ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬಿಜೆಪಿ ಅಭ್ಯರ್ಥಿ ಪರ ದೇವನಹಳ್ಳಿಯಲ್ಲಿ ನಡೆಸಬೇಕಿದ್ದ ರೋಡ್ ಶೋ ರದ್ದುಪಡಿಸಲಾಗಿದೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ ನೇರವಾಗಿ ಬಿಜೆಪಿ ಅಭ್ಯರ್ಥಿ ಪಿಳ್ಳ ಮುನಿಶಾಮಪ್ಪ ಪರವಾಗಿ ರೋಡ್ ಶೋ ನಡೆಸುವ ಯೋಜನೆ ರೂಪಿಸಲಾಗಿತ್ತು.
4.30ಕ್ಕೆ ವಿಜಯಪುರ ವೃತ್ತದಿಂದ ಆರಂಭಿಸಿ ಸಂಜೆ 5 ಗಂಟೆವರೆಗೂ ರೋಡ್ ಶೋ ನಡೆಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕೂ ಅರ್ಧ ಗಂಟೆ ಮುಂಚಿನಿಂದಲೇ ಧಾರಾಕಾರ ಮಳೆ ಸುರಿಯಲು ಆರಂಭವಾಯಿತು.
ಮಳೆ ಸ್ವಲ್ಪ ಕಡಿಮೆ ಆದ ನಂತರ ರೋಡ್ ಶೋ ಆರಂಭಿಸಬಹುದು ಎಂದು ಬಿಜೆಪಿ ನಾಯಕರು ಸಾಕಷ್ಟು ಹೊತ್ತು ಕಾದರೂ ಮಳೆ ನಿಲ್ಲಲಿಲ್ಲ. ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ, ರೋಡ್ ಶೋ ನಡೆಯಬೇಕಿದ್ದ ರಸ್ತೆಯಲ್ಲಿ ಮಳೆ ನೀರು, ಕೆಸರಿನಿಂದ ತುಂಬಿಹೋಗಿತ್ತು.
ಹಾಗಾಗಿ ರೋಡ್ ಶೋ ರದ್ದುಪಡಿಸುವುದೇ ಸೂಕ್ತ ಎಂದು ನಿರ್ಧಾರ ಮಾಡಲಾಯಿತು. ಈ ವಿಚಾರವನ್ನು ಅಮಿತ್ ಶಾ ಅವರಿಗೆ ತಿಳಿಸಲಾಯಿತು. ಅಮಿತ್ ಶಾ ಅವರೂ ಸ್ಥಳೀಯ ನಾಯಕರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ರೋಡ್ ಶೋ ಆಯೋಜನೆ ಮಾಡಲಾಗುತ್ತದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಈದನ್ನೂ ಓದಿ: Karnataka Election 2023: ರಾಜ್ಯದಲ್ಲಿ ಇಂದು ಅಮಿತ್ ಶಾ, ನಡ್ಡಾ ತುರುಸಿನ ಪ್ರಚಾರ