Site icon Vistara News

Student Death : ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ; ಕಾಲೇಜು ಕಿರುಕುಳಕ್ಕೆ ಬೇಸತ್ತಳೇ?

Student Death

ಆನೇಕಲ್: ಎಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ (Student Death) ಮೃತಪಟ್ಟಿದ್ದಾಳೆ. ಕಾಲೇಜು ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ (Self Harming) ಶವ ಪತ್ತೆಯಾಗಿದೆ. ಬೆಂಗಳೂರು ಕಾಲೇಜ್ ಆಫ್ ಎಂಜಿನಿಯರಿಂಗ್‌ ಮತ್ತು ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತ (18) ಮೃತ ದುರ್ದೈವಿ.

ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆಯಲ್ಲಿ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ ಕಾಲೇಜು ಹಾಸ್ಟೆಲ್‌ನಲ್ಲಿ ಇದ್ದಳು. ನಿನ್ನೆ ಗುರುವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ.

ಕಾಲೇಜಿನವರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆಡಳಿತ ಮಂಡಳಿ ಸಾಕಷ್ಟು ದಿನಗಳಿಂದ ಕಿರುಕುಳ ನೀಡುತ್ತಿದ್ದರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಸಾವು ಖಂಡಿಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಕ್ಷಿಸಲು ಹೋದ ವಿದ್ಯಾರ್ಥಿನಿಗೆ ಎಚ್‌ಓಡಿ ಬೈಗುಳ

ಇನ್ನೂ ಪಕ್ಕದ ರೂಮಿನ ವಿದ್ಯಾರ್ಥಿನಿ ಪ್ರಗತಿ ಎಂಬಾಕೆ ಬಾಗಿಲು ತೆರೆದು ನೋಡಿದಾಗ ಹರ್ಷಿತಾ ನೇಣಿಗೆ ಶರಣಾಗಿದ್ದು ಕಂಡಿದೆ. ಕೊಠಡಿಯ ಬಾಗಿಲು ತೆರೆದು ರಕ್ಷಣೆ ಮಾಡಲು ಪ್ರಗತಿ ಮುಂದಾಗಿದ್ದಕ್ಕೆ, ಎಚ್‌ಓಡಿ ಭಾರತಿ ಎಂಬುವವರು ಕೊಠಡಿ ಬಾಗಿಲನ್ನು ತೆರೆದಿದ್ದು ಯಾಕೆ ಎಂದು ಪ್ರಶ್ನೆ ಮಾಡಿ ಬೈದಿದ್ದಾರೆ. ರಕ್ಷಣೆ ಮಾಡಲು ಮುಂದಾಗಿದ್ದೆ ತಪ್ಪಾ ಎಂದು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟಿಸಿದ್ದಾರೆ. ಹರ್ಷಿತಾ ಮೃತಪಟ್ಟಾಗ ರಕ್ಷಣೆಗೆ ಹಾಸ್ಟೆಲ್‌ನಲ್ಲಿ ಯಾರು ಇರಲಿಲ್ಲ. ವಾರ್ಡನ್, ಆಯಾ ಯಾರು ಹಾಸ್ಟೆಲ್‌ನಲ್ಲಿ ಇರಲಿಲ್ಲ. ಹಾಸ್ಟೆಲ್ ಆಡಳಿತ ವ್ಯವಸ್ಥೆ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಇದನ್ನೂ ಓದಿ: Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್‌ ಶಾಕ್‌ನಿಂದ ಸಾವು

ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ, ಪೋಷಕರ ಪ್ರತಿಭಟನೆ; ಟಾಪರ್‌ಗಳೇ ಸಾಯ್ತಿರೋದ್ಯಾಕೆ?

