Site icon Vistara News

Bangalore Vs Hyderabad: ಬೆಂಗಳೂರು ಬಿಟ್ಟು ಹೈದರಾಬಾದ್‌ಗೆ ಹೋಗಿದ್ರಿಂದ ಆ ಟೆಕ್ಕಿಗೆ ತಿಂಗಳಿಗೆ 40 ಸಾವಿರ ಉಳೀತಂತೆ? ಅದ್ಹೇಗೆ?

Bangalore city

ಬೆಂಗಳೂರು: ನಾನು ಬೆಂಗಳೂರು ಬಿಟ್ಟು ಹೈದರಾಬಾದ್‌ಗೆ ಶಿಫ್ಟ್‌ (Shifted to Hyderabad from Bangalore) ಆಗಿದ್ದರಿಂದ ನನ್ನ ತಿಂಗಳ ಖರ್ಚಿನಲ್ಲಿ 40 ಸಾವಿರ ರೂ. ಉಳಿಯಿತು ಎಂಬ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರ ಎಕ್ಸ್‌ ಪೋಸ್ಟ್‌ ಭಾರಿ ಚರ್ಚೆಗೆ ಕಾರಣವಾಯಿತು. ಒಂದು ಕಡೆ ಇದು ಬೆಂಗಳೂರು ವರ್ಸಸ್‌ ಹೈದರಾಬಾದ್‌ (Bangalore Vs Hyderabad) ಎಂಬ ಚರ್ಚೆಯನ್ನು ಹುಟ್ಟುಹಾಕಿದ್ದರೆ, ಇನ್ನೊಂದು ಕಡೆ ಇನ್ನು ಮುಂದೆ ಅವಕಾಶಗಳು ಆ ಕಡೆ ಹರಿಯಬಹುದಾ ಎಂಬ ಪ್ರಶ್ನೆಗೆ ಕಾರಣವಾಗಿದೆ.

ಈ ಪೋಸ್ಟ್‌ ಹಾಕಿದವರು ಬೆಂಗಳೂರಿನಲ್ಲಿ ಸೀನಿಯರ್‌ ಸಾಫ್ಟ್‌ವೇರ್‌ ಎಂಜಿನಿಯರ್‌ (Senior Software Engineer) ಆಗಿದ್ದ ಪೃಥ್ವಿ ರೆಡ್ಡಿ ಎಂಬವರು. ಅವರು ಮೂಲತಃ ಹೈದರಾಬಾದ್‌ನವರು. ತಮ್ಮ ಕುಟುಂಬ ಬಿಟ್ಟು ಇಲ್ಲಿ ಬಂದು ಕೆಲಸ ಮಾಡುತ್ತಿದ್ದರು. ಈಗ ಅವರು ಮರಳಿ ಹೈದರಾಬಾದ್‌ಗೆ ಹೋಗಿ ಅಲ್ಲಿಂದ ವರ್ಕ್‌ ಫ್ರಂ ಹೋಮ್‌ ಮಾಡುತ್ತಿದ್ದಾರೆ. ಈಗ ತಾವು ಸಂತುಷ್ಟರಾಗಿರುವುದಾಗಿಯೂ, ನೆಮ್ಮದಿಯಿಂದ ಇರುವುದಾಗಿಯೂ ಅವರು ಬರೆದುಕೊಂಡಿದ್ದಾರೆ.

ಪೃಥ್ವಿ ರೆಡ್ಡಿ ಅವರು ಪೋಸ್ಟ್‌ನಲ್ಲಿ ಹೇಳಿದ್ದೇನು?

ನಾನು ಬೆಂಗಳೂರಿನಿಂದ ಹೈದರಾಬಾದ್‌ಗೆ ಶಿಫ್ಟ್‌ ಆದೆ. ಹೀಗಾಗಿ ತಿಂಗಳ ಖರ್ಚಿನಲ್ಲಿ 40 ಸಾವಿರ ರೂ. ಉಳಿಸುವುದು ಸಾಧ್ಯವಾಯಿತು. ಈ ಹಣದಲ್ಲಿ ಒಂದು ಕುಟುಂಬ ಸಂತೋಷವಾಗಿ ಜೀವಿಸಬಹುದು. ನನಗೆ ನನ್ನ ಕುಟುಂಬದ ಮೌಲ್ಯಗಳು ಹೆಚ್ಚು ಆಪ್ತ. ಅದನ್ನು ಬಿಟ್ಟು ಒಂಟಿಯಾಗಿ ಬಾಳುವುದರಲ್ಲಿ ಏನೂ ಅರ್ಥವಿದೆ ಎಂದು ನನಗೆ ಅನಿಸುವುದಿಲ್ಲ- ಇದು ಪೃಥ್ವಿ ರೆಡ್ಡಿ ಮಾಡಿರುವ ಪೋಸ್ಟ್‌.

