ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರ ಸಂಜೆ ಅಬ್ಬರಿಸಿದ ಮಳೆಯ ಪರಿಣಾಮವಾಗಿ ಅಂಡರ್‌ಪಾಸ್‌ನಲ್ಲಿ ತುಂಬಿಕೊಂಡ ನೀರಿನಲ್ಲಿ ಮುಳುಗಿ ಇನ್ಫೋಸಿಸ್ ಉದ್ಯೋಗಿಯೊಬ್ಬರು ಮೃತಪಟ್ಟಿದ್ದರು. ಕೆ.ಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಈ ದುರ್ಘಟನೆ ನಡೆದಿತ್ತು. ಇದೀಗ ಈ ಪ್ರಕರಣದ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮೃತ ಯುವತಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ (22). ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹೇಗೆ ನಡೆದಿತ್ತು?
ಆಂಧ್ರ ಮೂಲದ ಭಾನುರೇಖಾ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಒಂದೇ ಕುಟುಂಬದ ಒಟ್ಟು ಆರು ಜನ ಕಾರಿನಲ್ಲಿದ್ದರು. ಡ್ರೈವರ್ ಸೇರಿ ಏಳು ಜನರಿದ್ದರು. ಸಮಿತಾ (13), ಸೋಹಿತಾ (15), ಸಂಭ್ರಾಜ್ಯಂ (65), ಭಾನುರೇಖಾ (22) ಹರೀಶ್ ಸ್ವರೂಪ (47), ಸಂದೀಪ್ (35) ಕಾರಿನಲ್ಲಿದ್ದರು.
ಅಂಡರ್‌ಪಾಸ್‌ನಲ್ಲಿ ಕಾರು ಇಳಿಯುತ್ತಿದ್ದಂತೆ, ನೀರು ಹೆಚ್ಚಾಗುತ್ತಿದೆ, ಕಾರು ಮುಂದೆ ಹೋಗುವುದಿಲ್ಲ, ಹೀಗಾಗಿ ಎಲ್ಲರೂ ಕೆಳಗಿಳಿಯಿರಿ ಎಂದು ಚಾಲಕ ಹೇಳಿದ್ದ. ಆದರೆ ಕಾರು ಮೂವ್ ಮಾಡಿ, ಹೋಗಬಹುದು ಎಂದು ಡ್ರೈವರ್‌ಗೆ ಇವರು ಒತ್ತಾಯಿಸಿದರು. ಈ ವೇಳೆ ಚಾಲಕ ಕಾರು ಮುಂದೆ ಬಿಡುತ್ತಿದ್ದಂತೆ ಕ್ಷಣ ಕ್ಷಣಕ್ಕೂ ಅಂಡರ್‌ಪಾಸ್ ಒಳಗೆ ನೀರು ಹೆಚ್ಚಾಗುತ್ತ ಹೋಯಿತು. ಇಂಜಿನ್‌ಗೆ ನೀರು ತುಂಬಿಕೊಂಡು ಬ್ಲಾಕ್ ಆಯಿತು. ನಂತರ ಕಾರು ರೀಸ್ಟಾರ್ಟ್ ಮಾಡಲು ಸಾಧ್ಯವಾಗಿರಲಿಲ್ಲ.
ಅಷ್ಟರಲ್ಲೇ ನೀರು ಕಾರಿನ ಡೋರ್‌ನ ಮಟ್ಟಕ್ಕೆ ಬಂದಿದ್ದು, ನಂತರ ಡೋರ್ ಬ್ಲಾಕ್ ಆಗಿ ತೆಗೆಯಲು ಕಷ್ಟವಾಯಿತು. ಈ ವೇಳೆ ಡ್ರೈವರ್ ಡೋರ್ ತೆಗೆದು ಒಬ್ಬೊಬ್ಬರನ್ನೇ ಕೆಳಗೆ ಇಳಿಸಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಾಗಲೇ ಒಳಗಡೆ ಇದ್ದ ಭಾನುರೇಖಾ ಸಾಕಷ್ಟು ನೀರು ಕುಡಿದಿದ್ದರು. ನೀರು ಕುಡಿದು ಪ್ರಜ್ಞೆ ಕಳೆದುಕೊಂಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಒಬ್ಬೊಬ್ಬರನ್ನೇ ರಕ್ಷಣೆ ಮಾಡಿದ್ದರು. ನಂತರ ಎಲ್ಲರನ್ನೂ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆ ತಂದಿದ್ದರು. ಬಂದ ಕೂಡಲೇ ಭಾನುರೇಖಾ ಅವರನ್ನು ಪರೀಕ್ಷಿಸಿದ ಆಸ್ಪತ್ರೆ ವೈದ್ಯರು, ಅವರು ಮೃತಪಟ್ಟಿದ್ದನ್ನು ಖಚಿತಪಡಿಸಿದ್ದರು.
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೇಸ್
ಯುವತಿ ಸಹೋದರ ಸಂದೀಪ್ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದು, ನೀರು ಹೊರ ಹೋಗಲು ಸೂಕ್ತ ಕ್ರಮ ಕೈಗೊಳ್ಳದ ಬಗ್ಗೆ ದೂರು ನೀಡಲಾಗಿದೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸರು ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.
ಘಟನೆ ಸ್ಥಳಕ್ಕೆ ಡಿಸಿಎಂ ಡಿಕೆಶಿ ಭೇಟಿ
ದುರ್ಘಟನೆ ನಡೆದ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭಾನುವಾರ ರಾತ್ರಿ ಭೇಟಿ ನೀಡಿದ್ದಾರೆ. ಜತೆಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಉಪಸ್ಥಿತರಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಂಡರ್‌ಪಾಸ್‌ನ ಸ್ಥಿತಿಗತಿ ಬಗ್ಗೆ ಡಿಕೆಶಿ ಅವರಿಗೆ ವಿವರಣೆ ನೀಡಿದರು.
ಇಂಥ ಘಟನೆಗಳ ನಿವಾರಣೆಗೆ ಒಂದು ವಿವರವಾದ ಆಕ್ಷನ್ ಪ್ಲಾನ್ ಮಾಡಬೇಕಿದೆ. ನೀವು ಮಾಧ್ಯಮ ಸಹ ಉತ್ತಮ ಕೆಲಸ ಮಾಡಿದ್ದೀರಿ, ಅದನ್ನು ನಾನು ಅಭಿನಂದಿಸುತ್ತೇನೆ. ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳುತ್ತೇವೆ. ಅಂಡರ್‌ಪಾಸ್‌ಗಳಿಗೆ ಕ್ಯಾಮೆರಾ ಅಳವಡಿಕೆಗೆ ಸೂಚನೆ ನೀಡಿದ್ದೇನೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಘಟನಾ ಸ್ಥಳದಲ್ಲಿ ಪರಿಶೀಲನೆ ಬಳಿಕ ಡಿಕೆಶಿ ಹೇಳಿದರು.
ಇದನ್ನೂ ಓದಿ: Karnataka Rain: ಸಿಡಿಲು ಬಡಿದು ರೈತ ಮಹಿಳೆ ಸಾವು; ಭಾನುವಾರದ ಮಳೆಯಿಂದಾದ ಸಾವಿನ ಸಂಖ್ಯೆ 4ಕ್ಕೇರಿಕೆ