ಆನೇಕಲ್: ಪೋಲೀಸರ ಪಿಸ್ತೂಲು ಮತ್ತೆ ಸದ್ದು (police encounter) ಮಾಡಿದೆ. ಮಹಿಳೆಯನ್ನು ಅತ್ಯಾಚಾರ ಮಾಡಿ (Physical abuse) ಕೊಲೆಗೈದಿದ್ದ (Murder case) ಮೂವರು ಕಾಮುಕರಲ್ಲಿ ಒಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಮೂವರು ಮಹಿಳೆಯ ಮೃತದೇಹ ಸಿಕ್ಕ ಜಾಗದಲ್ಲಿಯೇ ಇದ್ದು ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದೂ ತಿಳಿದುಬಂದಿದೆ. ಇವರಲ್ಲಿ ಒಬ್ಬಾತ ಮುಗ್ಧನಂತೆ ಮೀಡಿಯಾಗಳಿಗೂ ಬೈಟ್ ಕೊಟ್ಟಿದ್ದ!
ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬ್ಯಾಟರಾಯನದೊಡ್ಡಿ ಮಹಿಳೆ ಮುನಿರತ್ನ(38) ಅವರ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಮಹಿಳೆ ಹಾಗೂ ಆಕೆಯ ಮಗು ಕಾಣದೆ ಇದ್ದಾಗ ಕುಟುಂಬಸ್ಥರಿಂದ ಹುಡುಕಾಟ ನಡೆದಿತ್ತು. ಆ ವೇಳೆ ಆರೋಪಿಗಳೂ ಸೇರಿಕೊಂಡು, ಹುಡುಕಾಡುವ ನಾಟಕವಾಡಿದ್ದರು. ಹುಡುಕಲು ಹೋದ ಕೆಲವೇ ನಿಮಿಷದಲ್ಲಿ ಮಹಿಳೆ ಜೊತೆಯಲ್ಲಿದ್ದ ಮಗುವನ್ನು ಆರೋಪಿ ಕರೆತಂದಿದ್ದ. ನಂತರ ಮಹಿಳೆಯ ಮೃತದೇಹ ದೊರೆತಿತ್ತು.
ಮನೆಯಿಂದ ಹೊರಹೋದ ಮಹಿಳೆಯನ್ನು ನಿರ್ಜನ ಪ್ರದೇಶದಲ್ಲಿ ಕಾಮುಕರು ಅಡ್ಡಗಟ್ಟಿ ಅತ್ಯಾಚಾರ ಎಸಗಿದ್ದಲ್ಲದೆ, ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದುದು ಗೊತ್ತಾಗಿತ್ತು. ಪ್ರಕರಣ ಶೋಧಕ್ಕಾಗಿ ನಾಲ್ಕು ತಂಡಗಳನ್ನು ಪೊಲೀಸರು ರಚನೆ ಮಾಡಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಮೃತ ದೇಹ ಸಿಕ್ಕ ಜಾಗದಲ್ಲಿಯೇ ಯಾರಿಗೂ ಸಂಶಯ ಬರದಂತೆ ಓಡಾಡುತ್ತಿದ್ದ ಆರೋಪಿಗಳು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಮುಂದಾಗಿದ್ದರು. ಮಹಿಳೆ ತಮ್ಮ ಪರಿಚಿತಳೇ ಆಗಿದ್ದು, ಆಕೆಗಾಗಿ ಹುಡುಕಾಡಿದೆವು. ಆದರೆ ಸಿಗಲಿಲ್ಲ. ಒಂಟಿಯಾಗಿದ್ದ ಮಗುವನ್ನು ಕರೆತಂದಿದ್ದೇವೆ ಎಂದು ಇದೀಗ ಆರೋಪಿಯಾಗಿರುವ ಹರೀಶ್ ಎಂಬಾತ ಮಾಧ್ಯಮಗಳಿಗೆ ಬೈಟ್ ನೀಡಿದ್ದ.
ಜಿಗಣಿ ಪೋಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಚಾಣಾಕ್ಷತನದಿಂದ ತನಿಖೆ ನಡೆಸಿದ್ದು, ಅನುಮಾನದ ಮೇಲೆ ಹರೀಶ್‌ನನ್ನು ಪ್ರಶ್ನಿಸಿದ್ದರು. ಕ್ಷಣಕ್ಕೊಂದು ಕಥೆ ಕಟ್ಟುತ್ತಿದ್ದ ಆಸಾಮಿಯ ನಡವಳಿಕೆಯಿಂದ ಇನ್ನಷ್ಟು ಅನುಮಾನ ಮೂಡಿತ್ತು. ಪೊಲೀಸ್ ಭಾಷೆಯಲ್ಲಿ ವಿಚಾರಿಸಿದ ಬಳಿಕ, ಗಾಂಜಾ ಹಾಗೂ ಎಣ್ಣೆ ಮತ್ತಿನಲ್ಲಿ ಮೂವರು ಸೇರಿ ಅತ್ಯಾಚಾರ ಎಸಗಿದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮೂವರನ್ನೂ ಬಂಧಿಸಲಾಗಿದೆ.
ಇಂದು ಬೆಳಗ್ಗೆ ಸ್ಥಳ ಮಹಜರಿಗೆ ಆರೋಪಿಗಳನ್ನು ಕರೆದೊಯ್ದಾಗ ಆರೋಪಿಗಳಲ್ಲಿ ಒಬ್ಬನಾದ ಸೋಮ ಅಲಿಯಾಸ್ ಸೋಮಶೇಖರ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಲ್ಲದೆ ಪೊಲೀಸ್ ಸಿಬ್ಬಂದಿ ಮಾದಪ್ಪ ಎಂಬವರ ಮೇಲೆ ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದ. ಈ ವೇಳೆ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಸೋಮನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಆರೋಪಿಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಸೇರಿಸಲಾಗಿದೆ.