Site icon Vistara News

Bengaluru Rain: ಡಿಕೆಶಿ ಅಪಾರ್ಟ್‌ಮೆಂಟ್ ಆದರೂ ಬುಲ್ಡೋಜರ್‌ ಪಕ್ಕಾ: ಡಿಸಿಎಂ ಡಿ.ಕೆ. ಶಿವಕುಮಾರ್‌ ಖಡಕ್‌ ಮಾತು

DK Shivakumar

#image_title

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಸುರಿದಾಗ ಹಾನಿಯಾಗುವ ಹಾಗೂ ಲೇಔಟ್‌ಗಳಿಗೆ ನೀರು ನುಗ್ಗುವ ಪ್ರದೇಶಗಳಿಗೆ ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.

ಯಮಲೂರು, ದೊಮ್ಮಲೂರು, ಬೆಳಂದೂರು ಸರ್ಜಾಪುರ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ಒತ್ತುವರಿಯಾದ ರಾಜಕಾಲುವೆ ಸ್ಥಳಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ಬೆಂಗಳೂರು ಮೆಟ್ರೊ, ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಜತೆಗೆ ವೀಕ್ಷಣೆ ಮಾಡಿದರು.

ಯಮಲೂರು ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಸ್ಟ್ರಾಮ್ ವಾಟರ್ ಡ್ರೈನ್ ವೀಕ್ಷಣೆ ಮಾಡಿದ ಡಿ.ಕೆ. ಶಿವಕುಮಾರ್‌, ಬೆಳ್ಳಂದೂರು ಕೆರೆಯಿಂದ ಕೋಡಿ ಸಂಪರ್ಕಿಸುವ ಸ್ಥಳ ವೀಕ್ಷಿಸಿದರು. ದಿವ್ಯಶ್ರೀ ಅಪಾರ್ಟ್‌ಮೆಂಟ್‌ ಬಳಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದನ್ನು ಡಿ.ಕೆ. ಶಿವಕುಮಾರ್‌ ಗಮನಿಸಿದರು. 12 ಮೀಟರ್ ರಾಜಕಾಲುವೆ ಇದೆ, ಇಲ್ಲಿ 7 ಮೀಟರ್ಗೆ ಕಡಿಮೆ ಮಾಡಲಾಗಿದೆ. ಹೀಗೆ ಇದ್ರೆ ಮತ್ತೆ ಫ್ಲಡ್ ಆಗುತ್ತೆ. ತಕ್ಷಣ ತೆರವುಗೊಳಿಸಿ ಸಧ್ಯಕ್ಕೆ ಕಚ್ಚಾ ರಾಜಕಾಲುವೆ ನಿರ್ಮಿಸಿ ಎಂದು ಬಿಬಿಎಂಪಿ ಅಧಿಕಾರಿಗೆ ಸೂಚಿಸಿದರು.

ಬೆಳ್ಳಂದೂರು ಕೆರೆಗೆ ಆಗಮಿಸಿದ ಡಿ.ಕೆ. ಶಿವಕುಮಾರ್‌, ಅಲ್ಲಿನ ಸ್ಥಿತಿಯ ಮಾಹಿತಿ ಪಡೆದು ಸರ್ಜಾಪುರದ ರೈನ್ ಬೋ ಡ್ರೈವ್ ಅಪಾರ್ಟ್ ಮೆಂಟ್ ಕಡೆಗೆ ಪ್ರಯಾಣಿಸಿದರು. ಕಳೆದ ಬಾರಿ ಮಳೆಯಿಂದ ಈ ಅಪಾರ್ಟ್‌ಮೆಂಟ್‌ನಲ್ಲಿ ಅವಾಂತರ ಸೃಷ್ಟಿಯಾಗಿತ್ತು, ಸರ್ಜಾಪುರ ನೆರೆಪ್ರವಾಹ ಸ್ಥಳಗಳಿಗೆ ಭೇಟಿ ನೀಡಿದ ಡಿಸಿಎಂ, ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಬೆಂಗಳೂರು ನಗರ ಪಾಲಿಕೆ, ಬಿಡಿಎ ವ್ಯಾಪ್ತಿಯಲ್ಲಿ ನೀರು ಹರಿದೇ ಕೆಟ್ಟ ಹೆಸರು ಬಂದಿತ್ತು. ಈಗ ಅಂತಹ ಜಾಗಗಳಿಗೆ ಭೇಟಿ ನೀಡಿದ್ದೇನೆ. ಬೆಂಗಳೂರು ಅತಿ ಹೆಚ್ಚಿನ ತೆರಿಗೆ ನೀಡುವ ಜಾಗ. ಮಳೆ ಬಂದಾಗ ನೀರು ತುಂಬಿ ಜನ ಸಮಸ್ಯೆ ಅನುಭವಿಸೋದನ್ನ ಕಂಡಿದ್ದೇವೆ.