ಪ್ರತಿಕ್ರಿಯೆ ಚರ್ಚೆಗಳ ಮಹಾಪೂರ

ಪೃಥ್ವಿ ರೆಡ್ಡಿ ಅವರ ಈ ಪೋಸ್ಟ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಲವರು ಈ ಅಭಿಪ್ರಾಯವನ್ನು ಸಮರ್ಥಿಸಿದ್ದಾರೆ, ಕೆಲವರು ಒಪ್ಪಿದ್ದಾರೆ. ಇನ್ನು ಕೆಲವರು ವಿರೋಧಿಸಿದ್ದಾರೆ.

ಹಾಗಿದ್ದರೆ ಹೈದರಾಬಾದ್‌ ಚೀಪಾ?

ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ʻʻನೀವು ಹೇಳಿದ್ದು ಸ್ವಲ್ಪ ಜಾಸ್ತಿ ಆಯಿತು ಅನಿಸುತ್ತದೆ. ನೀವು ಬೆಂಗಳೂರಿನಲ್ಲಿ ಯಾವ ಭಾಗದಲ್ಲಿ ವಾಸ ಮಾಡುತ್ತಿದ್ದಿರಿ. ಈಗ ಹೈದರಾಬಾದ್‌ನ ಯಾವ ಭಾಗದಲ್ಲಿದ್ದೀರಿ? ನೀವು ಹೇಗೆ ಪ್ರಯಾಣ ಮಾಡುತ್ತೀರಿ? ಯಾಕೆಂದರೆ ಬಸ್‌ ಮತ್ತು ಮೆಟ್ರೋ ಪಾಸ್‌ ಚೀಪ್‌ ಆಗಿರಬಹುದು. ಆದರೆ, ಹೈದರಾಬಾದ್‌ನಲ್ಲಿ ಬಾಡಿಗೆ ಕಡಿಮೆ ಎನ್ನುವುದು ಹಳೆ ಕಥೆʼʼ ಎಂದಿದ್ದಾರೆ.

ʻʻನಾನು ಕೂಡಾ ನಿನ್ನ ಹಾಗೆನೇ ಮಾಡಿದೆ ಬ್ರೋ.. ನಾನು ವರ್ಕ್‌ ಫ್ರಂ ಹೋಮ್‌ ತಗೊಂಡು ಫ್ಯಾಮಿಲಿ ಜತೆ ಇದ್ದೇನೆ. ಬೆಂಗಳೂರಿನಲ್ಲಿದ್ದು ದುಡ್ಡು ಮಾತ್ರವಲ್ಲ, ಸಮಯವೂ ಹಾಳು. ಅದನ್ನೇ ಫ್ಯಾಮಿಲಿ ಜತೆ ಕಳೆಯಬಹುದಲ್ವೇ?ʼʼ ಎಂದು ಇನ್ನೊಬ್ಬರು ಕೇಳಿದ್ದಾರೆ.

ಇದು ಬೆಂಗಳೂರು ವರ್ಸಸ್‌ ಹೈದರಾಬಾದ್‌!?

