ಆನೇಕಲ್: ಬನ್ನೇರುಘಟ್ಟ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ (Road Accident) ಸಂಭವಿಸಿದೆ. ಅಡ್ಡ ಬಂದ ಬೈಕ್ ಸವಾರನ ತಪ್ಪಿಸಲು ಹೋಗಿ ಬಿಎಂಟಿಸಿ ಬಸ್‌ವೊಂದು ಎರಡು ಬೈಕ್, ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ವಾಹನಗಳಿಗೆ ಡಿಕ್ಕಿ ಹೊಡೆದ ಬಳಿಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಸ್ ಗುದ್ದಿದೆ. ಬೆಂಗಳೂರು ಗ್ರಾಮಾಂತರದ ಬನ್ನೇರುಘಟ್ಟ ಮುಖ್ಯ ರಸ್ತೆ ಪಾರಿಜಾತ ಆಸ್ಪತ್ರೆ ಮುಂಭಾಗ ಅಪಘಾತ ನಡೆದಿದೆ. ಅಪಘಾತದಲ್ಲಿ ಓರ್ವ ಮೃತಪಟ್ಟರೆ, ಮೂವರಿಗೆ ಗಂಭೀರ ಗಾಯವಾಗಿದೆ. ಆಂಧ್ರಪ್ರದೇಶ ಮೂಲದ ಪ್ರಸಾದ್ ರಾವ್ (60) ಮೃತ ದುರ್ದೈವಿ.
ಓರ್ವ ಪಾದಚಾರಿ, ಇಬ್ಬರು ಬೈಕ್ ಸವಾರರು ಮತ್ತು ಓರ್ವ ಬಸ್ಸಿನ ಪ್ರಯಾಣಿಕನಿಗೆ ಗಾಯವಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಬಸ್, ಬೈಕ್ ಮತ್ತು ಟಾಟಾ ಏಸ್ ವಾಹನ ತೆರವು ಮಾಡಿದ್ದಾರೆ.
ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹಾವೇರಿಯಲ್ಲಿ ಯುವಕ ನೀರುಪಾಲು
ಹಸು ಮೈ ತೊಳೆಯಲು ನದಿಗೆ ಇಳಿದ ಯುವಕ ನೀರು ಪಾಲಾಗಿದ್ದಾನೆ. ಹಾವೇರಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗಾಳೆಪ್ಪ ಮೇಲಿನಮನಿ (25) ಮೃತ ದುರ್ದೈವಿ. ಮಲೆನಾಡಲ್ಲಿ ಮಳೆ ಹೆಚ್ಚಾದ ಪರಿಣಾಮ ವರದಾ ನದಿಯಲ್ಲಿ ನೀರು ಹೆಚ್ಚಾಗಿತ್ತು. ತುಂಬಿ ಹರಿಯುತ್ತಿದ್ದ ನೀರಲ್ಲಿ ಇಳಿದ ಗಾಳೆಪ್ಪ ನೀರುಪಾಲಾಗಿದ್ದಾನೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಮೃತದೇಹವನ್ನು ಹುಡುಕಾಡುತ್ತಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಡ್ಯದಲ್ಲಿ ಜವರಾಯನ ಅಟ್ಟಹಾಸ; ಕಾರಿಗೆ ಲಾರಿ ಡಿಕ್ಕಿಯಾಗಿ ಮೂವರು ಸಾವು
ಮಂಡ್ಯ : ಕಾರು ಮತ್ತು ಲಾರಿ ನಡುವೆ (Road Accident) ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಮೂವರ ಸಾವಾಗಿದೆ. ಮಂಡ್ಯದ ನಾಗಮಂಗಲ ಹಾಗೂ ಪಾಂಡವಪುರ ಹೆದ್ದಾರಿಯ ಶ್ರೀ ರಾಮನಹಳ್ಳಿ ಬಳಿ ಅಪಘಾತ ನಡೆದಿದೆ.
ಚಿತ್ರದುರ್ಗ ಮೂಲದ ಯುವರಾಜ್, ತಿಪ್ಪೇಸ್ವಾಮಿ ಹಾಗೂ ಸಿದ್ದೇಶ್ ಮೃತ ದುರ್ದೈವಿಗಳು. ಈ ಮೂವರು ಕಾರಿನಲ್ಲಿ ಬರುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡಿದಿದೆ. ಡಿಕ್ಕಿ ರಭಸಕ್ಕೆ ರಸ್ತೆಯಿಂದ ಪಕ್ಕಕ್ಕೆ ಸರಿದು, ಕಂಬವೊಂದಕ್ಕೆ ಗುದ್ದಿದೆ. ಕಾರಿನ ಎಡಭಾಗವು ಸಂಪೂರ್ಣ ಛಿದ್ರಛಿದ್ರಗೊಂಡಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