Site icon Vistara News

Bengaluru Potholes | ಬೆಂಗಳೂರು ರಸ್ತೆ ಗುಂಡಿ ವಿರುದ್ಧ ಕಾಂಗ್ರೆಸ್‌ ಕಿಡಿ; ಸಿಎಂ ಮನೆಗೆ ಮುತ್ತಿಗೆ ಯತ್ನ

congress protest 3

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಯೇ ರಸ್ತೆಗಳು ಸಾಕಷ್ಟು ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಗುಂಡಿಗಳೇ (Bengaluru Potholes) ಕಾಣುತ್ತಿವೆ. ಇದರಿಂದ ನಾಗರಿಕರು ಪ್ರಾಣ ಕಳೆದುಕೊಳ್ಳುತ್ತಿದ್ದು, ಶೀಘ್ರವೇ ಎಲ್ಲ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ ನಡೆಸಿದೆ. ಕಾಂಗ್ರೆಸ್ ಭವನದಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ ಮಾರ್ಗ ಮಧ್ಯದಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರೇಸ್ ಕೋರ್ಸ್ ರಸ್ತೆ ಬಳಿ ಇರುವ ಮುಖ್ಯಮಂತ್ರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಬೆಂಗಳೂರಿನ ರಸ್ತೆಗಳ ದುಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದೊಂದಿಗೆ ಕಾಂಗ್ರೆಸ್‌ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ನಗರದ ವಿವಿಧ ಕಡೆ ಮೆರವಣಿಗೆ ನಡೆಸಿದೆ.

ಬಿಜೆಪಿಯಿಂದ ಬೆಂಗಳೂರಿಗೆ ಕಳಂಕ- ದಿನೇಶ್‌ ಗುಂಡೂರಾವ್‌
ಪ್ರತಿಭಟನೆ ಆರಂಭಕ್ಕೂ ಮೊದಲು ಆನಂದ ರಾವ್ ಸರ್ಕಲ್ ಬಳಿಯಿರುವ ಕಾಂಗ್ರೆಸ್ ಭವನ ಬಳಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡರು ಸಹಿತ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಪ್ರತಿಭಟನೆಗೆ ಆಗಮಿಸಿದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯಿಂದ ಬೆಂಗಳೂರಿಗೆ ಕಳಂಕ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ | Bharat Jodo | ಗಡಿನಾಡಿನಲ್ಲಿ ಮೂರು ದಿನ ವಾಸ್ತವ್ಯ ಹೂಡಿದ ರಾಹುಲ್ ಗಾಂಧಿ, ಬಲಗೊಂಡಿತೇ ಬಳ್ಳಾರಿ ಕೈಪಡೆ?

ರಸ್ತೆ ಗುಂಡಿ ಬೀಳಲು 40% ಕಮಿಷನ್ ಮೂಲ ಕಾರಣವಾಗಿದೆ. ಬೆಂಗಳೂರು ನಗರಕ್ಕೆ ಅನುದಾನ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಕೆಲಸಗಳು ಆಗಿಲ್ಲ. ಯಾವುದೇ ಕಡತಗಳೂ ವಿಲೇವಾರಿ ಆಗುತ್ತಿಲ್ಲ. ಆಡಳಿತ ಯಂತ್ರ ಕುಸಿದಿದೆ. ಸರ್ಕಾರ ಬಂದು ಮೂರು ವರ್ಷ ಆಗಿದೆ. ಶಾಸಕರು, ಆಯುಕ್ತರನ್ನು ಕರೆದು ಸಭೆ ಮಾಡಲಾಗಿಲ್ಲ. ಇದಕ್ಕೆಲ್ಲೆ ಮುಖ್ಯಮಂತ್ರಿಗೆ ಸಮಯ ಇಲ್ಲ. ಲೂಟಿ ಮಾಡುವುದೇ ಅವರ ಉದ್ದೇಶವಾಗಿದೆ. ಗುಂಡಿ ಮುಚ್ಚಲೂ ಅವರಿಗೆ ಆಗುತ್ತಿಲ್ಲ. ಅನೇಕರಿಗೆ ಏಟಾಗಿದೆ, ಮತ್ತು ಹಲವರ ಪ್ರಾಣ ಹಾನಿಯಾಗಿದೆ. ಇದು ದುರ್ದೈವದ ಸಂಗತಿ ಎಂದು ಕಿಡಿಕಾರಿದರು.

