Site icon Vistara News

ಡೇಟಿಂಗ್‌ ಆ್ಯಪ್‌ ಬೆಡಗಿಗಾಗಿ 6 ಕೋಟಿ ಕಳಕೊಂಡ ಬ್ಯಾಂಕ್‌ ಮ್ಯಾನೇಜರ್‌!

ಡೇಟಿಂಗ್‌ ಆ್ಯಪ್‌

ಬೆಂಗಳೂರು: ಡೇಟಿಂಗ್‌ ಆ್ಯಪ್‌ನಲ್ಲಿ ಯುವತಿಯ ಬಲೆಗೆ ಸಿಲುಕಿದ ಈ “ಬಖ್ರಾʼ ಮ್ಯಾನೇಜರ್‌ ಕಳೆದುಕೊಂಡಿದ್ದು ಬರೋಬ್ಬರಿ ೬ ಕೋಟಿ ರೂಪಾಯಿ! ಬ್ಯಾಂಕ್‌ ಹಣದ ಅವ್ಯವಹಾರದ ಬಗ್ಗೆ ಏನೇನೋ ಕತೆ ಹೇಳುತ್ತಿದ್ದ ಹನುಮಂತನಗರದ ಇಂಡಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಹರಿಶಂಕರ್ ಈಗ ಪೊಲೀಸ್‌ ಟ್ರೀಟ್‌ಮೆಂಟ್‌ ಸಿಕ್ಕಾಗ ನಿಜ ವಿಷಯ ಬಾಯಿ ಬಿಟ್ಟಿದ್ದಾನೆ!

ಬ್ಯಾಂಕ್‌ ಮ್ಯಾನೇಜರ್‌ ಹರಿಶಂಕರ್‌ ಈ ವರ್ಷದ ಮೇ 13ರಿಂದ 19ರವರೆಗೆ ಬ್ಯಾಂಕ್ ಠೇವಣಿದಾರರಾದ ಅನಿತಾ ಎಂಬುವರ ಎಫ್ ಡಿ‌ ಹಣ ಆಧರಿಸಿ ಸುಮಾರು ೬ ಕೋಟಿ ರೂ. ಲೋನ್ ತೆಗೆದಿದ್ದ. ಈ ರೀತಿ ಅಕ್ರಮವಾಗಿ ಸಾಲ ಪಡೆಯಲು ಆತ ಅಸಿಸ್ಟೆಂಟ್ ಮ್ಯಾನೇಜರ್ ಕೌಸಲ್ಯಾ ಹಾಗೂ ಕ್ಲರ್ಕ್ ಮುನಿರಾಜು ಎಂಬುವರನ್ನು ಬಳಸಿಕೊಂಡಿದ್ದ. ಈ ಹಣವನ್ನು ವಂಚಕ ಯುವತಿ ಪಶ್ಚಿಮ ಬಂಗಾಲದ 28 ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಳು. ಯುವತಿಯ ರೋಮ್ಯಾಂಟಿಕ್ ಮಾತಿಗೆ ಮರುಳಾಗಿದ್ದ ಮ್ಯಾನೇಜರ್ ಇಷ್ಟು ದೊಡ್ಡ ಮೊತ್ತವನ್ನು ಆಕೆಯ ಮೇಲೆ ಸುರಿದಿದ್ದ. ಆ ಅಪರಿಚಿತ ಯುವತಿಯಿಂದ ತಾನು ಬಖ್ರಾ ಆದ ಸಂಗತಿಯನ್ನು ಬ್ಯಾಂಕ್‌ ಮ್ಯಾನೇಜರ್‌ ಹರಿಶಂಕರ್ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ.

ಯುವತಿ ವಂಚಿಸಿದ್ದು ಹೇಗೆ?

ಹರಿಶಂಕರ್‌ ಕೆಲವು ತಿಂಗಳ ಹಿಂದೆ ಡೇಟಿಂಗ್‌ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದ. ಅದರ ಮೂಲಕ ಯುವತಿಯೊಬ್ಬಳು ಪರಿಚಯ ಮಾಡಿಕೊಂಡಿದ್ದಳು. ಮೊದಲು ಈತನನ್ನು ಮಾತಿನ ಬಲೆಗೆ ಸಿಲುಕಿಸಿದ್ದ ಯುವತಿ, ಬಳಿಕ ತನ್ನ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ರೋಮಾಂಚನಗೊಳಿಸಿದ್ದಳು. ಚೆಂದದ ಯುವತಿಯ ಮಾದಕ ಫೋಟೊಗಳನ್ನು ನೋಡಿದ್ದ ಚಪಲ ಚನ್ನಿಗರಾಯ ಮ್ಯಾನೇಜರ್‌, ಮೊದಲು ಆಕೆಗೆ ತನ್ನ ೧೨ ಲಕ್ಷ ರೂ. ನೀಡಿದ್ದ. ಬಳಿಕ ಆಕೆ ಇನ್ನೂ ಹಣ ಬೇಕು ಎಂದು ವೈಯಾರದಿಂದ ಹೇಳಿದಾಗ ಕೊಡುತ್ತ ಹೋದ. ತನ್ನಲ್ಲಿ ಹಣ ಇಲ್ಲದಿದ್ದಾಗ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗ್ರಾಹಕಿಯೊಬ್ಬಳ ಎಫ್‌ ಡಿ ಖಾತೆ ಬಳಸಿಕೊಂಡು ೬ ಕೋಟಿ ರೂ. ಸಾಲ ಎತ್ತಿ ಅಷ್ಟೂ ಹಣವನ್ನು ಆಕೆಗೆ ಕಳುಹಿಸಿದ್ದ. ಯುವತಿ ಈತನಿಗೆ ಮೋಡಿ ಮಾಡಿ ಹಂತ ಹಂತವಾಗಿ ಕೋಟಿ ಕೋಟಿ ವಸೂಲಿ ಮಾಡಿದ್ದಳು.

ಮನೆಯಲ್ಲಿ ಪತ್ನಿ, ಮಕ್ಕಳಿದ್ದರೂ ಡೇಟಿಂಗ್‌ ಆ್ಯಪ್‌ನಲ್ಲಿ ಮುಳುಗಿರುತ್ತಿದ್ದ ಮ್ಯಾನೇಜರ್‌ ಹರಿಶಂಕರ್‌ನನ್ನು ಈಗ ಹನುಮಂತನಗರ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 10 ದಿನ ಪೊಲೀಸ್‌ ಕಸ್ಟಡಿಗೆ ಪಡೆದಿದ್ದಾರೆ. ಯುವತಿಯ ಪ್ರೇಮ ಪಾಶಕ್ಕೆ ಸಿಲುಕಿದ್ದ ಈತ ಈಗ ಪೊಲೀಸರ ಆತಿಥ್ಯ ಪಡೆಯುತ್ತಿದ್ದಾನೆ.

ಇದನ್ನೂ ಓದಿ | ಮದ್ಯ ದರದಲ್ಲಿ ಮೋಸ ಖಂಡಿಸಿ Gandhigiri ಗಾಂಧಿ, ಅಂಬೇಡ್ಕರ್ ಪೋಟೊ ಇಟ್ಟು ಪ್ರೊಟೆಸ್ಟ್‌

Exit mobile version