Site icon Vistara News

ಫೆಬ್ರವರಿ ಅಂತ್ಯಕ್ಕೆ Bengaluru-Mysuru Expressway ಲೋಕಾರ್ಪಣೆ, ಟೋಲ್ ಕೊಡಲೇಬೇಕು ಎಂದ ಗಡ್ಕರಿ

Bengaluru-Mysuru Expressway @ Nitin Gadkari

ಬೆಂಗಳೂರು: 9000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ದಶಪಥ (Bengaluru-Mysuru Expressway) ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ ಮಾಡಲಾಗುವುದು. ಪ್ರಧಾನಿ ಮೋದಿ ಅಥವಾ ರಾಷ್ಟ್ರಪತಿ ಮುರ್ಮು ಅವರು ಈ ಹೆದ್ದಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಹೇಳಿದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯ ವೈಮಾನಿಕ ಸಮೀಕ್ಷೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಬೆಂಗಳೂರು-ಮೈಸೂರು ದಶಪಥ ಬಹಳ ಸುಂದರವಾಗಿ ನಿರ್ಮಾಣವಾಗಿದೆ. ಎರಡೂ ನಗರಗಳ ಮಧ್ಯೆ ಪ್ರಯಾಣದ ಅವಧಿಯನ್ನು 1.20 ಗಂಟೆಗೆ ಇಳಿಕೆಯಾಗಲಿದೆ. ಜತೆಗೆ, ಈ ಬಿಜಿಯೆಸ್ಟ್ ಹೆದ್ದಾರಿಯಾಗಿರುವುದರಿಂದ ಆರ್ಥಿಕ ಮತ್ತು ಕೈಗಾರಿಕೆ ಚಟುವಟಿಕೆಗಳಿಗೆ ನೆರವು ನೀಡಲಿದೆ ಎಂದು ತಿಳಿಸಿದರು.

ಈ ದಶಪಥಕ್ಕೆ ಸಂಬಂಧಿಸಿದಂತೆ ಸ್ಥಳೀಯ ಎಂಎಲ್ಎ, ಎಂಪಿಗಳು ಒಂದಷ್ಟು ಸಲಹೆ ನೀಡಿದ್ದಾರೆ. ಎಲ್ಲವನ್ನೂ ಪರಿಶೀಲನೆ ಮಾಡಲಾಗುವುದು. ಹೆದ್ದಾರಿ ಕಂಪ್ಲೀಟ್ ಆದ್ರೆ 90 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ನಡುವೆ ಸಂಚಾರ ಮಾಡಬಹುದು. ಹೆದ್ದಾರಿಯಿಂದ ಮೈಸೂರು, ಶ್ರೀರಂಗಪಟ್ಟಣ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ. ನಾವು ಸಾಮೂಹಿಕ ಸಾರಿಗೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಈ ದಶಪಥದಿಂದ ರಾಮನಗರ ಹಾಗೂ ಮಂಡ್ಯ ಜಿಲ್ಲೆಗೆ ಕನೆಕ್ಟಿವಿಟಿ ಸುಗಮ ಆಗಲಿದೆ. ಈ ಪ್ರದೇಶದಲ್ಲಿ ಕೈಗಾರಿಕಾ ಪಟ್ಟಣಗಳ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಇದರಿಂದ ಐಟಿ ಉದ್ಯಮಕ್ಕೆ ನೆರವು ದೊರೆಯಲಿದೆ ಎಂದು ಅವರು ತಿಳಿಸಿದರು.