ಆದರೆ, ಪೃಥ್ವಿ ರೆಡ್ಡಿ ಅವರ ಪೋಸ್ಟ್‌ ಕೆಲವರಿಗೆ ಇದು ಬೆಂಗಳೂರು ವರ್ಸಸ್‌ ಹೈದರಾಬಾದ್‌ ಎಂಬ ಸಂಶಯವನ್ನು ಹುಟ್ಟುಹಾಕಿದೆ. ಇದಕ್ಕೆ ಕಾರಣ ಕೆಲವರು ಬೆಂಗಳೂರನ್ನು ತೆಗಳಿ, ಇನ್ನು ಕೆಲವರು ಹೊಗಳಿ ಹಾಕಿರುವ ಪೋಸ್ಟ್‌. ಹೈದರಾಬಾದ್‌ ತುಂಬ ಚೆನ್ನಾಗಿದೆ ಎಂದು ಕೆಲವರು ಹೇಳಿದ್ದಾರೆ. ಕೆಲವರು ಹೈದರಾಬಾದ್‌ನಲ್ಲಿ ಬೆಂಗಳೂರಿಗಿಂತ ಒಳ್ಳೆಯ ಸಂಬಳ ಸಿಗುತ್ತದೆ ಅಂದಿದ್ದಾರೆ. ಬೆಂಗಳೂರಿನ ಕೆಲವರು ʻʻಹೋಗಿ ಹೋಗಿ.. ನೀವೆಲ್ಲ ಹೋದರೇ ಒಳ್ಳೆಯರು. ಆಗಲಾದರೂ ಬೆಂಗಳೂರಿನ ಹಳೆ ಸೌಂದರ್ಯ ಮರಳಬಹುದುʼ ಎಂದಿದ್ದಾರೆ.

ಈ ನಡುವೆ, ಪೃಥ್ವಿ ರೆಡ್ಡಿ ಅವರು, ದಯವಿಟ್ಟು ಈ ವಿಚಾರವನ್ನು ಬೆಂಗಳೂರು ವರ್ಸಸ್‌ ಹೈದರಾಬಾದ್‌ ಮಾಡಬೇಡಿ. ನನ್ನ ಉದ್ದೇಶ ಅದು ಖಂಡಿತಾ ಅಲ್ಲ ಎಂದಿದ್ದಾರೆ.

ಇದನ್ನೂ ಓದಿ: Viral News : ಕಾರು ನನ್ನಪ್ಪಂದು, ರೋಡ್​ ಅಲ್ಲ; ಸ್ಟಂಟ್​ ಮಾಡಿದ ​ಯುವಕನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿಸಿದ ಪೊಲೀಸರು!

ಭಾಷೆಯ ಸಮಸ್ಯೆ ಇದೆಯಾ ಬೆಂಗಳೂರಲ್ಲಿ?

ಈ ನಡುವೆ KKBRS ಎಂಬವರು ಮಾಡಿರುವ ಟ್ವೀಟ್‌ ಚರ್ಚೆಯನ್ನು ಬೇರೆಡೆಗೆ ಹೊರಳಿಸಿದೆ.

ಬೆಂಗಳೂರಿಗೆ ಹೋಲಿಸಿದರೆ ಹೈದರಾಬಾದ್‌ನಲ್ಲಿ ಕಡಿಮೆ ಟ್ರಾಫಿಕ್‌ ಇದೆ. ಕಡಿಮೆ ಬೆಲೆಗೆ ಒಳ್ಳೆಯ ಆಹಾರ ಸಿಗುತ್ತದೆ. ಬಾಡಿಗೆ ಕಡಿಮೆ, ಕ್ಯಾಬ್‌ ಮೂಲಕ ಓಡಾಡುವುದೂ ಚೀಪ್‌ ಎಂದಿದ್ದಾರೆ KKBRS.

ಅದಕ್ಕಿಂತಲೂ ಹೆಚ್ಚಾಗಿ.. ಲೋ ತೆಲುಗು ಮಾತಾಡೋ ಅಂತ ಬೆದರಿಸುವವರು ಇಲ್ಲಿ ಇಲ್ಲ. ಹಿಂದಿ, ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಓಕೆ ಇಲ್ಲಿ. ಇಲ್ಲಿ ಎಲ್ಲರೂ ಹಮಾರಾ ಭಾಯಿ ಎಂದು ಪರಿಗಣಿಸುತ್ತಾರೆ. ಉತ್ತರ ಭಾರತೀಯರಿಗೆ ಈಗೀಗ ಬೆಂಗಳೂರಿನ ಬದಲು ಹೈದರಾಬಾದ್‌ ಇಷ್ಟವಾಗುತ್ತಿದೆ ಎಂದಿದ್ದಾರೆ.

ಒಟ್ಟಾರೆಯಾಗಿ ಒಂದು ಟ್ವೀಟ್‌ ಹಲವು ವಿಚಾರಗಳನ್ನು ಕೆದಕಿದ್ದು ನಿಜ.

Exit mobile version