Site icon Vistara News

Suspicious Death : ಲಾಡ್ಜ್‌ನಲ್ಲಿ ತಂಗಿದ್ದ ವ್ಯಕ್ತಿ ರಕ್ತಕಾರಿ ಸಾವು; ರೂಮಿನಲ್ಲಿ ಕೊಳೆಯುತ್ತಿತ್ತು ಶವ

Suspicious Death

ದೊಡ್ಡಬಳ್ಳಾಪುರ: ಲಾಡ್ಜ್‌ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದ (Suspicious Death) ರೀತಿಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ನಗರದ ನ್ಯೂ ಸಂಚಿಕೆ ಲಾಡ್ಜ್‌ನಲ್ಲಿ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಹಿಂದೂಪುರ ಮೂಲದ ಮಸ್ತಾನ್ (50) ಮೃತ ದುರ್ದೈವಿ.

ಮಸ್ತಾನ್‌ ಎರಡು ದಿನಗಳ ಹಿಂದೆ ಲಾಡ್ಜ್‌ಗೆ ಬಂದು ರೂಂ ಪಡೆದಿದ್ದರು. ಆದರೆ ರೂಂ ಪಡೆದು ಎರಡು ದಿನಗಳು ಕಳೆದರೂ ಹೊರಗಡೆ ಬಾರದ ಹಿನ್ನೆಲೆಯಲ್ಲಿ ಸಿಬ್ಬಂದಿ ಬಾಗಿಲು ತೆಗೆದು ನೋಡಿದ್ದಾರೆ. ಈ ವೇಳೆ ಮಲಗಿದ್ದಲೇ ಮಸ್ತಾನ್‌ ಬಾಯಲ್ಲಿ ರಕ್ತ ಸುರಿದು ಮೃತಪಟ್ಟಿದ್ದಾರೆ.

ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ದೊಡ್ಡಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Assault Case : ಮಗನ ಜತೆ ಜಗಳವಾಡಿದ್ದಕ್ಕೆ ಸಿಟ್ಟು; ಬಾಲಕನಿಗೆ ಕಾಲಿನಿಂದ ಜಾಡಿಸಿ ಒದ್ದು ಕ್ರೌರ್ಯ ಮರೆದ ತಂದೆ!

ಮದುವೆಯಾದ 20 ದಿನಕ್ಕೆ ನವವಿವಾಹಿತೆ ಅನುಮಾನಾಸ್ಪದ ಸಾವು

ಆನೇಕಲ್: ಮದುವೆಗಾಗಿ ಹಾಕಿಸಿಕೊಂಡಿದ್ದ ಮೆಹಂದಿ ಕೈಯಿಂದ ಹಳಸಿ ಹೋಗುವ ಮುನ್ನವೇ ಯುವತಿಯೊಬ್ಬಳು ಉಸಿರು ಚೆಲ್ಲಿದ್ದಾಳೆ. ಅನುಮಾನಾಸ್ಪದ ರೀತಿಯಲ್ಲಿ (Suspicious Death) ನವವಿವಾಹಿತೆ ಮೃತಪಟ್ಟಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ (Self Harming) ಶವ ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರದ ಕೋಟೆ ಬೀದಿಯಲ್ಲಿ ಘಟನೆ ನಡೆದಿದೆ. ಶಬಾನಾ (20) ಮೃತ ದುರ್ದೈವಿ.

ಶಬಾನಾ ಕಳೆದ 20 ದಿನಗಳ ಹಿಂದಷ್ಟೇ ಶಹಬಾಜ್(24) ಎಂಬಾತನ ಜತೆಗೆ ವಿವಾಹವಾಗಿದ್ದಳು. ಆದರೆ ನಿನ್ನೆ ಬುಧವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಶಬಾನಾಳ ಶವ ಪತ್ತೆಯಾಗಿದೆ.

ಪತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಕೆರೆಯಲ್ಲಿ ತೇಲುತ್ತಿತ್ತು ಯುವಕನ ಶವ

ಮೈಸೂರು: ಕೆರೆಯಲ್ಲಿ ಯುವಕನೊಬ್ಬನ ಶವವೊಂದು ತೇಲಿ (Dead Body Found) ಬಂದಿದೆ. ಮೈಸೂರಿನ ಉದ್ಬೂರು ಗ್ರಾಮದ ದೊಡ್ಡ ಕೆರೆಯಲ್ಲಿ ಶವ ಪತ್ತೆಯಾಗಿದೆ. ಉದ್ಬೂರು ಗ್ರಾಮದ ಕೆಂಪಚೌಡ (25) ಮೃತ ದುರ್ದೈವಿ.

ದೊಡ್ಡ ಕೆರೆಯಲ್ಲಿ ಶವ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಜಯಪುರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಕೆರೆಯಲ್ಲಿ ಬಿದ್ದಿದ್ದ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮದ್ಯ ಸೇವಿಸಿ ಕೆರೆಗೆ ಬಿದ್ದಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಜಯಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಕೊಲೆಯೋ ಅಥವಾ ಆಕಸ್ಮಿಕವೋ, ಆತ್ಮಹತ್ಯೆಯೋ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version