Site icon Vistara News

ಬೆಂಗಳೂರಿನಲ್ಲಿ ಕೆಲಸದಿಂದ ವಜಾಗೊಳಿಸಿದ್ದಕ್ಕೆ ಅನ್ನ ಕೊಟ್ಟ ಕಂಪನಿಗೇ ಬೆಂಕಿ ಹಚ್ಚಿದ ದುರುಳರು!

Bengaluru Company

Bengaluru Company Terminates Two Employees; Both Employees Set Ablazed Office

ಬೆಂಗಳೂರು: ಯಾವುದೇ ಕಂಪನಿಯಿಂದ ಏಕಾಏಕಿ ವಜಾಗೊಂಡರೆ, ಆ ಉದ್ಯೋಗಿಗಳು ಏನು ಮಾಡಬಹುದು? ದಿಢೀರನೆ ಉದ್ಯೋಗದಿಂದ ಕಿತ್ತುಹಾಕಿದ್ದನ್ನು ಪ್ರಶ್ನಿಸಿ ಕೋರ್ಟ್‌ ಮೊರೆ ಹೋಗಬಹುದು. ಕಂಪನಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬಹುದು. ನಮಗೆ ಇಷ್ಟು ತಿಂಗಳ ಸಂಬಳ ಬೇಕು ಎಂದು ಪಟ್ಟು ಹಿಡಿಯಬಹುದು. ಆದರೆ, ಬೆಂಗಳೂರಿನಲ್ಲಿ (Bengaluru) ಇಬ್ಬರು ದುರುಳರು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಕಂಪನಿಗೇ (Company) ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ.

ಹೌದು, ಬೆಂಗಳೂರಿನ ಪೃಥ್ವಿ ಪಾರ್ಕ್‌ ಸ್ಕ್ವೇರ್‌ ರಿಯಲ್‌ ಎಸ್ಟೇಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್‌ ಪೂಜಾರಿ ಹಾಗೂ ಲ್ಯಾವ್ಸನ್‌ ಪೀಟರ್‌ ಜಾನ್‌ ಎಂಬುವರು ವಜಾಗೊಂಡಿದ್ದಕ್ಕೆ ಕಂಪನಿಗೇ ಬೆಂಕಿ ಹಚ್ಚಿದ್ದಾರೆ. ಸೆಪ್ಟೆಂಬರ್‌ 27ರಂದು ಕಂಪನಿ ಬಳಿ ಬಂದ ಇವರು, ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ. ಇವರ ಕೃತ್ಯದಿಂದ ಕಂಪನಿಯ 11 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

ಕೆಲಸದಿಂದ ವಜಾಗೊಳಿಸಲು ಕಾರಣ?

ರಾಹುಲ್‌ ಪೂಜಾರಿ ಏರಿಯಾ ಸೇಲ್ಸ್‌ ಮ್ಯಾನೇಜರ್‌ ಆಗಿದ್ದರು. ಲ್ಯಾವ್ಸನ್‌ ಪೀಟರ್‌ ಜಾನ್‌ ರೀಜನಲ್‌ ಸೇಲ್ಸ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರೂ ಟಾರ್ಗೆಟ್‌ ರೀಚ್‌ ಮಾಡದ ಕಾರಣ ಕೆಲಸದಿಂದ ವಜಾಗೊಳಿಸಲಾಗಿತ್ತು. ಉಮಾಶಂಕರ್‌ ಹಾಗೂ ರೂಪಾ ಅವರು ಕಂಪನಿಯ ಮಾಲೀಕರಾಗಿದ್ದು, ರೂಪಾ ಅವರಿಗೆ ಕರೆ ಮಾಡಿದ್ದ ಇಬ್ಬರೂ, ಸಂಬಳ ಕೊಡುವಂತೆ ಒತ್ತಾಯಿಸಿದ್ದರು. ಆದರೆ, ಸಂಬಳ ಕೊಡಲು ನಿರಾಕರಿಸಿದ ಕಾರಣ ಅವರು ಇಂತಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Viral story | ಗರ್ಭಿಣಿಯಾಗಿದ್ದಕ್ಕೆ ಕೆಲಸದಿಂದ ವಜಾ! 15 ಲಕ್ಷ ರೂ ಪರಿಹಾರ ಪಡೆದಳಾಕೆ!

ಸೆಪ್ಟೆಂಬರ್‌ 27ರಂದು ಬೆಳಗ್ಗೆ ಕಚೇರಿಗೆ ಇನ್ನೂ ಯಾರೂ ಆಗಮಿಸದ್ದನ್ನು ಗಮನಿಸಿದ ಇಬ್ಬರು ದುಷ್ಕರ್ಮಿಗಳು ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ಮಹಿಳೆಗೆ ಕರೆ ಮಾಡಿ ಹೊರಗೆ ಬರುವಂತೆ ಸೂಚಿಸಿದ್ದಾರೆ. ಇದಾದ ಬಳಿಕ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ಅಲ್ಲಿಂದ ಪರಾರಿಯಾಗಿದ್ದಾರೆ. ಇದರಿಂದಾಗಿ ಸ್ವಿಚ್‌ ಬೋರ್ಡ್‌, ಪೀಠೋಪಕರಣಗಳು ಸುಟ್ಟಿವೆ. ಕಂಪನಿ ಮಾಲೀಕರು ಇಬ್ಬರ ವಿರುದ್ಧವೂ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರಿಗೂ ಪೊಲೀಸರು ಬಲೆ ಬೀಸಿದ್ದಾರೆ.

Exit mobile version