ಆವತ್ತು ನನಗೆ ನನ್ನ ವೃತ್ತಿಯ ನಿಜವಾದ ಉದ್ದೇಶ ಏನು ಎನ್ನುವುದು ಅರ್ಥವಾಯಿತು. ನಾನು ಮಾಡುತ್ತಿರುವುದು ಕೇವಲ ಚಾಲನೆ ಅಷ್ಟೇ ಅಲ್ಲ. ಅದು ಕಷ್ಟದಲ್ಲಿ ಇರುವವರಿಗೆ ಮಾಡುವ ಸಹಾಯ ಎನ್ನುವುದು ನನ್ನ ಅರಿವಿಗೆ ಬಂತು.
ಹೀಗೆ ಹೇಳುತ್ತಾ ಚಾಲಕ ಕಥೆ ಮುಗಿಸುತ್ತಾರೆ. ʻʻಕಠಿಣವಾದ ಪರಿಶ್ರಮದಿಂದ ಕುಟುಂಬದ ಪೋಷಣೆ ಮಾಡುತ್ತಲೇ ತಮ್ಮ ವೃತ್ತಿಯ ನಿಜವಾದ ಉದ್ದೇಶವನ್ನು ಅರ್ಥ ಮಾಡಿಕೊಂಡವರನ್ನು ಅಭಿಂದಿಸೋಣʼʼ ಎಂದು ಟ್ವೀಟಿಗ ಸುಮಿತ್ ತಮ್ಮ ಟ್ವೀಟ್ ಸರಣಿಯನ್ನು ಮುಕ್ತಾಯಗೊಳಿಸುತ್ತಾರೆ.
ಬಿ2ಬಿ ವೆಬ್3 ಕಂಪನಿಗಳಿಗೆ ಉದ್ಯಮ ಅಭಿವೃದ್ಧಿಗೆ ಸಲಹೆ ನೀಡುವ ವೃತ್ತಿ ಮಾಡುತ್ತಿರುವ ಸುಮಿತ್ ಅವರ ಈ ಟ್ವೀಟ್ ಅದೆಷ್ಟೋ ಸಹೃದಯರ ಮನಸ್ಸಿಗೆ ಖುಷಿ ಕೊಟಿದೆ. ಅದೆಷ್ಟೋ ಮಂದಿಗೆ ಸ್ಫೂರ್ತಿ ನೀಡಿದೆ. ಕೆಲವರು ಇದೊಂದು ಸುಂದರವಾದ ಬ್ಯೂಟಿಫುಲ್ ಸ್ಟೋರಿ ಎಂದಿದ್ದಾರೆ.
ʻಕ್ಯಾಬ್ ಡ್ರೈವರ್‌ಗೆ ಅಭಿನಂದನೆ. ನಿಜವಾದ ಪ್ರೀತಿಯಿಂದ, ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ, ಹೃದಯವಂತಿಕೆಯಿಂದ ಮಾಡುವ ಯಾವ ಕೆಲಸವೂ ಸಣ್ಣದಲ್ಲ, ದೊಡ್ಡದೂ ಅಲ್ಲʼʼ ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ.
ಇದನ್ನೂ ಓದಿ : Samosa Singh : ಉದ್ಯೋಗ ಬಿಟ್ಟು, ಮನೆ ಮಾರಿ ಸಮೋಸಾ ಮಾರಾಟದಲ್ಲೇ 45 ಕೋಟಿ ರೂ. ವಹಿವಾಟು ನಡೆಸಿದ ಯುವ ದಂಪತಿ!