ಬೆಂಗಳೂರು: ಬೆಂಗಳೂರಿನಲ್ಲಿ ಈಗ ರಸ್ತೆ ಗುಂಡಿಗಳೇ (Bengaluru Road) ಸದ್ದು ಮಾಡುತ್ತಿವೆ. ಆದರೆ, ಈಗ ಪ್ರತಿ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಗುಂಡಿ ಮುಚ್ಚಲು ಬರೋಬ್ಬರಿ ೧೦ ಸಾವಿರ ರೂಪಾಯಿ ವ್ಯಯಿಸಲಾಗುತ್ತಿದೆ. ಇಷ್ಟು ವಹಿಸಿದರೂ ಗುಂಡಿಗಳು ಕಿತ್ತುಬರುತ್ತಿರುವುದರಿಂದ ಇವುಗಳೂ ಸಾಲುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.
ವರ್ಷಕ್ಕೆ ರಸ್ತೆ ಗುಂಡಿ ಮುಚ್ಚುವುದಕ್ಕೆ 30 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಪ್ರತಿ ವರ್ಷ ಮೂವತ್ತು ಸಾವಿರ ರಸ್ತೆ ಗುಂಡಿ ಮುಚ್ಚುತ್ತೇವೆ. ಈ ವರ್ಷ 2೩ ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತುಷಾರ್ ಗಿರಿನಾಥ್ ಅವರು ಹೇಳಿರುವ ಲೆಕ್ಕಾಚಾರದ ಪ್ರಕಾರ ೩೦ ಸಾವಿರ ಗುಂಡಿ ಮುಚ್ಚಲು ೩೦ ಕೋಟಿ ರೂಪಾಯಿ ಬೇಕಿದೆ ಎಂದಾದರೆ, ಒಂದು ಗುಂಡಿ ಮುಚ್ಚಲು ೧೦ ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಇಷ್ಟು ವೆಚ್ಚ ಮಾಡಿದರೂ ಸಹ ಗುಂಡಿ ಮುಚ್ಚಿದ ಸ್ವಲ್ಪ ದಿನದಲ್ಲಿಯೇ ಆ ಭಾಗವು ಮತ್ತೆ ಕಿತ್ತು ಹೋಗಿ ಗುಂಡಿಗಳಾಗಿ ಮಾರ್ಪಟ್ಟಿರುತ್ತವೆ. ಇದೀಗ ಬಿಬಿಎಂಪಿ ಕಾರ್ಯವೈಖರಿಯನ್ನು ಪ್ರಶ್ನೆ ಮಾಡುವಂತಿದೆ.
ನಗರ ಪ್ರದಕ್ಷಿಣೆ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ನಗರ ಪ್ರದಕ್ಷಿಣೆ ಎರಡನೇ ದಿನವೂ ಮುಂದುವರಿದಿದ್ದು, ಈ ವೇಳೆ ಗುಂಡಿಗಳು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬಂದಿವೆ. ಅಲ್ಲದೆ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವಿಗೆ ಆದೇಶಿಸಿದ್ದಲ್ಲದೆ, ಕ್ರಮವಹಿಸದ ಅಧಿಕಾರಿಗಳನ್ನು ಅಮಾನತು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಇದೇ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ ರಸ್ತೆ ಗುಂಡಿ ಮುಚ್ಚಲು 30 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ | ಈ ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ ಫಿಕ್ಸ್ ; ಡಿ. 31ರೊಳಗೆ ಚುನಾವಣೆ ಮುಗಿಸಲು ಹೈಕೋರ್ಟ್ ಸೂಚನೆ
ಬಿಬಿಎಂಪಿಯ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ವಾಟಾಳ್ ನಾಗರಾಜ್ ರಸ್ತೆ (ಸುಜಾತ ಟಾಕೀಸ್ ಬಳಿಯಿಂದ), ಡಾ. ರಾಜ್ ಕುಮಾರ್ ರಸ್ತೆ, ರಾಜಾಜಿನಗರ 6ನೇ ಬ್ಲಾಕ್ ವೃತ್ತ, ಮಾಗಡಿ ಜಂಕ್ಷನ್‌ನಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ (ಟೋಲ್ ಗೇಡ್ ಕಡೆಗೆ), ಟೋಲ್ ಗೇಟ್ ಜಂಕ್ಷನ್, ಜೈ ಮುನಿರಾವ್ ವೃತ್ತ ಹಾಗೂ ಹೌಸಿಂಗ್ ಬೋರ್ಡ್ ಜಂಕ್ಷನ್‌ವರೆಗೆ ಕಾಲ್ನಡಿಗೆ ಮೂಲಕವೇ ಸಂಚರಿಸಿದ ಪರಿಶೀಲನೆ ನಡೆಸಿದರು.
ಗುಂಡಿ ಇರುವುದನ್ನು ಒಪ್ಪಿಕೊಂಡ ಕಮಿಷನರ್
ಸುಜಾತ ಥಿಯೇಟರ್ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ತುಷಾರ್ ಗಿರಿನಾಥ್, ರಸ್ತೆಗುಂಡಿ ಇರುವುದು ನಿಜ. ಆದರೆ, ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ವರ್ಷಕ್ಕೆ ರಸ್ತೆ ಗುಂಡಿ ಮುಚ್ಚುವುದಕ್ಕೆ 30 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಪ್ರತಿ ವರ್ಷ ಮೂವತ್ತು ಸಾವಿರ ರಸ್ತೆ ಗುಂಡಿ ಮುಚ್ಚುತ್ತೇವೆ. ಈ ವರ್ಷ 2೩ ಸಾವಿರ ಮುಚ್ಚುತ್ತಿದ್ದೇವೆ. ಪ್ರಮುಖ ರಸ್ತೆಗಳಲ್ಲಿಯೇ ಒಂದೂವರೆ ಸಾವಿರದಿಂದ ೨ ಸಾವಿರ ಗುಂಡಿಗಳಿವೆ. ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಮಳೆ ಕಾರಣಕ್ಕೆ ಕೆಲವು ತಾಂತ್ರಿಕ ತೊಡಕು ಉಂಟಾಗಿದೆ ಎಂದು ತಿಳಿಸಿದರು.
