Site icon Vistara News

Fact Check: ಕಾಂಗ್ರೆಸ್​ ಗೆದ್ದಿದ್ದಕ್ಕೆ ಬೆಂಗಳೂರಿನ ಈ ಐಟಿ ಕಂಪನಿ ಇಷ್ಟೆಲ್ಲ ಸಂಭ್ರಮಿಸಿತಾ?-ತಮಟೆ ಬಾರಿಸುವಷ್ಟು!

Bengaluru IT firm celebrating

#image_title

ಈ ಸಲ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್ 135 ಕ್ಷೇತ್ರಗಳನ್ನು ಗೆದ್ದು ಭರ್ಜರಿ ಗೆಲುವು ಸಾಧಿಸಿದೆ. ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ಆಚರಣೆ ಮಾಡಿದ್ದಾರೆ. ಈ ಮಧ್ಯೆ ಒಂದು ವಿಡಿಯೊ ವೈರಲ್ ಆಗುತ್ತಿದೆ. ‘ಕಾಂಗ್ರೆಸ್ ಗೆಲ್ಲುತ್ತಿದ್ದಂತೆ ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಗಳು ಭರ್ಜರಿಯಾಗಿ ಸಂಭ್ರಮ ಆಚರಣೆ ಮಾಡಿದ್ದಾರೆ’ ಎಂಬುದು ವಿಡಿಯೊದ ಸಾರಾಂಶ. ‘ಅದೊಂದು ಆಫೀಸ್​. ಅಲ್ಲಿ ಒಂದಷ್ಟು ಜನ ಕಾಂಗ್ರೆಸ್ ಬಾವುಟ ಹಿಡಿದು ಸಂಭ್ರಮ ಆಚರಣೆ ಮಾಡುತ್ತಿದ್ದಾರೆ. ಒಬ್ಬರು ಬಿಜೆಪಿಗೆ ವ್ಯಂಗ್ಯ ಮಾಡುವಂತ ಘೋಷಣೆಗಳನ್ನು ರಾಗಬದ್ಧವಾಗಿ ಮಾಡಿದರೆ, ಇನ್ನುಳಿದವರು ಸಿಳ್ಳೆ ಹಾಕುತ್ತ, ಟಪಾಂಗುಚ್ಚಿ ಕುಣಿಯುತ್ತಾರೆ. ದೊಡ್ಡದಾಗಿ ನಗುತ್ತಾರೆ. ಅಲ್ಲೊಬ್ಬ ತಮಟೆಯನ್ನೂ ಬಡಿಯುವುದನ್ನು ನೋಡಬಹುದು.

ಈ ವಿಡಿಯೊ ಶೇರ್ ಮಾಡಿದ ಟ್ವಿಟರ್ ಬಳಕೆದಾರರು ಒಬ್ಬರು, ‘ಮೇ 13ರಂದು ಕಾಂಗ್ರೆಸ್ ಗೆಲ್ಲುತ್ತಿದ್ದಂತೆ, ಬೆಂಗಳೂರಿನಲ್ಲಿ ಇರುವ ಇಂಡೋನೇಷ್ಯಾ ಮೂಲದ ಐಟಿ ಕಂಪನಿ ಅನಾಬಾಟಿಕ್ ಇಂಡಿಯಾ ಟೆಕ್ನಾಲಜೀಸ್ (ANABATIC TECHNOLOGIES INDIA PRIVATE LIMITED)ನಲ್ಲಿ ಉದ್ಯೋಗಿಗಳು ಸೇರಿ ಸಂಭ್ರಮ ಆಚರಣೆ ಮಾಡಿದ್ದಾರೆ. ಈ ವಿಡಿಯೊ ಅವರ ಎಚ್​​ಆರ್​ (ಮಾನವ ಸಂಪನ್ಮೂಲಾಧಿಕಾರಿ)ಗೆ ತಲುಪುವವರೆಗೂ ಶೇರ್ ಮಾಡಬೇಕು. ಈ ಉದ್ಯೋಗಿಗಳ ವಿರುದ್ಧ ಕ್ರಮ ಆಗಬೇಕು’ ಎಂದಿದ್ದರು. ಹಾಗೇ, ಹಲವರು ಶೇರ್ ಮಾಡಿಕೊಂಡು, ಇದೇ ವಾದವನ್ನು ಮಂಡಿಸುತ್ತಿದ್ದರು. ಈ ವಿಡಿಯೊ ಲಕ್ಷಾಂತರ ವೀಕ್ಷಣೆ ಕಂಡಿತ್ತು, ಸಾವಿರಾರು ಜನರು ಲೈಕ್​ ಮಾಡಿದ್ದರು. ಆದರೆ ಅನೇಕರು ಇದನ್ನು ಖಂಡಿಸಿದ್ದರು. ಐಟಿ ಕಂಪನಿಯೊಂದು ರಾಜಕೀಯ ವಿಷಯವನ್ನಿಟ್ಟುಕೊಂಡು ಇಷ್ಟು ಸಂಭ್ರಮ ಪಡಬೇಕಾ? ಎಂದು ಪ್ರಶ್ನಿಸಿದ್ದರು. ಕೆಲವರಂತೂ ಗೂಗಲ್​​ ಲಿಸ್ಟ್​​ನಲ್ಲಿ ಕಂಪನಿಯ ಬಗ್ಗೆ ಕೆಟ್ಟದಾಗಿ ರಿವಿವ್ಯೂ ಬರೆದಿದ್ದರು.

