ಆನೇಕಲ್: ಬೆಂಗಳೂರಿನ ಬೀದಿಗಳಲ್ಲಿ ಭಯಾನಕ ವ್ಹೀಲಿಂಗ್ (Bike Wheeling) ಹಾವಳಿ ಹೆಚ್ಚಾಗಿದೆ. ವ್ಹೀಲಿಂಗ್ ಜತೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವತಿಗೆ ಕೀಟಲೆ ಮಾಡಿ ಯುವಕರು ಪುಂಡಾಟ ಮೆರೆದಿದ್ದಾರೆ. ಪುಂಡರ ಹಾವಳಿಗೆ ವಾಹನ ಸವಾರರು ಬೇಸತ್ತು ಹೋಗಿದ್ದಾರೆ.
ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಸಿಕ್ಕಸಿಕ್ಕ ರೋಡ್‌ಗಳಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುವ ಚಟ ಹಲವು ಯುವಕರಲ್ಲಿ ಕಂಡುಬರುತ್ತಿದೆ. ಇದೀಗ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆದ್ದಾರಿಯುದ್ದಕ್ಕೂ ವ್ಹೀಲಿಂಗ್ ಮಾಡಿ ಕಿರಿಕಿರಿ ಮಾಡಿದ್ದಾರೆ. ಮಾತ್ರವಲ್ಲದೇ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕ- ಯುವತಿಯರನ್ನು ಚುಡಾಯಿಸಿರುವುದು ಕಂಡು ಬಂದಿದೆ.
ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಜನ ಯುವಕರ ತಂಡವು ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ಯುವತಿಯನ್ನು ಹಿಂಬಾಲಿಸುತ್ತಾ ಕೀಟಲೆ ಮಾಡಿದ್ದಾರೆ. ಹಲವು ಬಾರಿ ಯುವತಿ ಎಚ್ಚರಿಕೆ ನೀಡಿದರೂ ಯುವಕರು ಹುಚ್ಚಾಟ ಮೆರೆದಿದ್ದಾರೆ. ವ್ಹೀಲಿಂಗ್ ಮಾಡಿ ಇತರೆ ವಾಹನಗಳಿಗೂ ಕಿರಿಕ್ ಮಾಡಿದ್ದಲ್ಲೇ ರಾಜಾರೋಷವಾಗಿ ಹೆದ್ದಾರಿಯಲ್ಲಿ ಯುವತಿಯರನ್ನು ರೇಗಿಸಿದ್ದಾರೆ.
ಇದನ್ನೂ ಓದಿ: Road Accident : ತಿರುವಿನಲ್ಲಿ ಕಂದಕಕ್ಕೆ ಉರುಳಿದ ಬಸ್; ಚಾಲಕ ಸೇರಿ ಮೂವರು ಗಂಭೀರ
ಇತ್ತ ಕಾರು-ಆಟೋ ಚಾಲಕರು ಸೂಚನೆಗೂ ತಲೆ ಕೆಡಿಸಿಕೊಳ್ಳದೆ ಯುವಕರು ಪುಂಡಾಟಿಕೆ ತೋರಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆ ಎದುರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕ ಯುವತಿಗೆ ತೊಂದರೆ ಮಾಡಿದ್ದಾರೆ. ಬಳಿಕ ಯುವತಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳಲು ಶುರು ಮಾಡುತ್ತಿದ್ದಂತೆ ತಾವು ಧರಿಸಿದ್ದ ಶರ್ಟ್‌ನಲ್ಲೇ ಮುಖ ಮುಚ್ಚಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾರೆ.
ಬೈಕ್‌ನಿಂದ ಸ್ಕಿಡ್ ಆಗಿ ಕೆಳಗೆ ಬಿದ್ದ ಸವಾರ ಸಾವು
ಅತಿ ವೇಗ ಚಾಲನೆಯಿಂದ ಅಪಘಾತ ಸಂಭವಿಸಿದ್ದು, ಯುವಕನೊರ್ವ ಮೃತಪಟ್ಟಿದ್ದಾನೆ. ಬೈಕ್‌ನಿಂದ ಸ್ಕಿಡ್ ಆಗಿ ಕೆಳಗೆ ಬಿದ್ದ ಕುಮಾರ್ (30) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಿನ್ನೆ ತಡರಾತ್ರಿ 1.30ಕ್ಕೆ ಬೆಂಗಳೂರಿನ ಬೊಮ್ಮನಹಳ್ಳಿ ಆಕ್ಸ್‌ಫರ್ಡ್ ಕಾಲೇಜು ಮುಂಭಾಗ ಘಟನೆ ನಡೆದಿದೆ.
ಕುಮಾರ್ ಮತ್ತು ನವೀನ್ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್ ಸ್ಕಿಡ್ ಆಗಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಸ್ಥಳದಲ್ಲೇ ಕುಮಾರ್ ಮೃತಪಟ್ಟರೇ ನವೀನ್ ಗಂಭೀರ ಗಾಯಗೊಂಡಿದ್ದಾನೆ. ಸದ್ಯ ನವೀನ್ (20) ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕುಮಾರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಡಿವಾಳ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