ಪೈಥಾನ್ ಯಂತ್ರದ ಮೂಲಕ ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಿದ್ದೇವೆ. ಇದನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಅವರು ಆ ಕೆಲಸ ಮಾಡದಿದ್ದರೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸುಜಾತ ಟಾಕೀಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋದಾಗ ಕೆಳಗೆ ಬಿದ್ದು ಮೃತಪಟ್ಟಿರುವ ಮಹಿಳೆಯ ಪ್ರಕರಣದ ವರದಿಗೆ ಕಾಯುತ್ತಿದ್ದೇವೆ. ಪೊಲೀಸರಿಂದ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಪರಿಹಾರ ನೀಡುವ ಬಗ್ಗೆ ವರದಿ ಬಂದ ನಂತರ ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳನ್ನು ಮುಖ್ಯ ಆಯುಕ್ತರು ತರಾಟೆ ತೆಗೆದುಕೊಂಡರು.
ಪುಟ್ಪಾತ್‌ನಲ್ಲಿ ಶಾಪ್ ಕಂಡರೆ ಸಸ್ಪೆಂಡ್
ಪುಟ್ಪಾತ್‌ನಲ್ಲಿ ಎಲ್ಲೆಂದರಲ್ಲಿ ಶಾಪ್‌ಗಳನ್ನು ಹಾಕಿಕೊಳ್ಳಲಾಗಿದೆ. ಕೂಡಲೇ ಇವುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಅಮಾನತು ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಬಿಬಿಎಂಪಿ ಕಮಿಷನರ್ ಎಚ್ಚರಿಕೆ ನೀಡಿದರು.
ಸೋಮಣ್ಣ ಫ್ಲೆಕ್ಸ್ ತೆಗೆಯಲು ಮೀನಮೇಷ
ತುಷಾರ್ ಗಿರಿನಾಥ್ ಪರಿಶೀಲನೆ ವೇಳೆ ಗೋವಿಂದರಾಜನಗರ ರಸ್ತೆ ಪಕ್ಕದಲ್ಲೇ ಇದ್ದ ಸಚಿವ ಸೋಮಣ್ಣ ಅವರ ಬ್ಯಾನರ್ ತೆಗೆಯಲು ಬಿಬಿಎಂಪಿ ಸಿಬ್ಬಂದಿ ಮಿನಮೇಷ ಎಣಿಸಿದ್ದು, ಕೊನೆಗೆ ಮಾಧ್ಯಮದವರು ಇದ್ದಾರೆಂಬ ಕಾರಣಕ್ಕೆ ತೆರವುಗೊಳಿಸಿರುವುದು ಕಂಡುಬಂತು.
ಮಾಗಡಿ ರಸ್ತೆಗೆ ಬಂದಾಗ ಫುಟ್‌ಪಾತ್ ಅತಿಕ್ರಮಣ ವಿಚಾರವಾಗಿ ಗರಂ ಆದ ಮುಖ್ಯ ಆಯುಕ್ತರು, ಅನಧಿಕೃತವಾಗಿ ಡಬ್ರಿಸ್ ತುಂಬಿದ್ದ ಮಾಲೀಕರಿಗೆ ನೋಟಿಸ್ ನೀಡಿ, ಒಂದು ಲಕ್ಷ ರೂ. ದಂಡ ಹಾಕುವಂತೆ ವಾರ್ಡ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯಂತ್ರೋಪಕರಣಗಳ ಬಳಕೆ
ಪರಿಶೀಲನೆಯ ವೇಳೆ ಜೆಸಿಬಿ, ಶಿಲ್ಟ್ ಆ್ಯಂಡ್ ಟ್ರ್ಯಾಕ್ಟರ್‌ಗಳು ಹಾಗೂ ಆಟೋ ಟಿಪ್ಪರ್‌ಗಳು, ಮರದ ಕೊಂಬೆ ಕಟಾವು ಮಾಡುವ ಯಂತ್ರ, ಪೌರಕಾರ್ಮಿಕರ ತಂಡವು ಸ್ವಚ್ಛತಾ ಕಾರ್ಯದಲ್ಲಿ ನಿರತವಾಗಿದ್ದವು. ಈ ವೇಳೆ ಶಾಸಕ ಸುರೇಶ್ ಕುಮಾರ್, ವಲಯ ಆಯುಕ್ತ ಡಾ. ಆರ್.ಎಲ್.ದೀಪಕ್, ವಲಯ ಜಂಟಿ ಆಯುಕ್ತ ಯೋಗೇಶ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರ ದೊಡ್ಡಯ್ಯ, ವಿದ್ಯುತ್, ಅರಣ್ಯ, ಘನತ್ಯಾಜ್ಯ ಹಾಗೂ ಇನ್ನಿತರೆ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ | ರಸ್ತೆ ಗುಂಡಿ ಕಾರಣಕ್ಕೆ ಮಹಿಳೆ ಸಾವಿನ ತನಿಖೆಗೆ ಆದೇಶ ನೀಡಿದ ಸಿಎಂ ಬೊಮ್ಮಾಯಿ: ಬಿಬಿಎಂಪಿ ಅಧಿಕಾರಿಗಳಲ್ಲಿ ನಡುಕ