Site icon Vistara News

Assault Case : ಬೈಕ್ ಗುದ್ದಿದ್ದನ್ನು ಪ್ರಶ್ನಿಸಿದಕ್ಕೆ ಡ್ರ್ಯಾಗರ್‌ನಿಂದ ಅಟ್ಯಾಕ್ ಮಾಡಿದ ಪುಡಿರೌಡಿಗಳು

assault Case

ಆನೇಕಲ್: ಬೆಂಗಳೂರು ಗ್ರಾಮಾಂತರದ ಆನೇಕಲ್‌ನಲ್ಲಿ ಪುಡಿ ರೌಡಿಗಳ (Assault Case) ಅಟ್ಟಹಾಸ ಹೆಚ್ಚಾಗುತ್ತಿದೆ. ಬೈಕ್ ಗುದ್ದಿದ್ದನ್ನು ಪ್ರಶ್ನಿಸಿದಕ್ಕೆ ಡ್ರ್ಯಾಗರ್‌ನಿಂದ ಡೆಡ್ಲಿ ಅಟ್ಯಾಕ್ ನಡೆಸಿದ್ದಾರೆ. ಆನೇಕಲ್ ಬಸ್ ನಿಲ್ದಾಣದ ಮುಂಭಾಗವೇ ಈ ಘಟನೆ ನಡೆದಿದೆ.

ಶನಿವಾರ ರಾತ್ರಿ ಆನೇಕಲ್ ಬಸ್ ನಿಲ್ದಾಣದ ಮುಂಭಾಗ ಆನೇಕಲ್ ಟೌನ್ ನಿವಾಸಿ ಮೋಹನ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಮೋಹನ್‌ ಬೈಕ್‌ನಲ್ಲಿ ಬರುವಾಗ ಅತಿ ವೇಗವಾಗಿ ಬೈಕ್‌ನಲ್ಲಿ ಬಂದ ಪುಡಿರೌಡಿಗಳು ಗುದ್ದಿದ್ದಾರೆ. ಇದನ್ನು ಪ್ರಶ್ನಿಸಿದ ಮೋಹನ್ ಮೇಲೆ ಏಕಾಏಕಿ ಅಟ್ಯಾಕ್ ಮಾಡಿದ್ದಾರೆ.

ತಮ್ಮ ಬಳಿಯಿದ್ದ ಡ್ರ್ಯಾಗರ್ ತೆಗೆದು ಮೋಹನ್‌ಗೆ ಬೀಸಿದ್ದಾರೆ. ಈ ವೇಳೆ ಅಲ್ಲಿದ್ದ ಜನರು ಪುಡಿರೌಡಿಗಳನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಆಗ ಮೋಹನ್ ಸೇರಿದಂತೆ ಅಲ್ಲಿದ್ದ ಜನರ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದು, ಡ್ರ್ಯಾಗರ್‌ನಿಂದ ಸಿಕ್ಕಸಿಕ್ಕವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದೇ ವೇಳೆ ಓರ್ವ ಪುಡಿ ರೌಡಿಯನ್ನು ಹಿಡಿದುಕೊಂಡಿದ್ದಾರೆ. ಮತ್ತೋರ್ವ ಅಲ್ಲಿಂದ ಪರಾರಿ ಆಗಿದ್ದಾನೆ. ಇದೆಲ್ಲವೂ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಗಾಯಗೊಂಡ ಮೋಹನ್‌ಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆನೇಕಲ್ ಭಾಗದಲ್ಲಿ ಕ್ಷುಲ್ಲಕ ಕಾರಣಗಳಿಗೆ ಕೊಲೆ, ಕೊಲೆ ಯತ್ನ ಪ್ರಕರಣಗಳು ನಡೆಯುತ್ತಿದೆ . ಸದ್ಯ ಆನೇಕಲ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಮುಂದುವರಿದ ಸಾವು-ನೋವು; ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ಗುರಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಕೊಂದೇ ಬಿಟ್ಟರು

ಬೆಂಗಳೂರು: ಗುರಾಯಿಸಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಯುವಕನನ್ನು ಕೊಲೆ ಮಾಡಿರುವ ಘಟನೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಯ್ಸಳ ನಗರದ ಮನೋಜ್ (22) ಕೊಲೆಯಾದ ವ್ಯಕ್ತಿ. ಶನಿವಾರ ಮುಂಜಾನೆ 3 ಗಂಟೆಗೆ ಹೊಯ್ಸಳ ನಗರ ಮೂರನೇ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಸದ್ಯ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ (Crime News).

ಘಟನೆ ವಿವರ

ಮನೋಜ್ ಮತ್ತು ಆತನ ಸ್ನೇಹಿತ ಆಂಟೋನಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ವ್ಯಕ್ತಿ ಮನೋಜ್‌ನನ್ನು ಗುರಾಯಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಪರಿಸ್ಥಿತಿ ಕೈ ಮೀರಿ ಆರೋಪಿಗಳು ಮನೋಜ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಆರೋಪಿಗಳು ಚಾಕುವಿನಿಂದ ಮನೋಜ್ ಮತ್ತು ಆಂಟೋನಿಗೆ ಚುಚ್ಚಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮನೋಜ್‌ನನ್ನು ಕೂಡಲೇ ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮನೋಜ್ ಮೃತಪಟ್ಟಿದ್ದಾನೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವ ರಾಮಮೂರ್ತಿನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ʼʼಹೊಯ್ಸಳ ನಗರದ 13 ಕ್ರಾಸ್‌ನಲ್ಲಿ ಮನೋಜ್ ಮತ್ತು ಸ್ನೇಹಿತರೊಂದಿಗೆ ನಡೆದುಕೊಂಡು ಬರುತ್ತಿದ್ದಾಗ ಅದೇ ಏರಿಯಾದ ಹುಡುಗರೊಂದಿಗೆ ಜಗಳ ನಡೆದಿದೆ. ಈ ವೇಳೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಮನೋಜ್ ಸಾವನ್ನಪ್ಪಿದರೆ ಸ್ನೇಹಿತ ಆಂಟೋನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆʼʼ ಎಂದು ಪೊಲೀಸರು ತಿಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version