Site icon Vistara News

Electric shock : ಕತ್ತಲಲ್ಲಿ ಕೆಲಸಕ್ಕೆ ಹೋದವನಿಗೆ ಕರೆಂಟ್‌ ಶಾಕ್‌

Electric shock

ದೇವನಹಳ್ಳಿ: ಶೌಚಾಲಯ ಕಟ್ಟಡ ಕೆಲಸ ಮಾಡುವಾಗ ಕರೆಂಟ್‌ ಶಾಕ್‌ನಿಂದ (Electric shock) ಯುವಕನೊರ್ವ ಮೃತಪಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ವಿಜಯಪುರ ಮೂಲದ ಶ್ರೇಯಸ್ (18) ಮೃತ ದುರ್ದೈವಿ.

ನಿನ್ನೆ ರಾತ್ರಿ ಶೌಚಾಲಯ ಕಟ್ಟಡ ಕೆಲಸ ಮಾಡಲು ಹೋಗಿದ್ದ ಶ್ರೇಯಸ್‌ಗೆ, ಮನೆ ಮುಂದಿದ್ದ ವಿದ್ಯುತ್ ಲೈನ್ ತಾಗಿದೆ. ಈ ವೇಳೆ ಕರೆಂಟ್‌ ಶಾಕ್‌ನಿಂದಾಗಿ ಶ್ರೇಯಸ್‌ ಕುಸಿದು ಬಿದ್ದಿದ್ದಾನೆ. ಘಟನೆ ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೇ ಶ್ರೇಯಾಸ್‌ ಮೃತಪಟ್ಟಿದ್ದಾರೆ.

ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ಅವಘಡದಲ್ಲಿ ಯುವಕ ಮೃತಪಟ್ಟ ಸುದ್ದಿ ಕೇಳಿ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನೆ ಸಂಜೆ ಕೆಲಸಕ್ಕೆಂದು ಶ್ರೇಯಾಸ್‌ನನ್ನು ಕರೆದುಕೊಂಡು ಹೋಗಿದ್ದರು. ಮಹಡಿ ಮೇಲೆ ವಿದ್ಯುತ್ ವೈರ್ ಎಲ್ಲ ಡಿಸ್ಕನೆಕ್ಟ್ ಆಗಿದ್ದರಿಂದ ಈ ಅವಘಡ ಸಂಭವಿಸಿದೆ.

ನಮಗೆ ನಿನ್ನೆ ಸಂಜೆ 7:30ಕ್ಕೆ ಶ್ರೇಯಾಸ್‌ಗೆ ಕರೆಂಟ್‌ ಶಾಕ್‌ ಹೊಡೆದಿದೆ ಎಂದು ತಿಳಿಯಿತು. ಅವಘಡ ನಡೆದಾಗಲೇ ಬೇಗ ಆಸ್ಪತ್ರೆಗೆ ದಾಖಲಿಸಿದ್ದರೆ ಜೀವ ಉಳಿಯುತ್ತಿತ್ತು, ಆದರೆ ಯಾರೊಬ್ಬರು ಕಾಳಜಿ ತೋರದೆ ನಿರ್ಲಕ್ಷ್ಯವಹಿಸಿದ್ದಾರೆ. ಆಸ್ಪತ್ರೆಗೆ ಬಂದಾಗ ಪಲ್ಸ್ ರೇಟ್ ಕಡಿಮೆ ಆಗಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆತಿಲ್ಲ ಎಂದು ಕುಟುಂಬಸ್ಥರು ಅಳಲು ತೊಡಿಕೊಂಡರು.

ಕೆಂಪೇಗೌಡ ಏರ್‌ಪೋರ್ಟ್‌ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

ಹತ್ರಾಸ್‌ ಕಾಲ್ತುಳಿತ- FIRನಲ್ಲಿ ಭೋಲೇ ಬಾಬಾನ ಹೆಸರೇ ಇಲ್ಲ!

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಕಾಲ್ತುಳಿತ(Hathras Stampede)ಕ್ಕೆ ಧಾರ್ಮಿಕ ಕಾರ್ಯಕ್ರಮ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ಮುಖ್ಯ ಸೇವಾಧರ್‌ ದೇವ್‌ಪ್ರಕಾಶ್‌ ಮಧುಕರ್‌ ಮತ್ತು ಇತರೆ ಆಯೋಜಕರ ವಿರುದ್ಧ ಸಿಕಂದ್ರ ರಾವ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ ಸತ್ಸಂಗ ನಡೆಸಿದ್ದ ಭೋಲೇ ಬಾಬಾ(Bhole Baba) ಹೆಸರು ಎಫ್‌ಐಆರ್‌ನಲ್ಲಿ ದಾಖಲಾಗಿಲ್ಲ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 105, 110, 126(2), 223, ಮತ್ತು 238ರ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಈ ಮಧ್ಯೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಉತ್ತರ ಪ್ರದೇಶ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಭೋಲೆ ಬಾಬಾ ಅವರಿಗಾಗಿ ಮೈನ್ಪುರಿ ಜಿಲ್ಲೆಯ ರಾಮ್ ಕುಟೀರ್ ಚಾರಿಟಬಲ್ ಟ್ರಸ್ಟ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತಾದರೂ ಅವರು ಕ್ಯಾಂಪಸ್ ಒಳಗೆ ಕಂಡುಬಂದಿಲ್ಲʼʼ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ತಿಳಿಸಿದರು.

