ಆನೇಕಲ್: ನಿವೇಶನ ಜಾಗದ ವಿಚಾರದಲ್ಲಿ ಉಂಟಾದ ದ್ವೇಷದಿಂದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ (Murder Case) ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಹೆಬ್ಬಗೋಡಿಯಲ್ಲಿ ಘಟನೆ ನಡೆದಿದೆ.
ಹೆಬ್ಬಗೋಡಿ ಪೊಲೀಸ್ ಠಾಣೆ ಹಿಂಭಾಗದ ಪ್ರದೇಶದಲ್ಲಿ ಈ ಕೊಲೆ ನಡೆದಿದ್ದು, ಹೆಬ್ಬಗೋಡಿಯ ರಮೇಶ್ ಎಂಬವರನ್ನು ಕೊಚ್ಚಿ ಕೊಲ್ಲಲಾಗಿದೆ. ನಿನ್ನೆ ರಾತ್ರಿ ಹತ್ತು ಮೂವತ್ತರ ಸಮಯದಲ್ಲಿ ಘಟನೆ ನಡೆದಿದೆ. ರಮೇಶ್ ಮನೆಯ ಎದುರು ಮನೆಯಾತನೇ ಕೊಲೆ ನಡೆಸಿದ್ದಾನೆ.
ಹೆಬ್ಬಗೋಡಿಯ ಜಾಗದಲ್ಲಿ ಮನೆ ಕಟ್ಟುವ ವಿಚಾರಕ್ಕೆ ಆಗಾಗ ರಮೇಶ ಹಾಗೂ ಕೊಲೆ ಆರೋಪಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ಸರ್ಕಾರದಿಂದ ಅಲಾಟ್ ಆಗಿದ್ದ ಜಾಗದಲ್ಲಿ ರಮೇಶ್ ನಿನ್ನೆ ಮನೆಗೆ ಅಡಿಪಾಯ ಹಾಕಿದ್ದರು. ಇದೇ ಜಾಗ ತನಗೆ ಸೇರಬೇಕು ಎಂದು ಎದುರು ಮನೆಯ ಜಗದೀಶ್ ಆಗಾಗ ಗಲಾಟೆ ಮಾಡಿದ್ದ. ಹೆಬ್ಬಗೋಡಿ ನಗರಸಭೆಯಿಂದ ಈ ಜಾಗ ರಮೇಶ್‌ಗೆ ಸೇರಿದ್ದು ಎಂದು ದಾಖಲೆ ನೀಡಲಾಗಿತ್ತು.
ಇದೇ ವಿಚಾರಕ್ಕಾಗಿ ನಿನ್ನೆ ರಾತ್ರಿ ರಮೇಶ್‌ನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ರಾತ್ರಿ 10.30ರ ಸಮಯದಲ್ಲಿ ಮಾರಕಾಸ್ತ್ರಗಳ ಜೊತೆ ಬಂದು ಕೊಲೆ ಮಾಡಿದ ಹಂತಕರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.
ದರೋಡೆಕೋರನಿಗೆ ಪೊಲೀಸ್ ಗುಂಡೇಟು
ಆನೇಕಲ್: ನಟೋರಿಯಸ್ ದರೋಡೆಕೋರನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆಂಧ್ರ ಮೂಲದ ಶೇಕ್ ನಾಮ್ದಾರ್ ಹುಸೇನ್(34) ಗುಂಡೇಟು ತಿಂದ ಖದೀಮನಾಗಿದ್ದು, ರಾಜ್ಯ ಗಡಿಯ ಹೊಸೂರಿನ ಅಡ್ಕೋ ಪೊಲೀಸ್ ಠಾಣೆ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು ಬಿದ್ದಿದೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಪೊಲೀಸರಿಗೆ ಬೇಕಿದ್ದ ಆರೋಪಿಯಾದ ಈತ ಕರ್ನಾಟಕದಲ್ಲಿ 8 ಹಾಗೂ ತಮಿಳುನಾಡಿನಲ್ಲಿ 6 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹೊಸೂರಿನ ಅಡ್ಕೋ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಆರೋಪಿಯನ್ನು ಬಂಧಿಸಿದ್ದರು. ಆರೋಪಿಯ ಮಹಜರ್‌ಗೆ ಕರೆದೊಯ್ದಾಗ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಆತ್ಮರಕ್ಷಣೆಗಾಗಿ ಸಬ್ ಇನ್ಸ್ಪೆಕ್ಟರ್ ವಿನೋದ್‌ರಿಂದ ಫೈರಿಂಗ್ ನಡೆದಿದೆ. ಸಬ್ ಇನ್ಸ್ಪೆಕ್ಟರ್ ವಿನೋದ್ ಹಾಗೂ ಸಿಬ್ಬಂದಿಗಳಾದ ರಾಮಸ್ವಾಮಿ, ವಿಲಿಯರಸುಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.