Site icon Vistara News

Live murder | ಗಂಡನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವು

ಸಾವು

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಪತಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅರ್ಪಿತ ಮೃತ ಮಹಿಳೆಯಾಗಿದ್ದಾರೆ. ಪಿಲ್ಲಗುಂಪೆ ಕೈಗಾರಿಕಾ ಪ್ರದೇಶ ಅಂಗಡಿ ಬಳಿ ಗಂಡ ರಮೇಶ್, ಅರ್ಪಿತಾಗೆ ಶನಿವಾರ ಬಹಳ ಕ್ರೂರವಾಗಿ ಮನಸೋ ಇಚ್ಛೆ ಚಾಕುವಿನಿಂದ ಹತ್ತಾರು ಬಾರಿ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಇರಿದು ಕಲ್ಲಿನಿಂದ ಹಲ್ಲೆ ಮಾಡಿ, ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈತ ಕೊಲೆ ಮಾಡುವ ದೃಶ್ಯಗಳನ್ನು ಯಾರೋ ಲೈವ್‌ ಆಗಿ ಸೆರೆ ಹಿಡಿದಿದ್ದರು. ಬಳಿಕ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಹೆಂಡತಿಗೆ ಇರಿದು ಅತ್ಮಹತ್ಯೆಗೆ ಯತ್ನಿಸಿದ್ದ ಗಂಡ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಳೆದ ಏಳು ವರ್ಷಗಳ ಹಿಂದೆ ಅರ್ಪಿತಾ ಹಾಗೂ ರಮೇಶ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಎರಡು ವರ್ಷದ ಹಿಂದೆ ಜಗಳಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಅರ್ಪಿತ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಕಳೆದ ವಾರ ಊರಿನ ಹಿರಿಯರು ನ್ಯಾಯ ಪಂಚಾಯತಿ ಮಾಡಿ ಒಟ್ಟಾಗಿರುವಂತೆ ತಿಳಿಸಿದ್ದರು.

ಶನಿವಾರ ಏಕಾಏಕಿ ಮಾತನಾಡಬೇಕೆಂದು ರಮೇಶ್ ಪತ್ನಿ ಅರ್ಪಿತಾಳನ್ನು ಅಂಗಡಿಗೆ ಕರೆದುಕೊಂಡು ಹೋಗಿ ಅಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಆಕೆಯ ಕತ್ತು ಹಾಗು ಹೊಟ್ಟೆಭಾಗಕ್ಕೆ ಚಾಕು ಇರಿದು ಕಲ್ಲಿನಿಂದ ತಲೆಗೆ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸೂಲಿಬೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಮಳವಳ್ಳಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ

Exit mobile version