ಇನ್ನು ಭೋಲೆ ಬಾಬಾ ಮೈನ್‌ಪುರಿ ನಗರದ ಹೊರವಲಯದಲ್ಲಿರುವ ಅವರ ಆಶ್ರಮದಲ್ಲಿದ್ದಾರೆ ಎನ್ನಲಾಗಿದ್ದು, ಆಶ್ರಮಕ್ಕೆ ಬಿಗಿ ಬಂದೋಬಸ್ತ್‌ ನೀಡಲಾಗಿದೆ. ಆದರೆ ಮೈನ್‌ಪುರಿಯಲ್ಲಿರುವ ಆಶ್ರಮದ ಬಳಿ ನಿಯೋಜಿಸಲಾದ ಪೊಲೀಸ್ ಅಧಿಕಾರಿಗಳು ಭೋಲೆ ಬಾಬಾ ಆಶ್ರಮದಲ್ಲಿ ಇರುವುದನ್ನು ತಳ್ಳಿಹಾಕಿದ್ದಾರೆ ಮತ್ತು ಮಂಗಳವಾರದ ಘಟನೆಯ ಹಿನ್ನೆಲೆಯಲ್ಲಿ ಆಶ್ರಮದೊಳಗಿನ ಭೋಲೆ ಬಾಬಾ ಅವರ ಅನುಯಾಯಿಗಳ ಸುರಕ್ಷತೆಗಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಮಂಗಳವಾರ ಫುಲ್ರೈ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಸತ್ಸಂಗ’ದಲ್ಲಿ ಸುಮಾರು 2.5 ಲಕ್ಷ ಜನ ಸೇರಿದ್ದರು. ಆದರೆ ಸಂಘಟಕರು ಇದನ್ನು ಮರೆಮಾಚಿದ್ದರು. ಸಂಘಟಕರು ಕೇವಲ 80,000 ಜನ ಭಾಗಿಯಾಗಿದ್ದರು ಎಂದು ಹೇಳಿದ್ದರು. ಹೀಗಾಗಿ ಸತ್ಸಂಗ’ದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಲಕ್ಷಗಟ್ಟಲೆ ಇರುತ್ತದೆ ಎಂಬ ಅಂಶವನ್ನು ಮರೆಮಾಚಿದ್ದಕ್ಕಾಗಿ ಸಂಘಟಕರನ್ನು ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.

ಸತ್ಯಂಗ ಮುಗಿಸಿ ಭೋಲೆ ಬಾಬಾ ಅವರು ಅಪರಾಹ್ನ 3.30ರ ಸುಮಾರಿಗೆ ಸ್ಥಳದಿಂದ ಹೊರಡುವಾಗ ಕಾಲ್ತುಳಿತ ಸಂಭವಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಿದ್ದಾರೆ. ಹತ್ರಾಸ್ ಘಟನೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರಕಾರವು ಎಸ್‌ಐಟಿ ರಚಿಸಿದ್ದಲ್ಲದೇ, ಹೈಕೋರ್ಟ್‌ನ ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಿದೆ. ಹತ್ರಾಸ್‌ನ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳುಗಳನ್ನು ವಿಚಾರಿಸಿದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ”ಈ ದುರಂತ ಅತೀವ ಬೇಸರ ತರಿಸಿದೆ. ಇದೊಂದು ಆಕಸ್ಮಿಕವೋ ಅಥವಾ ದೊಡ್ಡ ಸಂಚಿನ ಭಾಗವೋ ಎಂಬುದು ಗೊತ್ತಾಗಬೇಕಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯಬೇಕಿದೆ. ಸರಕಾರವು ಆಗ್ರಾದ ಎಡಿಜಿ ಅನುಪಮ್‌ ಕುಲಶ್ರೇಷ್ಠ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಹಾಗೆಯೇ ಹೈಕೋರ್ಟ್‌ ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ನಿರ್ಧರಿಸಲಾಗಿದೆ,” ಎಂದು ಮಾಧ್ಯಮಗಳಿಗೆ ವಿವರ ನೀಡಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version