ಬೆಂಗಳೂರು: ರಾಜಧಾನಿಯ (Bengaluru) ಪ್ರತಿಷ್ಠಿತ ಪಿಇಎಸ್‌ ಎಂಜಿನಿಯರಿಂಗ್‌ (PES university) ಕಾಲೇಜಿನ ವಿದ್ಯಾರ್ಥಿ ರಾಹುಲ್‌ ಆತ್ಮಹತ್ಯೆಯೊಂದಿಗೆ, ಈ ಕಾಲೇಜಿನಲ್ಲಿ ಒಂದು ವರ್ಷದ ಅಂತರದಲ್ಲಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ (Student Self harming) ಮಾಡಿಕೊಂಡಂತಾಗಿದೆ. ಇವು ನಾಲ್ಕೂ ಕೂಡ ವಿಚಿತ್ರ ಸಾಮ್ಯತೆ ಹೊಂದಿವೆ. ನಾಲ್ವರೂ ಪಿಇಎಸ್‌ ಕಟ್ಟಡದಿಂದಲೇ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಎಲ್ಲರೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು (Engineering Students) ಹಾಗೂ ಅಭ್ಯಾಸದಲ್ಲಿ ಟಾಪರ್‌ಗಳೇ (Toppers) ಆಗಿದ್ದಾರೆ.

ಇತ್ತ, ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ಆಡಳಿತ ಮಂಡಳಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಒಂದು ವರ್ಷದಲ್ಲಿ 4 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಪರಿಸ್ಥಿತಿಯ ಗಂಭೀರತೆಯನ್ನು ಪೊಲೀಸರ ಹಾಗೂ ಸರ್ಕಾರದ ಗಮನಕ್ಕೆ ತರಲು ಪಿಇಎಸ್ ಯೂನಿವರ್ಸಿಟಿ ವಿರುದ್ಧ ಮೇ 18ಕ್ಕೆ ಪ್ರತಿಭಟನೆ ಪೋಷಕರಿಂದ ಫ್ರೀಡ್ಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಒಂದೇ ವರ್ಷದ ಅಂತರದಲ್ಲಿ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಮೂವರೂ ಒಂದೇ ಕಟ್ಟಡದ, 6ನೇ ಅಂತಸ್ತಿನಿಂದಲೇ ಬಿದ್ದು ಮೃತಪಟ್ಟಿದ್ದಾರೆ. 2023ರ ಜುಲೈನಲ್ಲಿ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜಿನಲ್ಲಿ ಆದಿತ್ಯ ಪ್ರಭು ಎಂಬಾತ ಜೀವಹಾನಿ ಮಾಡಿಕೊಂಡಿದ್ದ. ಇದರ ನಂತರ, ಎಲೆಕ್ಟ್ರಾನಿಕ್‌ ಸಿಟಿಯ ಪಿಇಎಸ್‌ ಯೂನಿವರ್ಸಿಟಿ ಕಟ್ಟಡದಲ್ಲಿ ದುರಂತಗಳು ಸಂಭವಿಸಿವೆ. 2023ರ ಅಕ್ಟೋಬರ್‌ನಲ್ಲಿ ‌ಸೂರ್ಯ (21), 2024ರ ಜನವರಿ 29ರಂದು ವಿಗ್ನೇಶ್ (20), ನಿನ್ನೆ ರಾಹುಲ್ (21) ಸುಸೈಡ್‌ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಿಂದ ಇವುಗಳ ತನಿಖೆ ನಡೆಯುತ್ತಿದೆ.

ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಟಾಪರ್ಸ್ ಆಗಿದ್ದು, ಇನ್ನಷ್ಟು ಅಂಕ ಗಳಿಸುವಂತೆ ಒತ್ತಡಕ್ಕೊಳಗಾಗಿರಬಹುದು ಎಂದು ಶಂಕಿಸಲಾಗಿದೆ. ಈ ಆತ್ಮಹತ್ಯೆ ಸರಣಿಯ ಬಗ್ಗೆ ಆಕ್ರೋಶ ಹೆಚ್ಚಾಗಿದ್ದು, ಪ್ರತಿಷ್ಠಿತ ಕಾಲೇಜಿನ ವಿರುದ್ಧ ಕೆಲ ಪೋಷಕರು ತಿರುಗಿ ಬಿದ್ದಿದ್ದಾರೆ.

ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಆಕ್ರೋಶ ಕಂಡುಬಂದಿದೆ. ಈ ಕಾಲೇಜಿನಲ್ಲಿ ಏನಾಗುತ್ತಿದೆ, ಇಷ್ಟು ಆತ್ಮಹತ್ಯೆಗಳು ಸಂಭವಿಸಿದರೂ ಕಾರಣ ಯಾಕೆ ಪತ್ತೆಯಾಗುತ್ತಿಲ್ಲ, ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ಹಲವರು, ಸೂಸೈಡ್ ಪ್ರಕರಣಗಳ ಹಿಂದಿನ ರಹಸ್ಯ ಭೇದಿಸಲು ಒತ್ತಾಯಿಸಿದ್ದಾರೆ.

ಈ ಹಿಂದೆ, ಪಿಇಎಸ್ ಯೂನಿವರ್ಸಿಟಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಯ ಕುರಿತು ಏಪ್ರಿಲ್‌ನಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಪತ್ರ ಬರೆದಿತ್ತು. ವಿದ್ಯಾರ್ಥಿಗಳ ಸರಣಿ ಸಾವಿನ ಬಗ್ಗೆ ತನಿಖೆ ನಡೆಸಿ, ತಡೆಗಟ್ಟಲು ಸೂಕ್ತ ಕ್ರಮವಹಿಸಲು ಕೇಂದ್ರ ಸಚಿವಾಲಯ ಸೂಚನೆ ನೀಡಿತ್ತು. 2024 ಏಪ್ರಿಲ್ 1ರಂದು ಕೇಂದ್ರ ಶಿಕ್ಷಣ ಸಚಿವಾಲಯ ಪತ್ರ ಬರೆದ ಒಂದು ತಿಂಗಳಲ್ಲೇ ಮತ್ತೊಬ್ಬ ವಿದ್ಯಾರ್ಥಿಯ ಸಾವು ಸಂಭವಿಸಿದೆ.

ಮೇ 15ರಂದು ಕರಸಾಲ ರಾಹುಲ್‌ ಎಂಬ ವಿದ್ಯಾರ್ಥಿ ರಾಜಧಾನಿಯ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ (Electronic city) ಪಿಇಎಸ್ ಯೂನಿವರ್ಸಿಟಿಯ ಕಟ್ಟಡದಿಂದ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಪರೀಕ್ಷೆಗೆ (Exam) ತಡವಾಗಿ ಬಂದಿದ್ದಕ್ಕಾಗಿ ನಿಂದಿಸಿದ್ದರಿಂದ ನೊಂದ ಈತ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈತ ಮೂಲತಃ ಆಂಧ್ರಪ್ರದೇಶದ ಕರ್ನೂಲಿನ ಕುಟುಂಬದ ವಿಧ್ಯಾರ್ಥಿ. ಈತ ಬಿಇ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದು, ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ.

ರಾಹುಲ್ ತನ್ನ ತಾಯಿಯೊಂದಿಗೆ ಕ್ಯಾಂಪಸ್‌ನಿಂದ 4 ಕಿಮೀ ದೂರದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪರೀಕ್ಷೆ 8.30ಕ್ಕೆ ಆರಂಭವಾಗಲಿದ್ದ ಕಾರಣ 7.30ರ ಸುಮಾರಿಗೆ ಮನೆಯಿಂದ ಹೊರಟಿದ್ದ. ಆತನ ತಾಯಿ ಕಾಲೇಜು ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪರೀಕ್ಷೆಗೆ ತಡವಾಗಿ ಬಂದ ಕಾರಣ ಪ್ರವೇಶ ನಿರಾಕರಿಸಲಾಗಿತ್ತು. ಅಧ್ಯಯನದಲ್ಲಿ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದ ರಾಹುಲ್, ಇದರಿಂದ ನೊಂದಿದ್ದ ಎನ್ನಲಾಗಿದೆ. ನಂತರ ಸ್ವಲ್ಪ ಹೊತ್ತಿನ ಬಳಿಕ ಕಾಲೇಜಿನ ಐದನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿದ್ದಾರೆ.‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version