ಆನೇಕಲ್: ಇಲ್ಲಿನ ಅತ್ತಿಬೆಲೆ ಗಡಿಭಾಗದಲ್ಲಿ ಪಟಾಕಿ ಮಳಿಗೆಯೊಂದು ಹೊತ್ತಿ (Fire Accident) ಉರಿದಿದೆ. ದೀಪಾವಳಿ ಹಬ್ಬಕ್ಕಾಗಿ ಮಳಿಗೆಯಲ್ಲಿ ಹೆಚ್ಚು ಪಟಾಕಿಗಳನ್ನು ಶೇಖರಣೆ ಮಾಡಲಾಗಿತ್ತು. ಶನಿವಾರ (ಅ.7) ಮಧ್ಯಾಹ್ನ ಏಕಾಏಕಿ ಪಟಾಕಿ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದೆ.
ಈ ಅವಘಡದಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪಟಾಕಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ನಾಪತ್ತೆ ಆಗಿದ್ದಾನೆ ಎನ್ನಲಾಗಿದೆ. ನವೀನ್ ಎಂಬುವವರಿಗೆ ಸೇರಿದ ಪಟಾಕಿ ಮಳಿಗೆ ಇದಾಗಿದ್ದು, ಪಟಾಕಿ ಬಾಕ್ಸ್‌ಗಳನ್ನು ತಂದು ಲಾರಿಯಲ್ಲಿ ಅನ್‌ಲೋಡ್ ಮಾಡುವಾಗ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: Road Accident : ನೈಸ್ ರೋಡಲ್ಲಿ ಸ್ಪೀಡಾಗಿ ಬಂದು ಬೈಕ್ ಸವಾರನಿಗೆ ಗುದ್ದಿದ ಲಾರಿ
ಮಳಿಗೆ ಪಕ್ಕದಲ್ಲಿಯೇ ಇದ್ದ ಗೋದಾಮಿಗೂ ಬೆಂಕಿ ತಗುಲಿದೆ. ಅಕ್ಕ-ಪಕ್ಕದಲ್ಲಿದ್ದ ನಾಲ್ಕೈದು ಅಂಗಡಿಗಳು, ಒಂದು ಕ್ಯಾಂಟರ್ ಸೇರಿದಂತೆ ನಾಲ್ಕೈದು ವಾಹನಗಳು ಸುಟ್ಟು ಭಸ್ಮವಾಗಿವೆ. ಹೆದ್ದಾರಿ ಪಕ್ಕದಲ್ಲಿಯೇ ಪಟಾಕಿ ಮಳಿಗೆ ಇರುವುದರಿಂದ ನೂರಾರು ಜನರು ಜಮಾಯಿಸಿದ್ದಾರೆ.
ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆ ಸಿಬ್ಬಂದಿ ದೌಡಾಯಿಸಿದ್ದಾರೆ. ರಸ್ತೆ ಹಾಗೂ ಟೋಲ್‌ನಲ್ಲಿ ಬರುವ ವಾಹನಗಳನ್ನು ನಿಯಂತ್ರಿಸುತ್ತಿದ್ದಾರೆ. ಅತ್ತಿಬೆಲೆಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಪಟಾಕಿ ಮಳಿಗೆಯಲ್ಲಿ ಬೆಂಕಿ ತೀವ್ರತೆ ಹೆಚ್ಚಾಗುತ್ತಿದ್ದು, ಸಹಾಯಕ್ಕೆ ತಮಿಳುನಾಡು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದಾರೆ. ಒಟ್ಟಾರೆ ಐದು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಸ್ಥಳೀಯ ತಹಸೀಲ್ದಾರ್ ಶಿವಪ್ಪ ಲಮಾಣಿ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ನಾಗೇಶ್ ಭೇಟಿ ನೀಡಿದ್ದಾರೆ. ಘಟನೆ ಕುರಿತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮಳಿಗೆಯಲ್ಲಿ ಕಾರ್ಮಿಕರು ಸಿಲುಕಿರುವ ಶಂಕೆ
ಪಟಾಕಿ ಮಳಿಗೆಯಲ್ಲಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಟಾಕಿ ಅವಘಡ ವಿಷಯ ತಿಳಿಯುತ್ತಿದ್ದಂತೆ ಒಬ್ಬೊಬ್ಬರಾಗಿ ಬಂದು ತಮ್ಮವರು ಕಾಣುತ್ತಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ಮಳಿಗೆಯಲ್ಲಿದ್ದ ಮೂರ್ನಾಲ್ಕು ಕಾರ್ಮಿಕರು ನಾಪತ್ತೆ ಆಗಿರುವುದರಿಂದ ಪಟಾಕಿ ಮಳಿಗೆಯಲ್ಲಿ ಸಜೀವ ದಹನವಾಗಿರುವ ಸಾಧ್ಯತೆ ಇದೆ. ಸ್ಥಳದಲ್ಲಿ ಜಮಾವಣೆಗೊಂಡಿರುವ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