ವಾಸ್ತವ ಏನು?
ಈ ವಿಡಿಯೊದಲ್ಲಿ Anabatic ಕಂಪನಿಯ ಲೋಗೋ ಕಂಡಿದ್ದರಿಂದಲೇ ಹೀಗೊಂದು ವಿಚಾರ ಎದ್ದಿತ್ತು. ವಿಡಿಯೊ 0.52 ಸೆಕೆಂಡ್ ಆದಾಗ ನಿಮಗೆ Anabatic ಲೋಗೋ ಕಾಣಿಸುತ್ತದೆ. ಆದರೆ ವಾಸ್ತವಾಂಶ ಏನೆಂದರೆ, ಇದು Anabatic Technologies ಕಂಪನಿ ಅಲ್ಲ, ನೃತ್ಯ ಮಾಡುತ್ತಿರುವವರು, ಸಂಭ್ರಮಿಸುತ್ತಿರುವವರು ಅದರ ಉದ್ಯೋಗಿಗಳೂ ಅಲ್ಲ. ಚುನಾವಣೆ ನಿಮಿತ್ತ ರಚಿಸಲಾಗಿದ್ದ ಕಾಂಗ್ರೆಸ್​ ಎಲೆಕ್ಷನ್​ ವಾರ್​ ರೂಮ್​ ಒಂದರಲ್ಲಿ ಕಂಡು ಬಂದ ದೃಶ್ಯ ಎನ್ನಲಾಗಿದೆ.

ಫ್ಯಾಕ್ಟ್​ಚೆಕ್​​ ಸ್ಟಾರ್ಟಪ್​ ಆದ ಲಾಜಿಕಲಿ ಫ್ಯಾಕ್ಟ್ಸ್​ ಈ ಬಗ್ಗೆ ಸತ್ಯಶೋಧನೆ ನಡೆಸಿತ್ತು. Anabatic ಕಂಪನಿಯ ಕಟ್ಟಡ ಇದೆ ಎನ್ನಲಾದ ಬೆಂಗಳೂರಿನ ಜಯಮಹಲ್​​ಗೆ ಲಾಜಿಕಲಿ ಸ್ಟಾರ್ಟಪ್​​ನ ಸಿಬ್ಬಂದಿ ಭೇಟಿ ಕೊಟ್ಟಿದ್ದರು. ಅದೊಂದು ಹಲವು ಕಟ್ಟಡಗಳು ಇರುವ ಸಂಕೀರ್ಣವಾಗಿದ್ದು, ಅಲ್ಲಿಯೇ ಒಂದು ಕಟ್ಟಡದಲ್ಲಿ ಮೊದಲು ಈ ಕಂಪನಿ ಕೆಲಸ ನಿರ್ವಹಿಸುತ್ತಿತ್ತು. ಆದರೆ ಚುನಾವಣೆಗೂ ಕೆಲ ದಿನಗಳ ಮೊದಲು ಕಂಪನಿ ಸ್ಥಳಾಂತರಗೊಂಡಿದೆ ಎನ್ನಲಾಗಿದೆ. ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿಯೇ ಈ ವಿಷಯವನ್ನು ತಿಳಿಸಿದ್ದಾರೆ. ಹೀಗೆ ಖಾಲಿಯಾದ ಕಟ್ಟಡದಲ್ಲಿ Anabatic ಲೋಗೋ ಇನ್ನೂ ಇರವಾಗಲೇ, ಕಾಂಗ್ರೆಸ್​​ನ ವಾರ್​ರೂಮ್​ ರಚನೆ ಮಾಡಲಾಗಿತ್ತು. ಮೇ 13ರಂದು ಫಲಿತಾಂಶ ಹೊರಬೀಳುತ್ತಿದ್ದಂತೆ ಅಲ್ಲಿದ್ದವರೆಲ್ಲ ಸೇರಿ ಸಂಭ್ರಮಾಚರಣೆ ಮಾಡಿದ್ದಾರೆ ಎನ್ನಲಾಗಿದೆ.

ವೈರಲ್ ಆಗಿದ್ದ ವಿಡಿಯೊ:

ಇದನ್ನೂ ಓದಿ: Fact Check Day: ಅಂತಾರಾಷ್ಟ್ರೀಯ ಫ್ಯಾಕ್ಟ್​ಚೆಕ್​ ದಿನ ಇಂದು; ಸುಳ್ಳು-ನಕಲಿ ಸುದ್ದಿಗಳ ಹರಡುವಿಕೆ ತಡೆಯೋಣ

Exit mobile version