ಆನೇಕಲ್: ಮದುವೆಗಾಗಿ ಹಾಕಿಸಿಕೊಂಡಿದ್ದ ಮೆಹಂದಿ ಕೈಯಿಂದ ಹಳಸಿ ಹೋಗುವ ಮುನ್ನವೇ ಯುವತಿಯೊಬ್ಬಳು ಉಸಿರು ಚೆಲ್ಲಿದ್ದಾಳೆ. ಅನುಮಾನಾಸ್ಪದ ರೀತಿಯಲ್ಲಿ (Suspicious Death) ನವವಿವಾಹಿತೆ ಮೃತಪಟ್ಟಿದ್ದಾಳೆ. ನೇಣು ಬಿಗಿದ ಸ್ಥಿತಿಯಲ್ಲಿ (Self Harming) ಶವ ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರದ ಕೋಟೆ ಬೀದಿಯಲ್ಲಿ ಘಟನೆ ನಡೆದಿದೆ. ಶಬಾನಾ (20) ಮೃತ ದುರ್ದೈವಿ.
ಶಬಾನಾ ಕಳೆದ 20 ದಿನಗಳ ಹಿಂದಷ್ಟೇ ಶಹಬಾಜ್(24) ಎಂಬಾತನ ಜತೆಗೆ ವಿವಾಹವಾಗಿದ್ದಳು. ಆದರೆ ನಿನ್ನೆ ಬುಧವಾರ ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಶಬಾನಾಳ ಶವ ಪತ್ತೆಯಾಗಿದೆ.
ಪತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸರ್ಜಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಗಂಡನ ಚಿತ್ರಹಿಂಸೆಯಿಂದಲೇ ಮಗಳು ಸತ್ತಿದ್ದು
ಕಳೆದ ತಿಂಗಳು 23ರಂದು ಮಗಳ ಮದುವೆಯಾಗಿತ್ತು. ಗಂಡನ ಚಿತ್ರಹಿಂಸೆಯಿಂದಲೇ ಮಗಳು ಸತ್ತಿದ್ದಾಳೆ ಎಂದು ತಂದೆ ಸನಾಹುಲ್ಲಾ ಆಕ್ರೋಶ ಹೊರಹಾಕಿದರು. ಕುರಿಗಳನ್ನು ಮಾರಾಟ ಮಾಡಿ ಮಗಳ ಮದುವೆ ಮಾಡಿದ್ದೆ. ಸುಮಾರು ಎಂಟು ಲಕ್ಷ ಖರ್ಚು ಮಾಡಿ ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು. ಒಂದು ಲಕ್ಷ ವರದಕ್ಷಿಣೆ ಹಣ ಹಾಗೂ ಒಡವೆ, ಮನೆಗೆ ಬೇಕಾದ ವಸ್ತುಗಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾದ ಇಪ್ಪತ್ತೈದೇ ದಿನಕ್ಕೆ ಮಗಳು ಹೆಣವಾಗಿದ್ದಾಳೆ. ಗಂಡನೇ ಹೊಡೆದು ಕೊಲೆ ಮಾಡಿ ಬಳಿಕ ನೇಣು ಹಾಕಿದ್ದಾನೆ ಎಂದು ಆರೋಪಿಸಿದ್ದರು. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಸರ್ಜಾಪುರ ಪೊಲೀಸ್ ಠಾಣೆ ಮುಂದೆ ಮೃತಳ ತಂದೆ ಕಣ್ಣೀರು ಹಾಕಿದರು.
ಇದನ್ನೂ ಓದಿ: Assault Case : ಮಗನ ಜತೆ ಜಗಳವಾಡಿದ್ದಕ್ಕೆ ಸಿಟ್ಟು; ಬಾಲಕನಿಗೆ ಕಾಲಿನಿಂದ ಜಾಡಿಸಿ ಒದ್ದು ಕ್ರೌರ್ಯ ಮರೆದ ತಂದೆ!
ಕೆರೆಯಲ್ಲಿ ತೇಲುತ್ತಿತ್ತು ಯುವಕನ ಶವ
ಮೈಸೂರು: ಕೆರೆಯಲ್ಲಿ ಯುವಕನೊಬ್ಬನ ಶವವೊಂದು ತೇಲಿ (Dead Body Found) ಬಂದಿದೆ. ಮೈಸೂರಿನ ಉದ್ಬೂರು ಗ್ರಾಮದ ದೊಡ್ಡ ಕೆರೆಯಲ್ಲಿ ಶವ ಪತ್ತೆಯಾಗಿದೆ. ಉದ್ಬೂರು ಗ್ರಾಮದ ಕೆಂಪಚೌಡ (25) ಮೃತ ದುರ್ದೈವಿ.
