ಆನೇಕಲ್: 8ನೇ ಕ್ಲಾಸ್ ಹುಡುಗಿಗೆ ಆಕೆಯ ಅಜ್ಜಿಯೇ ಮದುವೆ ಮಾಡಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ (Child Marriage) ನಡೆದಿದೆ. ತಂದೆ-ತಾಯಿಗೆ ತಿಳಿಯದಂತೆ ಬಾಲಕಿಗೆ ಮದುವೆ ಮಾಡಿಸಿ ಕರೆತಂದಿದ್ದಾರೆ. ಸೊಸೆ ಎಲ್ಲಿ ತನ್ನ ಸಂಬಂಧಿಕರ ಕಡೆಯವರಿಗೆ ಕೊಟ್ಟು ಮೊಮ್ಮಗಳನ್ನು ಮದುವೆ ಮಾಡಿಸಿಬಿಡುತ್ತಾಳೋ ಎಂದುಕೊಂಡ ಅತ್ತೆ, ಆತುರದಲ್ಲಿ ಬಾಲಕಿಗೆ ಬಾಲ್ಯ ವಿವಾಹವನ್ನು ಮಾಡಿದ್ದಾರೆ. ಮೊಮ್ಮಗಳನ್ನು ತಮ್ಮ ಸಂಬಂಧಿ ಹುಡುಗನೊಂದಿಗೆ ಮೊಮ್ಮಗಳ ಮದುವೆ ಮಾಡಿಸಿ ಅಜ್ಜಿ ತನ್ನ ಕೊನೆ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ಕಳೆದ 15ರಂದು ಬಾಲಕಿ ಅಜ್ಜಿ ಮನೆಗೆ ಹೋಗಿದ್ದಳು. ಆದರೆ ನಿನ್ನೆ (ಫೆ.16) ಬೆಳಗ್ಗೆ 9 ಗಂಟೆಯಿಂದ ಅಜ್ಜಿ ಮತ್ತು ಮೊಮ್ಮಗಳು ಕಾಣೆಯಾಗಿದ್ದರು. ಆದರೆ ಸಂಜೆ ಹೊತ್ತಿಗೆ ಕೈವಾರದಲ್ಲಿ ಅಪ್ರಾಪ್ತಳಿಗೆ ಮದುವೆ ಮಾಡಿಸಿ, ವರನ ಮನೆಗೆ ಕಳುಹಿಸಿದ್ದಾರೆ. ಬಳಿಕ ಬಾಲಕಿ ತಾಯಿ ಗೀತಮ್ಮರಿಗೆ ಫೋನ್ ಮಾಡಿ ಹೊಸಕೋಟೆ ಬಳಿಯ ಕಾಟೇರಮ್ಮ ದೇವಿ ದೇವಸ್ಥಾನಕ್ಕೆ ಬರುವಂತೆ ಹೇಳಿದ್ದಾರೆ.
ಹೀಗೆ ಹೊಸಕೋಟೆಗೆ ಹೋದಾಗ ವರನ ಮನೆಗೆ ಕರೆಸಿಕೊಂಡು ವಿಷಯವನ್ನು ತಿಳಿಸಿದ್ದಾರೆ. ಈ ವೇಳೆ ಬಾಲಕಿ ತಾಯಿ ಗೀತಮ್ಮ ಕಕ್ಕಾಬಿಕ್ಕಿಯಾಗಿದ್ದಾರೆ. 8ನೇ ತರಗತಿಯಲ್ಲಿ ಓದುತ್ತಿರುವ ತನ್ನ ಮಗಳಿಗೆ ಬಾಲ್ಯ ವಿವಾಹ ಮಾಡಿಸಿದ್ದನ್ನು ವಿರೋಧಿಸಿದ್ದಾರೆ. ಕೂಡಲೇ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಅಪ್ರಾಪ್ತಳಾಗಿರುವ ನನ್ನ ಮಗಳನ್ನು ಪುಸಲಾಯಿಸಿ ಹಲಸಿನಕಾಯಿಪುರ ಗ್ರಾಮದ ವಿನೋದ್ ಕುಮಾರ್ (24) ಎಂಬಾತನೊಟ್ಟಿಗೆ ಕೈವಾರದಲಿನ ಯಲಮ್ಮ ದೇವಾಲಯದಲ್ಲಿ ಮದುವೆ ಮಾಡಿಸಿದ್ದಾರೆ. ಮದುವೆಗೆ ವಿನೋದ್ ಕುಮಾರ್, ತಂದೆ ಮುನಿಯಪ್ಪ, ತಾಯಿ ರತ್ನಮ್ಮ, ವಿನೋದ್ ಕುಮಾರ್ ಅಣ್ಣ ವಿಜಯ್ ಕುಮಾರ್ ಮತ್ತು ಮುನಿಯಪ್ಪ, ವೆಂಕಟಮ್ಮರವರು ಸೇರಿ ಮದುವೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ನನ್ನ ಮಗಳು ಅಪ್ರಾಪ್ತ ವಯಸ್ಕಳೆಂದು ಗೊತ್ತಿದ್ದರೂ ಸಹ ಬಲತ್ಕಾರದ ಮದುವೆ ಮಾಡಿಸಿದ್ದಾರೆ. ಕಾನೂನು ಬಾಹಿರವಾಗಿ ಮದುವೆ ಮಾಡಿಸಿದ್ದು, ಕ್ರಮ ಜರುಗಿಸಬೇಕೆಂದು ಕಿಡಿಕಾರಿದ್ದಾರೆ. ಸದ್ಯ ಬಾಲಕಿಯ ಅಜ್ಜಿ ರಾಜಮ್ಮ, ದೊಡ್ಡಪ್ಪ ಶ್ರೀನಿವಾಸ್, ದೊಡ್ಡಮ್ಮ ವೀಣಾ ಸೇರಿ 9 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