Site icon Vistara News

Bengaluru Karaga 2023: ಕರಗ ಹೊತ್ತ ಪೂಜಾರಿ ಮೇಲೆ ಕೆಮಿಕಲ್‌ ದಾಳಿ ಮಾಡಿದವನ ಸೆರೆ

#image_title

ಬೆಂಗಳೂರು: ಬೆಂಗಳೂರು ಕರಗ (Bengaluru Karaga 2023) ಹೊತ್ತಿದ್ದ ಪೂಜಾರಿ ಮೇಲೆ ಕೆಮಿಕಲ್‌ ದಾಳಿ (Chemical Attack) ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೆಮಿಕಲ್‌ ದಾಳಿ ನಡೆಸಿದ ಆರೋಪಿ ಆದಿನಾರಾಯಣ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಏಪ್ರಿಲ್‌ 6ರ ಚೈತ್ರ್ಯ ಪೂರ್ಣಿಮೆ ದಿನದಂದು ಐತಿಹಾಸಿಕ ಬೆಂಗಳೂರು ಕರಗ ಯಶಸ್ವಿಯಾಗಿ ನಡೆದಿತ್ತು. ಆದರೆ, ಕರಗ ಉತ್ಸವ ಸಂಪೂರ್ಣವಾಗಿ ಮುಗಿದ ಬಳಿಕವೇ ಅಲ್ಲಿ ಕರಗ ಹೊತ್ತು ಹೆಜ್ಜೆ ಹಾಕಿದ್ದ ಪೂಜಾರಿ ಜ್ಞಾನೇಂದ್ರ ಮೇಲೆ ದಾಳಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ. ಹಳೇ ವೈಷಮ್ಯ ಸೇರಿದಂತೆ ಕರಗ ಪೂಜೆಯ ಅಧಿಕಾರ ಕಸಿಯುವ ಉದ್ದೇಶದಿಂದ ಆದಿನಾರಾಯಣ, ಪೂಜಾರಿ ಜ್ಞಾನೇಂದ್ರ ಮೇಲೆ ಮಲ್ಲಿಗೆ ಹೂ ಎರಚುವಂತೆ ಮಾಡಿ ಕೆಮಿಕಲ್‌ ದಾಳಿ ನಡೆಸಿದ್ದಾತ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಕೆಮಿಕಲ್‌ ದಾಳಿ ಮಾಡಿದ ಆದಿನಾರಾಯಣ ಬಂಧನ

ಕರಗ ಮಹೋತ್ಸವದಲ್ಲಿ ನಡೆದಿದ್ದು ಏನು?

ಆ ದಿನ ಕರಗ ಹೊತ್ತಿದ್ದ ಪೂಜಾರಿ ಜ್ಞಾನೇಂದ್ರ ಅವರು ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರ ಬಂದು ಸ್ವಲ್ಪ ದೂರ ಸಾಗುತ್ತಿದ್ದಂತೆ ದುಷ್ಕರ್ಮಿಯೊಬ್ಬ ಹೂವು ಎರಚುವ ನೆಪದಲ್ಲಿ ಕೆಮಿಕಲ್ ಚೆಲ್ಲಿದ್ದ. ಇದರಿಂದಾಗಿ ಜ್ಞಾನೇಂದ್ರನ ಕುತ್ತಿಗೆ, ಹೊಟ್ಟೆ ಭಾಗ ಸುಟ್ಟಿತ್ತು. ಮೊದಮೊದಲು ಕರಗವನ್ನು ಮುಟ್ಟಲು ಬರುತ್ತಿದ್ದಾರೆ ಎಂದುಕೊಂಡು, ವ್ಯಕ್ತಿಯೊಬ್ಬನನ್ನು ಥಳಿಸಿದ್ದರು. ಮಾತ್ರವಲ್ಲ ಕರಗಕ್ಕೆ ಖಾರದ ಪುಡಿ ಎರಚಿದ್ದಾರೆ ಎಂದು ತಿಳಿದಿದ್ದರು. ಆದರೆ ಮಾರನೇ ದಿನ ಇದು ಕೆಮಿಕಲ್‌ ದಾಳಿ ಎಂದು ತಿಳಿದು, ಪೂಜಾರಿ ಜ್ಞಾನೇಂದ್ರ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ತೆರಳಿ ತನ್ನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಸಿಸಿಟಿವಿ ಹಾಗೂ ಹ್ಯಾಂಡಿ ಕ್ಯಾಮೆರಗಳ ದೃಶ್ಯಾವಳಿಗಳ ಆಧಾರದ ಮೇಲೆ ಜ್ಞಾನೇಂದ್ರ ಮೇಲೆ ಕೆಮಿಕಲ್ ದಾಳಿ ಮಾಡಿ ಪರಾರಿಯಾಗಿದ್ದ ಆರೋಪಿ ಆದಿನಾರಾಯಣ ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆದಿನಾರಾಯಣ ಹಾಗೂ ಜ್ಞಾನೇಂದ್ರ ಕುಟುಂಬಗಳ ನಡುವೆ ಕರಗ ಹೊರುವ ವಿಚಾರದಲ್ಲಿ ಬಹಳ ದಿನಗಳಿಂದ ವೈಮನಸ್ಸಿತ್ತು. ಮಾತ್ರವಲ್ಲದೆ ಕರಗ ಪೂಜೆಯಿಂದ ಸಿಗುವ ಸೌಲಭ್ಯಗಳು ಹಾಗೂ ದಾನ-ಧರ್ಮದಿಂದ ಬರುತ್ತಿದ್ದ ಹಣದ ಮೇಲೆ ಕಣ್ಣಿಟ್ಟಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಜ್ಞಾನೇಂದ್ರ ಕರಗ ಹೊತ್ತು ಹೋಗುವ ವೇಳೆ ದಾಳಿ ಮಾಡಿದರೆ, ಜ್ಞಾನೇಂದ್ರ ಕರಗವನ್ನು ಮಾರ್ಗ ಮಧ್ಯೆ ಇಳಿಸಿ ಬಿಡುತ್ತಾನೆ ಎಂದು ಉಪಾಯವೊಂದನ್ನು ಮಾಡಿದ್ದ.

ಇದನ್ನೂ ಓದಿ: Gold rate : ಬಂಗಾರದ ದರದಲ್ಲಿ 110 ರೂ. ಇಳಿಕೆ, ಬೆಳ್ಳಿ 400 ರೂ. ದುಬಾರಿ

ಸೈನೆಡ್ ಪೆಟಲ್ಸ್ ಎಂಬ ಬೆಳ್ಳಿ ಆಭರಣ ತಯಾರಿಕೆಗೆ ಬಳಸುವ ಗುಂಡುಗಳನ್ನು ಹೂವಿನೊಂದಿಗೆ ಬೆರೆಸಿ ಜ್ಞಾನೇಂದ್ರ ಮೇಲೆ ಎರಚಿದ್ದ. ಅದು ಜ್ಞಾನೇಂದ್ರನ ಮೈ ಮೇಲಿನ ಬೆವರಿನಲ್ಲಿ ಕರಗಿ ಆ್ಯಸಿಡ್ ರೂಪ ಪಡೆದು ದೇಹವನ್ನು ಸುಟ್ಟಿತ್ತು. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಹಿಂದೆ ಆರೋಪಿ ಆದಿನಾರಾಯಣನಿಗೆ ಯಾರ್ಯಾರು ಸಹಾಯ ಮಾಡಿದ್ದಾರೆ ಎಂದು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.

Exit mobile version