ದೊಡ್ಡ ಕೆರೆಯಲ್ಲಿ ಶವ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಜಯಪುರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಕೆರೆಯಲ್ಲಿ ಬಿದ್ದಿದ್ದ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮದ್ಯ ಸೇವಿಸಿ ಕೆರೆಗೆ ಬಿದ್ದಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಜಯಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಕೊಲೆಯೋ ಅಥವಾ ಆಕಸ್ಮಿಕವೋ, ಆತ್ಮಹತ್ಯೆಯೋ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
3 ವರ್ಷಗಳ ಹಿಂದಿನ ಉದ್ಯಮಿ ಕೊಲೆಗೆ ಟ್ವಿಸ್ಟ್; ಕೊಲೆ ಮಾಡಿಸಿದವಳೇ ಹೆಂಡತಿ!
ಜಿಮ್ ಟ್ರೈನರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಸಂಚು ರೂಪಿಸಿ ತನ್ನ ಪತಿಯನ್ನೇ ಕೊಲೆ(Murder case) ಮಾಡಿದ ಘಟನೆಯ ಹಿಂದಿನ ಕತೆ ಕುತೂಹಲಕರವಾಗಿದೆ. ಮೂರು ವರ್ಷಗಳ ಹಿಂದೆ ಹರಿಯಾಣದ ಪಾಣಿಪತ್‌ನಲ್ಲಿ ಕೊಲೆ ನಡೆದಿತ್ತು. ಇದೀಗ ಈ ಘಟನೆಯ ಸತ್ಯಾಂಶ ಬೆಳಕಿಗೆ ಬಂದಿದೆ.
ಹರಿಯಾಣದಲ್ಲಿ ಪಾಣಿಪತ್‌ನಲ್ಲಿ ಡಿಸೆಂಬರ್ 15, 2021ರಂದು ಉದ್ಯಮಿಯೊಬ್ಬರನ್ನು ಅವರ ಮನೆಯಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗಿತ್ತು. ವಿನೋದ್ ಭರಾರ ಕೊಲೆಯಾದ ವ್ಯಕ್ತಿ, ಶೂಟ್ ಮಾಡಿದ ಟ್ರಕ್ ಚಾಲಕ ದೇವ್ ಸುನರ್ ಎನ್ನಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದರು. ಆರೋಪಿ ಕೂಡ ಜೈಲಿನಲ್ಲಿದ್ದ. ಆದರೆ ಇದೀಗ ಪೊಲೀಸ್ ಅಧಿಕಾರಿಗಳ ಮೊಬೈಲ್‌ಗೆ ವಾಟ್ಸಾಪ್ ಸಂದೇಶವೊಂದು ಬಂದಿದ್ದು, ವಿನೋದ್ ಅವರಿಗೆ ಬಹಳ ಹತ್ತಿರದಲ್ಲಿ ಸಂಬಂಧವಿರುವ ವ್ಯಕ್ತಿ ಅವರ ಕೊಲೆಗೆ ಸಂಚು ರೂಪಿಸಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ಮಾಡುವಂತೆ ಮನವಿ ಮಾಡಲಾಗಿತ್ತು. ಪೊಲೀಸರು ಈ ಸಂದೇಶದ ಬಗ್ಗೆ ಮಾಹಿತಿ ಕಲೆಹಾಕಿದಾಗ ಈ ಸಂದೇಶ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವಿನೋದ್ ಅವರ ಸಹೋದರ ಪ್ರಮೋದ್ ಎಂಬಾತ ಕಳುಹಿಸಿರುವುದಾಗಿ ತಿಳಿದು ಬಂತು.
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಪ್ರಕರಣದ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ವೆಸ್ಟಿಗೇಶನ್ ಏಜೆನ್ಸಿಗೆ ಈ ಪ್ರಕರಣದ ತನಿಖೆಯನ್ನು ವಹಿಸಲಾಯಿತು. ಆಗ ತನಿಖೆಯ ವೇಳೆ, ಕೊಲೆ ಮಾಡಿದ ಆರೋಪಿ ದೇವ್ ಸುನರ್‌ಗೂ ಕೊಲೆಯಾದ ವಿನೋದ್ ಅವರಿಗೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಆರೋಪಿ ದೇವ್, ಜಿಮ್ ಟ್ರೈನರ್ ಸುಮಿತ್ ಎಂಬಾತನಿಗೆ ಹತ್ತಿರದವನಾಗಿದ್ದ. ವಿನೋದ್ ಭರಾರ ಅವರ ಪತ್ನಿ ನಿಧಿ, ಜಿಮ್ ಟ್ರೈನರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ತನಿಖೆಯ ವೇಳೆ ತಿಳಿದುಬಂತು.
