Site icon Vistara News

Road Accident : ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಹೆದ್ದಾರಿಗೆ ಹಾರಿದ ಕೆಎಸ್‌ಆರ್‌ಟಿಸಿ ಬಸ್; ಬೈಕ್‌ನಿಂದ ಎಗರಿ ಬಿದ್ದ ಬಾಲಕ ಸಾವು

Road Accident

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಅಡಕಮಾರನಹಳ್ಳಿಯ ತುಮಕೂರು ರಸ್ತೆ ಮಾದಾವರ ಫ್ಲೈಓವರ್ ಬಳಿ ಭಾರೀ ದುರಂತವೊಂದು (Road Accident) ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಹೆದ್ದಾರಿಯ ಪಕ್ಕದ ರಸ್ತೆಗೆ ಹಾರಿದ ಘಟನೆ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್‌ವೊಂದು ಪ್ರಯಾಣಿಕರನ್ನು ಹೊತ್ತು ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿತ್ತು. ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ಬಂದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು, ಹೆದ್ದಾರಿಯ ತಡೆಗೋಡೆಯನ್ನು ಹಾರಿ ಪಕ್ಕದ ರಸ್ತೆಗೆ ಬಂದು ನಿಂತಿತ್ತು. ಇದು 40 ಅಡಿ ಎತ್ತರದ ಫ್ಲೈಓವರ್‌ನಲ್ಲಿ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಒಂದು ವೇಳೆ ಬಸ್‌ ಏನಾದರೂ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರೆ, ಪ್ರಯಾಣಿಕರ ಜೀವಕ್ಕೆ ಕುತ್ತು ಬರುತ್ತಿತ್ತು. ಮಾತ್ರವಲ್ಲದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರು ಪ್ರಾಣವನ್ನೇ ಕಳೆದುಕೊಳ್ಳಬೇಕಿತ್ತು.

Road accidents in Bengaluru Vijayanagar

ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯವಾಗಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಚಾಲಕ ನಿರ್ವಾಹಕ ಸೇರಿದಂತೆ ಆರು ಮಂದಿಗೆ ಗಾಯವಾಗಿದ್ದು, ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಕ್ಕದ ರಸ್ತೆಗೆ ಹಾರಿದ್ದ ಬಸ್‌ ಅನ್ನು ತೆರವುಗೊಳಿಸುತ್ತಿದ್ದಾರೆ.

Road accidents in Bengaluru Vijayanagar

ಇದನ್ನೂ ಓದಿ: Robbery Case : ಕ್ಯಾಂಟರ್‌ ಅಡ್ಡಗಟ್ಟಿದ ದರೋಡೆಕೋರರು; ಖಾರದ ಪುಡಿ ಎರಚಿ 32 ಲಕ್ಷ ರೂ. ದೋಚಿ ಪರಾರಿ

ವಿಜಯನಗರದಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ; ಎಗರಿ ಬಿದ್ದ ಬಾಲಕ ಸಾವು

ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿ ರಭಸಕ್ಕೆ ಬೈಕ್ ಹಿಂದೆ ಕುಳಿತಿದ್ದ ಬಾಲಕ ಎಗರಿ ಬಿದ್ದು ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೂವರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ವಿಜಯನಗರದ ಹರಪನಹಳ್ಳಿ – ಕೂಡ್ಲಿಗಿ ರಸ್ತೆಯ ಹರಾಳು ಕ್ರಾಸ್ ಬಳಿ ಘಟನೆ ನಡೆದಿದೆ. ಕೂಡ್ಲಿಗಿ ತಾಲೂಕಿನ ನಿವಾಸಿ ಮಹಮದ್ (13) ಮೃತ ದುರ್ದೈವಿ.

ಮಹಮದ್‌ ತಂದೆ ಅಸ್ಲಾಂ ಭಾಷಾ ಅವರು ಕೆಎಸ್‌ಆರ್‌ಸಿಟಿ ಬಸ್‌ ಓವರ್ ಟೆಕ್ ಮಾಡಲು ಹೋಗಿದ್ದಾರೆ. ಈ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ರೇವಣಸಿದ್ದಪ್ಪ ಎಂಬುವವರ ಬೈಕ್‌ಗೆ ಗುದ್ದಿದ್ದಾರೆ. ಪರಿಣಾಮ ಡಿಕ್ಕಿ ರಭಸಕ್ಕೆ ಹಿಂಬದಿ ಕುಳಿತಿದ್ದ ಮಹಮದ್‌ ಹಾರಿ ಬಿದ್ದು ಮೃತಪಟ್ಟಿದ್ದಾನೆ. ಅಸ್ಲಾಂ ಭಾಷಾ, ಮತ್ತೊಬ್ಬ ಪುತ್ರ ಮಹಮದ್ ಫರಾನ್ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆದರೆ ಮಹಮದ್‌ ತಾಯಿ ಬಸ್ ಚಾಲಕನನ್ನು ದೂರಿದ್ದಾರೆ. ಬಸ್ ಸ್ಪೀಡ್ ಆಗಿ ಬಂದಾಗ ಬೈಕ್ ಬ್ಯಾಲೆನ್ಸ್ ತಪ್ಪಿ ಮತ್ತೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಬಸ್‌ ಮಗನಿಗೂ ಡಿಕ್ಕಿ ಹೊಡೆದಿದೆ. ನನ್ನ ಮಗನ ಸಾವಿಗೆ ಬಸ್ ಚಾಲಕ ಶಿವಕುಮಾರ್ ಕೂಡಾ ಕಾರಣ ಎಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version