ಎಕ್ಸ್‌ಪ್ರೆಸ್ ವೇ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಮೈಸೂರು ಭಾಗದಲ್ಲಿ ಅಲ್ಲಲ್ಲಿ ಒಂಚೂರು ಪೆಂಡಿಂಗ್ ಇದೆ. ಫೆಬ್ರವರಿ 23ರೊಳಗೆ ಪೆಂಡಿಂಗ್ ಇರುವ ಕಾಮಗಾರಿಯನ್ನು ಮುಗಿಸುವಂತೆ ಸೂಚಿಸಲಾಗಿದೆ. ಈ ಹೆದ್ದಾರಿಯು 52 ಕಡೆ ಗ್ರೀನ್ ಅಲೈನ್ಮೆಂಟ್ ಹೊಂದಿದೆ. ಕೆಲವು ಕಡೆ ಸಮಸ್ಯೆ ಇರುವ ಬಗ್ಗೆ ಮಾಹಿತಿ ಇದೆ. ಅದನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.

ಹೆದ್ದಾರಿ ಬದಿ ಸೌಲಭ್ಯ
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಳಿ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ನೇಕಾರಿಕೆ, ಗುಡಿ ಕೈಗಾರಿಕಾ ಉತ್ಪನ್ನಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಸ್ಥಳವನ್ನು ಮೀಸಲು ಇಟ್ಟಿದ್ದೇವೆ. ಜತೆಗೆ, ಕರ್ನಾಟಕದ ಹೆಚ್ಚುಗಾರಿಕೆಯ ಯಾವುದೇ ಉತ್ಪನ್ನಗಳ ಮಾರಾಟಕ್ಕೂ ಜಾಗ ಕಲ್ಪಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಗಡ್ಕರಿ ಅವರು ತಿಳಿಸಿದರು.

ಟ್ರಾಫಿಕ್ ಸಮಸ್ಯೆ ನೀಗಲಿದೆ
ಈ ಹೆದ್ದಾರಿಯಿಂದ ಮಂಡ್ಯ-ರಾಮನಗರ ಕನೆಕ್ಟಿವಿಟಿ ಹೆಚ್ಚಾಗಲಿದೆ. ಜತೆಗೆ, ಬೆಂಗಳೂರಿನ ಮೇಲಿನ ಟ್ರಾಫಿಕ್ ಒತ್ತಡ ಕೂಡ ಕಡಿಮೆಯಾಗಲಿದೆ. ಈ ಎರಡೂ ನಗರಗಳ ಮಧ್ಯೆ ಕೈಗಾರಿಕೆಗಳು, ಐಟಿ ಕಂಪನಿಗಳು, ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಈ ಹೆದ್ದಾರಿ ಕಾರಣವಾಗಲಿದೆ. ಇದು ಕರ್ನಾಟಕದ ಅಭಿವೃದ್ಧಿಯ ಎಂಜಿನ್ ಆಗಿ ರೂಪಗೊಳ್ಳಲಿದೆ ಎಂದು ಗಡ್ಕರಿ ಅವರು ಹೇಳಿದರು.

ಸ್ಯಾಟಲೈಟ್ ರಿಂಗ್ ರೋಡ್
ಬೆಂಗಳೂರು ಸ್ಯಾಟಲೈಟ್ ರಿಂಗ್ ರೋಡ್ ಕಾಮಗಾರಿ ಶುರುವಾಗಿದೆ. ಈ ರಸ್ತೆ ಅಭಿವೃದ್ಧಿಯಿಂದ ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಹುತೇಕ ಕಡಿಮೆಯಾಗಲಿದೆ. ಕರ್ನಾಟಕದಲ್ಲಿ 288 ಕಿ.ಮೀ ಮತ್ತು ತಮಿಳುನಾಡಿನಲ್ಲಿ 45 ಕಿ.ಮೀ ರಸ್ತೆ ಇರಲಿದೆ. ಇದಕ್ಕಾಗಿ 7 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ ಸ್ಯಾಟಲೈಟ್ ರಿಂಗ್ ರೋಡ್, ಬೆಂಗಳೂರು, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ, ಆನೇಕಲ್, ಹೊಸೊರು ಸಂಪರ್ಕಿಸಲಿದೆ ಎಂದು ತಿಳಿಸಿದರು.