ಈ ಬಗ್ಗೆ ವಿಚಾರಣೆ ನಡೆಸಿದಾಗ ನಿಧಿ ಅವರು ತಮ್ಮ ಮಗಳ ಜೊತೆ ಆಗಾಗ ಜಿಮ್‌ಗೆ ಭೇಟಿ ನೀಡುತ್ತಿದ್ದರು. ಅಲ್ಲಿ ಜಿಮ್ ಟ್ರೈನರ್ ಸುಮಿತ್‌ನನ್ನು ಭೇಟಿಯಾದ ನಿಧಿ ಆತನೊಂದಿಗೆ ಸಲುಗೆ ಬೆಳೆದು ಸಂಬಂಧದಲ್ಲಿದ್ದರು. ಈ ವಿಚಾರ ತಿಳಿದ ವಿನೋದ್ ಅವರು ಆತನಿಂದ ದೂರವಿರುವಂತೆ ಆಗಾಗ ಮನೆಯಲ್ಲಿ ಜಗಳ ಮಾಡುತ್ತಿದ್ದರು. ಹೀಗಾಗಿ ನಿಧಿ ಮತ್ತು ಸುಮಿತ್ ಸೇರಿ ವಿನೋದ್ ಅವರ ಕೊಲೆಗೆ ಸಂಚು ರೂಪಿಸಿದರು.
ಅದಕ್ಕಾಗಿ ಸುಮಿತ್ ಪಂಜಾಬ್‌ನ ಟ್ರಕ್ ಚಾಲಕ ದೇವ್ ಸುನಾರ್‌ನನ್ನು ಈ ಕೆಲಸಕ್ಕೆ ಸಂಪರ್ಕಿಸಿ ಆತನಿಗೆ 10 ಲಕ್ಷ ರೂ. ನೀಡಿ ಜನವರಿ 2, 2021ರಂದು ದೇವ್ ವಿನೋದ್ ಅವರ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಆದರೆ ಈ ಅಪಘಾತದಲ್ಲಿ ವಿನೋದ್ ಗಂಭೀರವಾಗಿ ಗಾಯಗೊಂಡರೂ ಬದುಕುಳಿದಿದ್ದರು. ದೇವ್ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ವಿನೋದ್ ಮನೆಗೆ ಭೇಟಿ ನೀಡಿದ್ದಾನೆ. ಆಗ ವಿನೋದ್ ಇದಕ್ಕೆ ಒಪ್ಪದಿದ್ದಾಗ ಅವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಮೊದಲು ಕತೆ ಕಟ್ಟಲಾಗಿತ್ತು. ಆದರೆ ಆಳವಾದ ತನಿಖೆ ನಡೆಸಿದಾಗ ಇದು ಕಟ್ಟು ಕತೆ. ದೇವ್ ಅಪಘಾತ ಮಾಡಿ ಉದ್ಯಮಿಯನ್ನು ಆಕ್ಸಿಡೆಂಟ್ ಮಾಡಿ ಕೊಲ್ಲಲು ಯತ್ನಿಸಿದ್ದ. ಅದು ವಿಫಲವಾದಾಗ ಗುಂಡಿಕ್ಕಿ ಕೊಂದ ಎನ್ನುವುದು ಖಚಿತವಾಯಿತು.
ಪತಿ ಕೊಲೆಯಾದ ಬಳಿಕ ನಿಧಿ ಮಕ್ಕಳನ್ನು ಆಸ್ಟ್ರೇಲಿಯಾದಲ್ಲಿರುವ ವಿನೋದ್ ಸಹೋದರ ಪ್ರಮೋದ್ ಬಳಿಗೆ ಕಳುಹಿಸಿ ಸುಮಿತ್ ಜೊತೆ ಸುತ್ತಾಡಲು ಶುರು ಮಾಡಿದ್ದಳು. ಇದೀಗ ಇವರಿಬ್ಬರು ತಮ್ಮ ತಪ್ಪನ್ನು ಒಪ್ಪಿಕೊಂಡು ಜೈಲು ಪಾಲಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