ಬೆಂಗಳೂರು: ರಾಜ್ಯದಲ್ಲಿ ಐಟಿ ಉದ್ಯೋಗಿಗಳ (IT Employees Working Hours) ಕೆಲಸ ಅವಧಿಯನ್ನು 12 ತಾಸಿಗಿಂತ ಹೆಚ್ಚು ಅಥವಾ 14 ತಾಸುಗಳಿಗೆ ವಿಸ್ತರಿಸುವ ಕುರಿತು ತಿದ್ದುಪಡಿ ತರಲು ಕರ್ನಾಟಕ ಸರ್ಕಾರವು (Karnataka Government) ಚಿಂತನೆ ನಡೆಸಿದೆ. ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಪರ-ವಿರೋಧ, ಸಕಾರಾತ್ಮಕ-ನಕಾರಾತ್ಮಕ ಅಂಶಗಳ ಕುರಿತು ಚರ್ಚಿಸಲಾಗುತ್ತಿದೆ. ಇದರ ಬೆನ್ನಲ್ಲೇ, ಸರ್ಕಾರದ ತೀರ್ಮಾನಕ್ಕೆ ಕರ್ನಾಟಕ ರಾಜ್ಯ ಐಟಿ, ಐಟಿ ಆಧಾರಿತ ಸೇವೆಗಳ ಉದ್ಯೋಗಿಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರದ ಪ್ರಸ್ತಾಪದಲ್ಲಿ ಏನಿದೆ?
ರಾಜ್ಯ ಸರ್ಕಾರವು ಕರ್ನಾಟಕ ಶಾಪ್ಸ್ ಆ್ಯಂಡ್ ಎಶ್ಟಾಬ್ಲಿಶ್‌ಮೆಂಟ್ ಆ್ಯಕ್ಟ್‌ಗೆ (Karnataka Shops and Commercial Establishment Act) ತಿದ್ದುಪಡಿ ತಂದು, ರಾಜ್ಯದಲ್ಲಿ ಐಟಿ, ಐಟಿ ಆಧಾರಿತ ಸೇವೆಗಳು ಹಾಗೂ ಬಿಪಿಒಗಳ ಕೆಲಸದ ಅವಧಿಯನ್ನು 12ರಿಂದ 14 ತಾಸುಗಳಿಗೆ ಹೆಚ್ಚಿಸುವ ಪ್ರಸ್ತಾಪ ಇಟ್ಟುಕೊಂಡಿದೆ. ಶೀಘ್ರದಲ್ಲೇ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಮಂಡಿಸಿ, ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ. ಐಟಿ ಕ್ಷೇತ್ರದ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಇಂತಹ ಪ್ರಸ್ತಾಪ ಹೊಂದಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಒಕ್ಕೂಟದ ವಾದವೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಐಟಿ, ಐಟಿ ಆಧಾರಿತ ಸೇವೆಗಳ ಉದ್ಯೋಗಿಗಳ ಒಕ್ಕೂಟವು (KITU) ಭಾರಿ ವಿರೋಧ ವ್ಯಕ್ತಪಡಿಸಿದೆ. “ಐಟಿ ಉದ್ಯೋಗಿಗಳ ಕೆಲಸವನ್ನು ನಾಲ್ಕು ಗಂಟೆ ಹೆಚ್ಚಿಸುವುದರಿಂದ ನೌಕರರ ಖಾಸಗಿ ಹಾಗೂ ವೃತ್ತಿ ಜೀವನದ ಮೇಲೆ ಭಾರಿ ಪರಿಣಾಮ ಬೀರಲಿದೆ. ಉದ್ಯೋಗಿಗಳು ವೃತ್ತಿ ಮಾಡುವ ಬದಲು ಮಷೀನ್‌ಗಳಾಗಿ ಬದಲಾಗುತ್ತಾರೆ. ಅವರ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ. ಹಾಗಾಗಿ, ರಾಜ್ಯ ಸರ್ಕಾರವು ಪ್ರಸ್ತಾಪವನ್ನು ಪರಿಷ್ಕರಿಸಬೇಕು” ಎಂದು ಒಕ್ಕೂಟ ಆಗ್ರಹಿಸಿದೆ.
“ಐಟಿ ಕಂಪನಿಗಳಲ್ಲಿ ಈಗ ಮೂರು ಶಿಫ್ಟ್‌ಗಳಲ್ಲಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳ ಕೆಲಸದ ಅವಧಿ ಹೆಚ್ಚಿಸುವುದರಿಂದ ಮೂರರ ಬದಲು ಎರಡೇ ಶಿಫ್ಟ್‌ಗಳನ್ನು ಮಾಡಬೇಕಾಗುತ್ತದೆ. ಆಗ, ಮೂವರ ಕೆಲಸವನ್ನು ಇಬ್ಬರು ಮಾಡುವ ಜತೆಗೆ, ಒಂದು ಶಿಫ್ಟ್‌ನಲ್ಲಿರುವ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಾಗುತ್ತದೆ. ಈಗಾಗಲೇ ಶೇ.45ರಷ್ಟು ಐಟಿ ಉದ್ಯೋಗಿಗಳು ಒತ್ತಡ, ಮಾನಸಿಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಶೇ.55ರಷ್ಟು ಉದ್ಯೋಗಿಗಳು ದೈಹಿಕ ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗ ಕೆಲಸದ ಅವಧಿಯನ್ನು ವಿಸ್ತರಿಸಿದರೆ, ಅವರ ಮೇಲೆ ಭಾರಿ ಗಂಭೀರ ಪರಿಣಾಮ ಉಂಟಾಗುತ್ತದೆ” ಎಂದು ಎಚ್ಚರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಐಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಈಗಾಗಲೇ ಒತ್ತಡ, ಬಿಪಿ, ಶುಗರ್ ಸೇರಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗ 14 ಗಂಟೆಗೆ ನೌಕರರ ಕೆಲಸದ ಅವಧಿಯನ್ನು ಹೆಚ್ಚಿಸಿದರೆ ನೌಕರರು ಹಣಕ್ಕಿಂತ ಹೆಚ್ಚು ಕಾಯಿಲೆಗಳನ್ನು ಗಳಿಸುತ್ತಾರೆ ಎಂಬುದಾಗಿ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಯ್ದೆ ಪ್ರಕಾರ ಈಗ ಐಟಿ ಉದ್ಯೋಗಿಗಳ ಕೆಲಸದ ಅವಧಿಯು 10 ಗಂಟೆ ಆಗಿದೆ.
ಇದನ್ನೂ ಓದಿ: IT Employees: ಕರ್ನಾಟಕದ ಐಟಿ ಉದ್ಯೋಗಿಗಳೇ, ದಿನಕ್ಕೆ 14 ಗಂಟೆ ಕೆಲಸ ಮಾಡಲು ಸಜ್ಜಾಗಿ; ರಾಜ್ಯ ಸರ್ಕಾರದ ನಿರ್ಧಾರ ಹೀಗಿದೆ