ಟೋಲ್ ಕಟ್ಟಲೇಬೇಕು
ಉತ್ತಮ ರೋಡ್, ಉತ್ತಮ ಸೌಲಭ್ಯ ಬೇಕು ಎಂದಾದರೆ ಟೋಲ್ ಕಟ್ಟಲೇಬೇಕು. ಈ ಮೊದಲ ಬೆಂಗಳೂರಿಂದ ಮೈಸೂರಿಗೆ ತೆರಳಲು ಎಷ್ಟು ಸಮಯ ಬೇಕಾಗುತ್ತಿತ್ತು, ಎಷ್ಟು ಇಂಧನ ವೆಚ್ಚವಾಗುತ್ತಿತ್ತು ಎಂಬುದನ್ನು ಲೆಕ್ಕ ಹಾಕಿ. ಮತ್ತು ಈಗ ಈ ದಶಪಥವಾದ ಮೇಲೆ ಎಷ್ಟು ಉಳಿತಾಯವಾಗುತ್ತದೆ ಎಂಬುದನ್ನು ಪರಿಗಣಿಸಿ. ಹಾಗಾಗಿ, ಟೋಲ್ ಕಟ್ಟುವುದು ಅನಿವಾರ್ಯ. ಯಾರಿಗೂ ಉಚಿತ ಪ್ರವೇಶವಿಲ್ಲ ಎಂದು ಅವರು ತಿಳಿಸಿದರು.

ಬೆಂಗಳೂರಿಗೆ ಸ್ಕೈ ಬಸ್!
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನೀಗಿಸುವುದಕ್ಕಾಗಿ ಸ್ಕೈ ಬಸ್ ಯೋಜನೆ ಪರಿಶೀಲನೆಯಲ್ಲಿದೆ. ಆಸ್ಟ್ರೇಲಿಯಾದ ಕಂಪನಿಯೊಂದು ಈ ಬಗ್ಗೆ ಮಾತುಕತೆ ನಡೆಸುತ್ತಿದೆ. ಎಲ್ಲವೂ ಪ್ರಾಥಮಿಕ ಹಂತದಲ್ಲಿದೆ. ಈ ಸ್ಕೈ ಬಸ್ ಯೋಜನೆ ಬೆಂಗಳೂರಿಗೆ ಯೋಗ್ಯವಾಗಲಿದೆಯೇ ಇತ್ಯಾದಿ ಅಧ್ಯಯನಗಳನ್ನು ಕೈಗೊಂಡ ಬಳಿಕ ಈ ಕುರಿತು ಮುಂದುವರಿಯಲಾಗುವುದು ಎಂದು ಅವರು ತಿಳಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ ನಾಮಕರಣ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ನಾಲ್ವಡಿ ಕೃಷ್ಣರಾಜ ಒಡೆಯರ ನಾಮಕರಣ ಮಾಡುವ ಕುರಿತು ಎಸ್ ಎಂ ಕೃಷ್ಣ ಪತ್ರ ಬರೆದಿದ್ದಾರೆ. ಪತ್ರ ಸಿಕ್ಕಿದೆ. ನಮ್ಮಲ್ಲಿ ಹೆದ್ದಾರಿಗೆ ಹೆಸರು ಇಡುವ ಪರಿಪಾಠವಿಲ್ಲ. ಆದರೂ, ಮುಖ್ಯಮಂತ್ರಿಗಳು ಈ ಬಗ್ಗೆ ನಿರ್ಧಾರ ಕೈಗೊಂಡು ಶಿಫಾರಸು ಮಾಡಿದರೆ, ಪ್ರಧಾನಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ | SM Krishna | ಬೆಂಗಳೂರು-ಮೈಸೂರು ದಶಪಥಕ್ಕೆ ನಾಲ್ವಡಿ ಕೃಷ್ಣರಾಜರ ಹೆಸರಿಡಿ: ಕೇಂದ್ರಕ್ಕೆ ಎಸ್ ಎಂ ಕೃಷ್ಣ ಒತ್ತಾಯ

Exit mobile version