ಆನೇಕಲ್: ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ (Engineering Student) ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಫೇಲ್ ಆದ (Exam Fail) ವಿಚಾರ ಪೋಷಕರಿಗೆ ತಿಳಿಯುತ್ತೆಂದು ಹೆದರಿದ ವಿದ್ಯಾರ್ಥಿ ಜಿಗಣಿ ಕೆರೆಗೆ (Jigani lake) ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಘಟನೆ (Bengaluru rural) ನಡೆದಿದೆ. ಅಮೃತೇಶ್ ಪಾಂಡೆ (21) ಆತ್ಮಹತ್ಯೆ ಮಾಡಿಕೊಂಡವನು.
ಹೇಮಲತಾ ಪಾಂಡೆ, ವಿಜಯ್ ಶಂಕರ್ ಪಾಂಡೆ ದಂಪತಿ ಪುತ್ರ ಅಮೃತೇಶ್ ಪಾಂಡೆ ಮೂಲತಃ ಬಿಹಾರ ಮೂಲದ ಕುಟುಂಬದವರು. ಕಳೆದ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಜಿಗಣಿಗೆ ಬಂದು ನೆಲೆಸಿದ್ದರು. ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಕನಸು ಕಂಡಿದ್ದ ಪೋಷಕರು, ಅದರಂತೆಯೇ ಮೈಸೂರು ರಸ್ತೆಯ ಆರ್.ವಿ ಕಾಲೇಜಿಗೆ ಮಗನನ್ನು ಸೇರಿಸಿದ್ದರು.
ಆರ್.ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗಿ ಬರುತ್ತಿದ್ದ. ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಎರಡು ವಿಷಯದಲ್ಲಿ ಫೇಲ್ ಆಗಿದ್ದ. ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: SSLC Student Missing : ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆದ ಬಾಲಕ ನಾಪತ್ತೆ!
ಲೋಕಸಭೆ ಚುನಾವಣಾಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಫೇಲ್ ಆಗಿರುವ ವಿಚಾರ ತಂದೆಗೆ ತಿಳಿಯುತ್ತೆ ಎಂದು ಹೆದರಿಬಿಟ್ಟಿದ್ದ. ಕಾಲೇಜಿನವರು ಫೋನ್ ಮಾಡುತ್ತಾರೆ ಎಂದು ತಂದೆ ಫೋನ್‌ನಲ್ಲಿ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದ. ಆದರೆ ಇತ್ತ ಅಮೃತೇಶ್ ತಂದೆ ವಿಜಯ್ ಶಂಕರ್ ಆರನೇ ಸೆಮಿಸ್ಟರ್‌ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದಾರೆ. ತಂದೆಯ ಜತೆ ಕಾಲೇಜಿಗೆ ಹೋದರೆ ಫೇಲ್ ಆದ ವಿಚಾರ ತಿಳಿಯುತ್ತೆ. ಸರಿಯಾಗಿ ಕಾಲೇಜಿಗೂ ಹೋಗದೇ ಇರುವುದು ತಿಳಿದು ಬಿಡುತ್ತೆ ಎಂದು ಅಮೃತೇಶ್ ಭಯಗೊಂಡಿದ್ದ.
ಹೀಗಾಗಿ ಮೇ 10ರಂದು ಮನೆಯಿಂದ ಹೊರಟ ಅಮೃತೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇತ್ತ ಆತನಿಗಾಗಿ ಅಮೃತೇಶ್ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಜಿಗಣಿ ಕೆರೆಯಲ್ಲಿ ಅಮೃತೇಶ್ ಮೃತದೇಹವು ತೇಲಿಕೊಂಡು ಬಂದಿದೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಜಿಗಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಮೃತದೇಹವು ಅಮೃತೇಶ್‌ದ್ದು ಎಂದು ತಿಳಿದು ಬಂದಿದೆ. ಸದ್ಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