ಸಮಸ್ಯೆ ಇರೋ ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆ ತಿಳಿದಿದ್ದೇನೆ. ಕೆಲ ಖಾಸಗಿ ಡೆವಲಪರ್ಸ್ ಕಾಲುವೆ ಮುಚ್ಚಿರೋದು ಕಂಡುಬಂದಿದೆ. ಯಾರ ಒತ್ತಡ ಇದ್ರೂ ಕೂಡ ಅದನ್ನ ತೆರವು ಮಾಡುವಂತೆ ಸೂಚನೆ ಕೊಟ್ಟಿದ್ದೇನೆ. ರಾಜಕಾಲುವೆ ಕೆಲಸ 173 ಕಿ.ಮೀ ಬಾಕಿ ಇದೆ. ಮುಂದೆ ಮಳೆಯಿಂದ ತೊಂದರೆಯಾಗಬಾರದು.

ಪಾಲಿಕೆ, ಜಲಮಂಡಳಿ, ಬಿಡಿಎ ಎಲ್ಲರೂ ಸೇರಿ ಕೆಲಸ ಮಾಡಬೇಕು. ಈ ಭಾಗದಲ್ಲಿ ಮೆಟ್ರೋ ಕೆಲಸ ವೇಗವಾಗಿ ನಡೀತಿದೆ. ಕಾಮಗಾರಿಯ ಪ್ರಗತಿಯೇ ಬೆಂಗಳೂರಿನ ಅಭಿವೃದ್ಧಿ. ನಾನು ಆಫೀಸ್‌ನಲ್ಲಿ ಕೂತು ಸ್ಲೈಡ್‌ ನೋಡುವವನಲ್ಲ. ಅದಕ್ಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.

ಕೆಲ ಸ್ಥಳಗಳಲ್ಲಿ ಒತ್ತುವರಿ ತೆರವು ಬಾಕಿ ಇದೆ. ಕೋರ್ಟ್, ಕಚೇರಿ ಅಂತಾ ಹೋದ್ರೆ ನಮಗೂ ಕಾನೂನಿದೆ. ಸರ್ಕಾರಿ ಜಾಗಗಳಲ್ಲಿ ಒತ್ತುವರಿ ಮಾಡಿಕೊಂಡ್ರೆ ಕ್ರಮ ಆಗುತ್ತೆ. ಅಧಿಕಾರಿಗಳಿಗೆ ಅಧಿಕಾರ ವಹಿಸಿದ್ದೇವೆ. ತಾಂತ್ರಿಕ ದೋಷಗಳು, ಎಲ್ಲ ಒತ್ತುವರಿಗಳ ಬಗ್ಗೆ ಪರಿಶೀಲಿಸಿದ್ದೇನೆ. ಯಾರೇ ಆದ್ರೂ ಜನರಿಗೆ ತೊಂದರೆ ಮಾಡಿದ್ರೆ ನಾವು ಕಾನೂನು ಬಳಸುತ್ತೇವೆ ಎಂದರು.

ದಿವ್ಯಶ್ರೀ ಅಪಾರ್ಟ್‌ಮೆಂಟ್ ಇರಲಿ, ಡಿಕೆಶಿ ಅಪಾರ್ಟ್‌ಮೆಂಟ್ ಇರಲಿ ಕ್ರಮಕ್ಕೆ ಹೇಳಿದ್ದೇನೆ. ರಾಜಕಾಲುವೆ ನೀರು ಹರಿಯಲು ರಾಜಕಾಲುವೆ ಅಗಲ ಎಷ್ಟಿದೆ ಅದನ್ನ ಬಿಡಬೇಕು. ನೋಟೀಸ್ ಏನೂ ಕೊಡಲ್ಲ, ಬಾಯಿ ಮಾತಲ್ಲಿ ಹೇಳ್ತೀನಿ. ನೋಟಿಸ್ ನೀಡಿದ್ರೆ ಕೋರ್ಟ್‌ನಿಂದ ಸ್ಟೇ ತರುತ್ತಾರೆ. ಒತ್ತುವರಿ ತೆರವು ವಿಚಾರದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಿಲ್ಲ,. ನಿಲ್ಲಿಸಲು ಯಾರಿಗೂ ಹೇಳಿಲ್ಲ. ಅಧಿಕಾರಿಗಳು ಅವರವರ ಕೆಲಸ ಮಾಡ್ತಾರೆ ಎಂದರು.

ಇದನ್ನೂ ಓದಿ: Rajakaluve Encroachment: ಬೆಂಗಳೂರಲ್ಲಿ ಮತ್ತೆ ಜೆಸಿಬಿ ಗರ್ಜನೆ; ಉರುಳಲಿವೆಯೇ ಮತ್ತಷ್ಟು ಅಕ್ರಮ ಒತ್ತುವರಿ ಕಟ್ಟಡ?

Exit mobile version