ಪಾತ್‌ ಹೋಲ್‌ ಸಿಟಿ ಬಿರುದು- ಗುಂಡೂರಾವ್‌
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಬೆಂಗಳೂರಿಗೆ ಗಾರ್ಬೆಜ್ ಸಿಟಿ ಎನ್ನುವ ಕೊಡುಗೆಯನ್ನು ಕೊಟ್ಟಿತ್ತು. ಈ ಬಾರಿ ಅಧಿಕಾರಕ್ಕೆ ಬಂದು ಪಾತ್ ಹೋಲ್ ಸಿಟಿ ಎನ್ನುವ ಬಿರುದು ಕೊಟ್ಟಿದ್ದಾರೆ. ಟೆಂಡರ್‌ಗೆ ಲಂಚ, ಬಿಲ್ ಮಾಡೋದಕ್ಕೆ ಲಂಚ, ವರ್ಕ್ ಆರ್ಡರ್ ಕೊಡೋದಕ್ಕೆ ಲಂಚ ಕೊಡಬೇಕಿದೆ. ಇನ್ನು ಕಾಂಗ್ರೆಸ್‌ ಶಾಸಕರಿಗೆ ಒಂದು ರೀತಿ ಅನುದಾನ, ಬಿಜೆಪಿ ಶಾಸಕರಿಗೆ ಒಂದ್ ರೀತಿಯ ಅನುದಾನವನ್ನು ನೀಡಲಾಗುತ್ತಿದೆ. ಅದರ ಉದ್ದೇಶ ಕಾಂಗ್ರೆಸ್ ಶಾಸಕರಿಗೆ ಕೆಟ್ಟ ಹೆಸರು ತರುವುದಾಗಿದೆ. ಬಿಬಿಎಂಪಿಯಲ್ಲಿ ಎಲೆಕ್ಟೆಡ್ ಬಾಡಿ ಇಲ್ಲ. ಅಧಿಕಾರಿಗಳದ್ದೇ ಕಾರುಬಾರಾಗಿದೆ. ಬೆಂಗಳೂರಿನಲ್ಲಿರು ಏಳು ಜನ ಮಂತ್ರಿಗಳು ತಮ್ಮ ಕ್ಷೇತ್ರಕ್ಕೆ ಅನುದಾನ ತೆಗೆದುಕೊಳ್ಳುತ್ತಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ಅಸಮಾಧಾನ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಕಡಿಮೆ ಮಾಡಿ ಅಭಿವೃದ್ಧಿ ತಾನಾಗಿಯೇ ಆಗುತ್ತದೆ. ಹೀಗಾಗಿ ನಾವು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವುದಕ್ಕೂ ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾಗಿ ಪ್ರತಿಭಟನೆ ಮೂಲಕ ಸಿಎಂ ಭೇಟಿ ಮಾಡಲು ಹೋಗುತ್ತಿದ್ದೇವೆ. ಜನರ ಪರವಾಗಿ ಭೇಟಿ ಮಾಡಲು ಹೋಗುತ್ತಿದ್ದೇವೆ ಎಂದು ದಿನೇಶ್‌ ಹೇಳಿದರು.

Bengaluru Potholes

ಕಾಂಗ್ರೆಸ್‌ ಮುಖಂಡರ ವಶ
ಕಾಂಗ್ರೆಸ್ ಭವನದಿಂದ ಹೊರಟ ಪ್ರತಿಭಟನಾ ರ‍್ಯಾಲಿಯು ರೇಸ್ ಕೋರ್ಸ್ ರಸ್ತೆ ಮಾರ್ಗವಾಗಿ ಸಿಎಂ ನಿವಾಸದತ್ತ ಸಾಗುತ್ತಿರುವ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ರಾಮಲಿಂಗರೆಡ್ಡಿ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು, ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Bharat jodo | ಅ.22ರಂದು ರಾಯಚೂರಿನಲ್ಲಿ ನಡೆಯುವ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಭಾಗಿ

Exit mobile version