ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ (Social Media) ಬೇಕಾಬಿಟ್ಟಿ ಪೋಸ್ಟ್ ಹಾಕುವವರ ವಿರುದ್ಧ ಬೆಂಗಳೂರು ನಗರ ಪೊಲೀಸರು (Bengaluru city police) ಬಿಸಿ ಮುಟ್ಟಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ (Congress Leader) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ (Derogatory post) ಹಾಕಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಈಶ್ವರಪ್ಪ ಮುನಿಯಪ್ಪ ಎಂಬ ಟ್ವಿಟರ್ ಅಕೌಂಟ್‌ನಲ್ಲಿ ಅವಾಚ್ಯ ಶಬ್ಧದಿಂದ ನಿಂದಿಸಿ, ಕೆಟ್ಟ ಪದಗಳನ್ನು ಬಳಸಿ ಪೋಸ್ಟ್ ಮಾಡಲಾಗಿದೆ. ಅವಹೇಳನಕಾರಿ ಪೋಸ್ಟ್ ಹಾಕಿರುವ ಹಿನ್ನೆಲೆ ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ವಿಟರ್‌ನಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿ ಪರಮೇಶ್ವರ್ ಸೇರಿ ಲಕ್ಷ್ಮೀ ಹೆಬ್ಬಾಳ್ಕರ್, ಮಮತಾ ಬ್ಯಾನರ್ಜಿ ಬಗ್ಗೆಯೂ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಬಳಿಕ ನಾಯಕರುಗಳ ಅಧಿಕೃತ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಇದು ಗಮನಕ್ಕೆ ಬರುತ್ತಿದ್ದಂತೆ ವೈಟ್ ಫಿಲ್ಡ್ ಸೈಬರ್ ಪೊಲೀಸರು ಖುದ್ದು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಪ್ರಮುಖವಾಗಿ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಪೋಸ್ಟ್ ಮಾಡಿರುವ ಫೋಟೊಗೆ ರೌಡಿ ರೌಂಡ್ಸ್ ಎಂದು ಟ್ಯಾಗ್ ಮಾಡಿದ್ದಾನೆ. ಇನ್ನು ಸಿಎಂ ಸಿದ್ದರಾಮಯ್ಯಗೆ ಅವಾಚ್ಯ ಶಬ್ಧದಿಂದ ನಿಂದಿಸಿದ್ದು, ಸಿದ್ದ ಒಬ್ಬ ಪುಂಗ, ಸಿದ್ದರಾಮುಲ್ಲ ಎಂದೆಲ್ಲ ಪೋಸ್ಟ್ ಹಾಕಿದ್ದಾನೆ.
ಹದ್ದಿನ ಕಣ್ಣಿಟ್ಟ ಖಾಕಿ ಪಡೆ
ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡಲೆಂದೇ ಬೆಂಗಳೂರು ನಗರ ಪೊಲೀಸರು ಪ್ರತಿ ಪೊಲೀಸ್ ಠಾಣೆಯಲ್ಲೂ ಇಬ್ಬರನ್ನು ಆಯ್ಕೆ ಮಾಡಿ ಹ್ಯಾಂಡ್ಲರ್ ಆಗಿ ನೇಮಕ ಮಾಡಿದ್ದಾರೆ. ಆಯ್ಕೆಯಾದ ಸಿಬ್ಬಂದಿ 24 ಗಂಟೆಯೂ ಕೆಲಸ ಮಾಡುತ್ತಾರೆ. ಸುಳ್ಳು ಸುದ್ದಿಯ ಬೆನ್ನತ್ತುವ ಸಿಬ್ಬಂದಿ ಸುಳ್ಳುಕೋರರ ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಬಹುಮುಖ್ಯವಾಗಿ ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡುವ ಪೋಸ್ಟ್‌ಗಳು, ಧರ್ಮದ ಹಾಗೂ ಜಾತಿ ಬಗೆಗಿನ ಪೋಸ್ಟ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