ಬೆಂಗಳೂರು: ಗುರುತು ಸಿಗಬಾರೆಂದು ಮುಸುಕುಧಾರಿ ಕಳ್ಳರು (Theft Case) ಅರೆಬೆತ್ತಲಾಗಿ ಮಾರಕಾಸ್ತ್ರಗಳನ್ನು ಹಿಡಿದು ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಚಂದಾಪುರದ ಹೆಡ್ ಮಾಸ್ಟರ್ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.
ಕಳೆದ ರಾತ್ರಿ ಒಂದು ಗಂಟೆಯ ಸುಮಾರಿಗೆ ಎಂಟ್ರಿ ಕೊಟ್ಟ ಈ ಕಳ್ಳರು ತಲೆಗೆ ಟೋಪಿ, ಮುಖಕ್ಕೆ ಬಟ್ಟೆ ಸುತ್ತಿಕೊಂಡು, ಚಡ್ಡಿ ಮಾತ್ರವನ್ನೇ ಧರಿಸಿ ಅರೆಬೆತ್ತಲೆಯಾಗಿ ಬಂದಿದ್ದರು. ಇಬ್ಬರು ನಟೋರಿಯಸ್ ಖದೀಮರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು, ಶಬ್ಧ ಆಗಬಾರದೆಂದು ಕೈಯಲ್ಲಿ ಚಪ್ಪಲಿ ಹಿಡಿದು ನುಗ್ಗಿದ್ದಾರೆ.
ಇದನ್ನೂ ಓದಿ: Karnataka Weather : ದಿನವಿಡೀ ಮರೆಯಾಗುವ ಸೂರ್ಯ; ಇನ್ನೆರಡು ದಿನ ಚಳಿ ಜತೆ ಮಳೆ
ಮನೆಯ ಗೇಟ್ ತೆರೆದು ಕಳ್ಳತನಕ್ಕೆ ಯತ್ನಿಸಲು ಮುಂದಾಗಿದ್ದಾರೆ. ಮನೆ ಗೇಟು ಸದ್ದಾಗುತ್ತಿದ್ದಂತೆ ಮಾಲೀಕ ಎಚ್ಚೆತ್ತುಕೊಂಡು ಹೊರಗಿನ ಲೈಟ್ ಅನ್ ಮಾಡಿ ನೋಡಿದ್ದಾರೆ. ಈ ವೇಳೆ ಮುಸುಕುಧಾರಿಗಳನ್ನು ಕಂಡು ಮನೆಯ ಮಾಲೀಕ ಕಿರುಚಾಡುತ್ತಿದ್ದಂತೆ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬಾಗಿಲು ಮುರಿದು ಕಳ್ಳತನ
ಇದಕ್ಕೂ ಮೊದಲು ರಾಮಕೃಷ್ಣ ಎಂಬುವವರ ಮನೆಯಲ್ಲಿ ಕೈ ಚಳಕ ತೋರಿ ಬಂದಿದ್ದರು. ರಾಮಕೃಷ್ಣ ಅವರು ಕುಟುಂಬ ಸಮೇತ ಮಂತ್ರಾಲಯ ದರ್ಶನಕ್ಕೆ ಹೋಗಿದ್ದರು. ಹೆಡ್ ಮಾಸ್ಟರ್ ಲೇಔಟ್‌ನ ಆರನೇ ಕ್ರಾಸ್‌ನಲ್ಲಿದ್ದ ಇವರ ಮನೆಯ ಬಾಗಿಲಿಗೆ ಬೀಗ ಹಾಕಿದ್ದನ್ನು ಕಂಡೊಡನೆ ಕೈಚಳಕ ತೋರಲು ಮುಂದಾಗಿದ್ದರು.
ಹೊಂಚು ಹಾಕಿ ಖದೀಮರು ಮನೆಯ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಇಪ್ಪತ್ತು ಸಾವಿರ ನಗದು ಕದ್ದಿದ್ದರು. ಅಷ್ಟಕ್ಕೆ ಸುಮ್ಮನಾಗದೇ ಇನ್ನಷ್ಟು ಮನೆಗಳಿಗೆ ಕನ್ನ ಹಾಕಲು ಮುಂದಾಗಿದ್ದರು. ಹೆಡ್ ಮಾಸ್ಟರ್ ಲೇಔಟ್ ಮತ್ತೊಂದು ಮನೆಗೆ ಕನ್ನ ಹಾಕಲು ಹೋದಾಗ ಮಾಲೀಕ ಎಚ್ಚರಗೊಂಡು ಕೂಗಾಡಿದಾಗ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