ಆನೇಕಲ್: ದಾರಿ ಬಿಡುವಂತೆ ಪದೇ ಪದೆ ಹಾರ್ನ್ ಮಾಡಿದನ್ನು ಪ್ರಶ್ನಿಸಿದ್ದಕ್ಕೆ ಚಾಕು ಇರಿದಿರುವ (Assault case) ಘಟನೆ ಬೆಂಗಳೂರು ಹೊರವಲಯ (Bengaluru rural) ಆನೇಕಲ್ ತಾಲೂಕಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ (Surya Nagar Police) ಹೀಲಲಿಗೆ ಗ್ರಾಮದಲ್ಲಿ ನಡೆದಿದೆ.
ಕಿತ್ತಗಾನಹಳ್ಳಿ ಗ್ರಾಮದ ಸುನೀಲ್ ಹಾಗೂ ಕಾರ್ತಿಕ್ ಚಾಕು ಇರಿತದಿಂದ ಗಾಯಗೊಂಡವರು. ಕಿಶೋರ್, ಶ್ರೀಧರ್, ವಾಲೆಮಂಜ, ಹೇಮಂತ್, ಮನೋಜ್, ತುಕಡಿ ಅಲಿಯಾಸ್ ವೆಂಕಟರಾಜು ಎಂಬುವವರು ಹಲ್ಲೆ ನಡೆಸಿದವರು.
ಕಿಶೋರ್ ಎಂಬಾತ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಆಗಿ ಹೊರಬಂದಿದ್ದ. ಕಿಶೋರ್ ಸ್ನೇಹಿತ ಶ್ರೀಧರ್ ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಟಿಟಿ ಚಾಲಕ ಮುಂದೆ ಸಾಗುತ್ತಿದ್ದ ಲಾರಿಗೆ ದಾರಿ ಬಿಡುವಂತೆ ಪದೇ ಪದೆ ಹಾರ್ನ್ ಮಾಡಿದ್ದ. ಟಿಟಿ ವಾಹನದ ಹಿಂದೆ ಬರುತ್ತಿದ್ದ ಬೈಕ್ ಸವಾರ ಅಂಕಿತ್ ಎಂಬಾತ ಇದನ್ನೂ ಪ್ರಶ್ನೆ ಮಾಡಿದ್ದ.
ಇದನ್ನೂ ಓದಿ: Shivamogga News : ಅಧಿಕಾರಿಗಳ ಕಿರುಕುಳ; ಬಸ್‌ನಲ್ಲೇ ವಿಷ ಕುಡಿದು ಒದ್ದಾಡಿದ ಕೆಎಸ್‌ಆರ್‌ಟಿಸಿ ಡ್ರೈವರ್
ಆಗ ಟಿಟಿ ವಾಹನದಲ್ಲಿ ಶ್ರೀಧರ್ ಹೊರ ಬಂದು ಅಂಕಿತ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದ. ಅಂಕಿತ್ ಈ ವಿಚಾರವನ್ನು ಸುನೀಲ್ ಹಾಗೂ ಕಾರ್ತಿಕ್‌ಗೆ ತಿಳಿಸಿದ್ದ. ಅಷ್ಟೊತ್ತಿಗೆ ಶ್ರೀಧರ್ ಕೂಡ ತನ್ನ ಪಟಾಲಂ ಕರೆಸಿಕೊಂಡಿದ್ದ.
ಮೊದಲೇ ಎಣ್ಣೆ ಪಾರ್ಟಿ ಮುಗಿಸಿ ಬಂದಿದ್ದ ಕಿಶೋರ್ ಗ್ಯಾಂಗ್ ಕ್ಯಾತೆ ತೆಗೆದು ಸುನೀಲ್, ಕಾರ್ತಿಕ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಸುನೀಲ್ ಹಾಗೂ ಕಾರ್ತಿಕ್ ಹೊಟ್ಟೆ, ತೊಡೆ ಭಾಗಕ್ಕೆ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ. ಸದ್ಯ ಗಾಯಾಳುಗಳನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