ನೆಲಮಂಗಲ: ಇನ್ನೂ ಜಗತ್ತಿನ ಬೆಳಕು ಕಾಣುವ ಮೊದಲೇ ಹೆಣ್ಣು ಮಕ್ಕಳ ಭ್ರೂಣ ಹತ್ಯೆ (Feticide Case) ನಡೆಸುವ ವಿಕೃತ ಕೃತ್ಯಗಳು ಹೆಚ್ಚುತ್ತಿವೆ. ಅದರಲ್ಲೂ ನೆಲಮಂಗಲದ ಆಸ್ಪತ್ರೆಯೊಂದರಲ್ಲಿ (Nelamangala Hospital) ಒಬ್ಬನೇ ವೈದ್ಯ 74 ಭ್ರೂಣಗಳ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಆಸರೆ ಆಸ್ಪತ್ರೆ (Aasare Hospital) ಮಕ್ಕಳ ಕೊಲೆ ಮಾಡುವ ತಾಣವಾಗಿ ಮಾರ್ಪಟ್ಟಿರುವುದು ಸ್ಪಷ್ಟವಾಗಿದೆ.
ಇಡೀ ದೇಶದಲ್ಲಿ ಭ್ರೂಣ ಹತ್ಯೆಗೆ ನಿಷೇಧವಿದೆ, ಅಲ್ಟ್ರಾಸೌಂಡ್ (Ultra sound) ಸೇರಿದಂತೆ ಯಾವುದೇ ತಂತ್ರಜ್ಞಾನಗಳ ಮೂಲಕ ಮಕ್ಕಳ ಲಿಂಗ ಪತ್ತೆ ಹಚ್ಚಿ ಹೆತ್ತವರಿಗೆ ತಿಳಿಸಬಾರದು ಎಂಬ ನಿಯಮವಿದೆ. ಆದರೆ, ಇವುಗಳನ್ನು ಗಾಳಿಗೆ ತೂರಿ ಲಿಂಗಪತ್ತೆಯನ್ನೇ ಪ್ರಧಾನ ಕಾಯಕವಾಗಿ ಮಾಡಿಕೊಂಡು, ಹೆತ್ತವರ ಜತೆ ಸೇರಿ ಭ್ರೂಣ ಹತ್ಯೆ ಮಾಡುವ ಕೆಲಸವನ್ನು ಈ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿರುವ ಈ ಆಸರೆ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 74 ಭ್ರೂಣಗಳ ಹತ್ಯೆ ನಡೆಸಲಾಗಿದೆ ಎಂದು ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಈ ಆಸ್ಪತ್ರೆಗೆ ನೋಟಿಸ್ ನೀಡಿದೆ. ನೋಟಿಸ್ ನೀಡಿದ್ದು ಮಾತ್ರವಲ್ಲದೆ, ಆಸ್ಪತ್ರೆಯಲ್ಲಿ ಅದನ್ನು ಅಂಟಿಸಲಾಗಿದೆ.
ಇಲ್ಲಿನ ಪ್ರಧಾನ ವೈದ್ಯ ಡಾ. ರವಿಕುಮಾರ್ ಅವರೇ ಪ್ರಧಾನ ಆರೋಪಿಯಾಗಿದ್ದು, ಇತರ ವೈದ್ಯರು ಮತ್ತು ಸಿಬ್ಬಂದಿ ಕೂಡಾ ಇದರಲ್ಲಿ ಶಾಮೀಲಾಗಿ ಹೆಣ್ಣು ಭ್ರೂಣ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.
MTPಕಾಯ್ದೆ ಪರವಾನಗಿ ಪಡೆಯದೇ ಬೇಕಾಬಿಟ್ಟಿಯಾಗಿ ಗರ್ಭಪಾತ ಮಾಡಿಸಲಾಗುತ್ತಿದೆ. ಇನ್ನೂ ಆರಂಭಿಕ ಹಂತದಲ್ಲಿರುವ ಭ್ರೂಣವನ್ನು ಸ್ಕ್ಯಾನ್ ಮಾಡುವ ನೆಪದಲ್ಲಿ ಲಿಂಗ ಪತ್ತೆ ಮಾಡಲಾಡುತ್ತದೆ ಎನ್ನಲಾಗಿದೆ. ಮಗುವಿನ ಲಿಂಗವನ್ನು ಹೆತ್ತವರಿಗೆ ತಿಳಿಸುವ ವೈದ್ಯರು ಹೆಣ್ಣು ಮಗು ಬೇಡ ಎಂದರೆ ಅದನ್ನು ಭ್ರೂಣದಲ್ಲೇ ಹತ್ಯೆ ಮಾಡುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್ ಆಸರೆ ಆಸ್ಪತ್ರೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಟೌನ್ ಠಾಣೆಯಲ್ಲಿ ಡಾ. ರವಿಕುಮಾರ್ ವಿರುದ್ಧ ಕೇಸು ದಾಖಲಾಗಿದೆ. ಐಪಿಸಿ ಸೆಕ್ಷನ್ 312, 313, 315, 316ರಡಿ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Female Foeticide: ಬೆಂಗಳೂರು ಗ್ರಾಮಾಂತರದಲ್ಲೂ ಹೆಣ್ಣು ಭ್ರೂಣ ಹತ್ಯೆ ಬೆಳಕಿಗೆ, ಆಸ್ಪತ್ರೆ ಸೀಲ್
ವಿಸ್ತಾರ ನ್ಯೂಸ್ ಮೆಗಾ ರೇಡ್ ವೇಳೆ ತಪ್ಪಿಸಿಕೊಂಡ ಸಿಬ್ಬಂದಿ
ಇಡೀ ರಾಜ್ಯವೇ ಬೆಚ್ಚಿಬೀಳುವ ಈ ಭಯಾನಕ ಕೃತ್ಯದ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಸ್ತಾರ ನ್ಯೂಸ್ ನೆಲಮಂಗಲದ ಆಸರೆ ಆಸ್ಪತ್ರೆಗೆ ಲಗ್ಗೆ ಇಟ್ಟಿತು. ಈ ವೇಳೆ ವೈದ್ಯ ರವಿ ಕುಮಾರ್ ಅವರು ಆಸ್ಪತ್ರೆಯಲ್ಲಿ ಇರಲಿಲ್ಲ. ಉಳಿದ ಸಿಬ್ಬಂದಿಗಳೂ ಅವರು ಮಾತನಾಡಲು ಒಪ್ಪಲಿಲ್ಲ.